ದೇಶದ ಶ್ರೀಮಂತರಿಗೆ ಸಂಪತ್ತಿನ ತೆರಿಗೆ ವಿಧಿಸುವುದು ಅಗತ್ಯ
ಕೊರೋನಾ ವೈರಸ್ ಮಹಾಮಾರಿಯಿಂದ ದೇಶದ ಶೇ.40 ಬಡಜನರಿಗೆ ಕೆಲಸವಿಲ್ಲದಂತಾಗಿದೆ. ಹಾಗಾಗಿ ಶ್ರೀಮಂತರ ಮೇಲೆ ಸಂಪತ್ತಿನ ತೆರಿಗೆ ವಿಧಿಸುವುದರ ಮೂಲಕ ಬಡವರಿಗೆ ಹಂಚಬೇಕು ಎಂದು ಹಿರಿಯ ವಕೀಲರಾದ ಬಿ.ಜಿ. ಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.11): ಹೆಂಡ, ಕುರಿ-ಕೋಳಿ ಸಾಲ ಬೇಡ, ಹೋಬಳಿಗೊಂದು ವಸತಿ ಶಾಲೆ ಕೊಡಿ ಎಂದು ಪ್ರೊ. ಬಿ.ಕೃಷ್ಣಪ್ಪನವರು ಹೋರಾಟ ನಡೆಸಿದರು ಎಂದು ಉಪನ್ಯಾಸಕರಾದ ಡಾ. ಸೋಮಶೇಖರ್ ಶಿಮೊಗ್ಗಿ ಅವರು ಹೇಳಿದರು.
ನಗರದ ಡಿಎಸ್‌ಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ಪ್ರೊ. ಬಿ.ಕೃಷ್ಣಪ್ಪನವರ 82ನೇ ಜನ್ಮದಿನದ ಪ್ರಯುಕ್ತ ಕೊರೋನಾ ಎದುರಿಸಲು ದೇಶದ ಶೇ.1 ಅತೀ ಶ್ರೀಮಂತರ ಮೇಲೆ ಶೇ.2 ಸಂಪತ್ತು ತೆರಿಗೆ ವಿಧಿಸುವ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ನೆಲದ ದಲಿತರಿಗೆ ಉಳಲು ಭೂಮಿ, ನೆಲೆಸಲು ಸೂರು, ಸಮಾಜದ ಮುಖ್ಯ ವಾಹಿನಿಗೆ ದಲಿತರು ಬರಲು, ವಿದ್ಯಾವಂತರಾಗಲು ಹೋಬಳಿಗೊಂದು ವಸತಿ ಶಾಲೆಯನ್ನು ಮಂಜೂರು ಮಾಡಿ. ಹೆಂಡ, ಕುರಿ-ಕೋಳಿ ಸಾಲ ಕೊಟ್ಟು ಕಾಯಂ ಸಾಲಗರಾರನ್ನಾಗಿ ಮಾಡಬೇಡಿ ಎಂದು ಪ್ರೊ. ಬಿ.ಕೃಷ್ಣಪ್ಪನವರು ಹೇಳುತ್ತಿದ್ದರು ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲರಾದ ಬಿ.ಜಿ. ಶಿವಮೂರ್ತಿ, ಕೊರೋನಾ ವೈರಸ್ ಮಹಾಮಾರಿಯಿಂದ ದೇಶದ ಶೇ.40 ಬಡಜನರಿಗೆ ಕೆಲಸವಿಲ್ಲದಂತಾಗಿದೆ. ಹಾಗಾಗಿ ಶ್ರೀಮಂತರ ಮೇಲೆ ಸಂಪತ್ತಿನ ತೆರಿಗೆ ವಿಧಿಸುವುದರ ಮೂಲಕ ಸಂಗ್ರಹವಾದ ಹಣದಿಂದ ದೇಶದ ಕೊರೊನಾದಿಂದ ನೊಂದ ಬಡವರಿಗೆ ಕೇಂದ್ರ ಸರ್ಕಾರ ನೆರವಾಗುವುದರ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು ನಿಭಾಯಿಸಬೇಕೆಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಪ್ರಧಾನ ಸಂಚಾಲಕರಾದ ಟಿ.ಎಚ್. ಹಾಲೇಶಪ್ಪ ವಹಿಸಿದ್ದರು, ಸಭೆಯಲ್ಲಿ ಜಿಲ್ಲಾ ಸಂ. ಸಂಚಾಲಕರಾದ ರೇವಪ್ಪ ಹೊಸಕೊಪ್ಪ, ಪಳಲಿರಾಜ್, ಮಂಜುನಾಥ್ ಎಂ., ಎಂ.ಆರ್. ಶಿವಕುಮಾರ್, ಎ.ಡಿ. ಆನಂದ್, ಜಗ್ಗು, ರಥನ್ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.