*ಐದು ಹೆಣ ಬಿದ್ದಿದ್ದ ಮನೆಯಲ್ಲಿ ಅಮಾವಾಸ್ಯೆ ರಾತ್ರಿ ಕಳ್ಳತನ..!*ಅಮಾವಾಸ್ಯೆಯಂದು ಕಳ್ಳತನಕ್ಕೆ ಬಂದಿದ್ದ ಆರೋಪಿ ಭರತ್* ರಾತ್ರಿ ಬೆಳಕು ನೋಡಿ ಬೆಚ್ಚಿಬಿದಿದ್ದ ಬ್ಯಾಡರಹಳ್ಳಿ ಸ್ಥಳೀಯರು!
ಬೆಂಗಳೂರು (ಫೆ. 05): ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯಲ್ಲಿ ಮಗು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಪ್ರಕರಣದ ಆರೋಪಿ ಮನೆ ಮಾಲೀಕ ಶಂಕರ್‌ಗೆ ಆತ್ಮಹತ್ಯೆಗೆ ಪ್ರಚೋದನೆಗೆ ನೀಡಿದ ಆರೋಪದಡಿ ಜಾಮೀನು ನೀಡಲು ನಗರದ ಸೆಷನ್ಸ್ ನ್ಯಾಯಾಲಯ ನಿರಾಕರಿಸಿತ್ತು. ಹೀಗಾಗಿ ಪ್ರಕರಣದಲ್ಲಿ ಮನೆಯ ