60 ರೂ. ತಲುಪಿದ ಎಳನೀರು ದರ: ಪೂರೈಕೆ ಕೊರತೆಯಿಂದ ವ್ಯಾಪಾರಿಗಳು ಕಂಗಾಲು
ಬಿರು ಬೇಸಗೆಯ ಈ ದಿನಗಳಲ್ಲಿ ಕರಾವಳಿಯಲ್ಲಿ ದಾಹ ತಣಿಸುವ ಎಳನೀರು( ಬೊಂಡ) ಆವಕ ಹಾಗೂ ಬೆಲೆಯಲ್ಲಿ ಬಹಳ ತುಟ್ಟಿಯಾಗಿದೆ.
ಮಂಗಳೂರು (ಮೇ.19): ಬಿರು ಬೇಸಗೆಯ ಈ ದಿನಗಳಲ್ಲಿ ಕರಾವಳಿಯಲ್ಲಿ ದಾಹ ತಣಿಸುವ ಎಳನೀರು( ಬೊಂಡ) ಆವಕ ಹಾಗೂ ಬೆಲೆಯಲ್ಲಿ ಬಹಳ ತುಟ್ಟಿಯಾಗಿದೆ. ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಈಗ ಬೊಂಡದ ತೀವ್ರ ಕೊರತೆ ತಲೆದೋರಿದ್ದು, ಒಂದು ಬೊಂಡಕ್ಕೆ 50 ರು. ನಿಂದ 60 ರು. ವರೆಗೆ ಬೆಲೆ ಏರಿಕೆಯಾಗಿದೆ. ಮಂಗಳೂರು ಮಾತ್ರವಲ್ಲ ಗ್ರಾಮಾಂತರಗಳಲ್ಲೂ ಬೊಂಡ ಸಿಗುತ್ತಿಲ್ಲ. ಸಣ್ಣಪುಟ್ಟ ಬೊಂಡದ ಅಂಗಡಿಗಳು ಬೊಂಡ ಇಲ್ಲದೆ ಬಾಗಿಲು ಹಾಕಿವೆ. ಕೆಲವು ಅಂಡಿಗಳು ಇದ್ದರೂ ಪೂರೈಕೆಯಾಗುವ ಬೆರಳೆಣಿಕೆ ಬೊಂಡ ಕ್ಷಣ ಮಾತ್ರದಲ್ಲಿ ಖಾಲಿಯಾಗುತ್ತದೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಬೊಂಡಕ್ಕೆ ಸಾಕಷ್ಟು ಹುಡುಕಾಟ ನಡೆಸುವ ಸನ್ನಿವೇಶ ಎದುರಾಗಿದೆ.
ಹೊರಗಿನ ಬೊಂಡ ಪೂರೈಕೆ ಕೊರತೆ: ಕರಾವಳಿಗೆ ಹಾಸನ, ಚಿಕ್ಕಮಗಳೂರು, ಕೋಲಾರ ಮತ್ತಿತರ ಕಡೆಗಳಿಂದ ಬೊಂಡ ಪೂರೈಕೆಯಾಗುತ್ತಿದೆ. ದಿನಂಪ್ರತಿ 10-15ಕ್ಕೂ ಅಧಿಕ ಟೆಂಪೋ, ಪಿಕಪ್, ಟ್ರಕ್‌ಗಳಲ್ಲಿ ಇಲ್ಲಿಗೆ ಬೊಂಡ ಪೂರೈಕೆಯಾಗುತ್ತಿದೆ. ಇದಲ್ಲದೆ ಸ್ಥಳೀಯವಾಗಿಯೂ ಬೊಂಡ ಪೂರೈಕೆ ಇದೆ. ಈ ಬಾರಿ ಬೊಂಡ ಫಸಲು ಮಳೆ ಇಲ್ಲದ ಕಾರಣಕ್ಕೆ ಭಾರಿ ಇಳಿಮುಖಗೊಂಡಿದ್ದು, ಈಗ ಬೇಸಗೆಯ ಸನ್ನಿವೇಶದಲ್ಲೂ ಬೊಂಡ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿ ಬಾರದೆ ತುಂಬ ವರ್ಷ ಆಯಿತು. ಬೊಂಡ ಪೂರೈಸಿದರೂ ಅದು ಸಣ್ಣ ಗಾತ್ರದಲ್ಲಿ ಇರುತ್ತದೆ. ಈಗ ಸಾಗಾಟ ವೆಚ್ಚವೇ ದುಬಾರಿಯಾದ ಕಾರಣ ಸಣ್ಣ ಬೊಂಡವಾದರೂ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುವುದು ಅನಿವಾರ್ಯ ಎನ್ನುತ್ತಾರೆ ಮಣ್ಣಗುಡ್ಡೆಯ ಬೊಂಡ ಮಾರಾಟಗಾರರೊಬ್ಬರು.
ನಾವು ತಲಪಾಡಿಯಿಂದ ಬೊಂಡ ತರಿಸುತ್ತಿದ್ದೇವೆ. ಇದು ಊರಿನ ಬೊಂಡವಾದರೂ ಎಲ್ಲವೂ ದೊಡ್ಡ ಸಹಜ ಗಾತ್ರದಲ್ಲಿ ಸಿಗುತ್ತಿಲ್ಲ. ಉತ್ಪಾದಕರೂ 40 ರಿಂದ 45 ರು. ವರೆಗೆ ದರ ಪಡೆಯುತ್ತಾರೆ. ಆಸ್ಪತ್ರೆ, ಸಮಾರಂಭಗಳಿಗೆ, ದೇವಸ್ಥಾನಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಬೊಂಡ ಪೂರೈಕೆ ಇಲ್ಲ. ಬೊಂಡ ಜ್ಯೂಸ್‌ಗೂ ಬೇಕಾದಷ್ಟು ಸಿಗುತ್ತಿಲ್ಲ. ಬೊಂಡದ ಕೊರತೆ ನೀಗಬೇಕಾದರೆ ಮಳೆಗಾಲ ಬರಬೇಕು ಎನ್ನುತ್ತಾರೆ ಕರಂಗಲ್ಪಾಡಿಯ ಬೊಂಡ ವ್ಯಾಪಾರಿಯ ಅಭಿಪ್ರಾಯ. ಮಂಗಳೂರಿನಲ್ಲಿ ಮಾಮೂಲು ಬೊಂಡಕ್ಕೆ 50 ರು., ಕೆಂದಾಳಿ ಬೊಂಡಕ್ಕೆ 60 ರು. ದರ ಇದೆ. ಕಳೆದ ಒಂದು ತಿಂಗಳಿಂದ ದರದಲ್ಲಿ ಈ ಏರಿಕೆ ಉಂಟಾಗಿದೆ ಎನ್ನುತ್ತಾರೆ ಮಾರಾಟಗಾರ ಉರ್ವಮಾರುಕಟ್ಟೆ ನಾಗೇಶ್.
ಕರಾವಳಿ ಬಿಜೆಪಿಗರ ಕಡೆಗಣನೆ ವಿರುದ್ಧ ನನ್ನ ಸ್ಪರ್ಧೆ: ರಘುಪತಿ ಭಟ್
ಬೇಸಗೆಯ ದಾಹ ತಣಿಸಲು ಬೊಂಡಕ್ಕೆ ಮೊರೆ ಹೋದರೆ ದುಬಾರಿ ದರ ತೆರಬೇಕಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ, ಅಂಗಡಿ ಮಾಲೀಕರು, ಬೊಂಡ ಬೇಕಾದಷ್ಟು ಪ್ರಮಾಣದಲ್ಲಿ ಬರುತ್ತಿಲ್ಲ ಎನ್ನುತ್ತಿದ್ದಾರೆ. ಅಲ್ಲದೆ ಗುಣಮಟ್ಟದ ಬೊಂಡ ಪೂರೈಕೆಯಾಗುತ್ತಿಲ್ಲ. ಆದರೂ ಆರೋಗ್ಯದ ದೃಷ್ಟಿಯಿಂದ ಎಳನೀರು ಸೇವನೆ ಅನಿವಾರ್ಯವಾಗಿದೆ.
-ಅನೀಶ್, ಗ್ರಾಹಕ, ಮಂಗಳೂರು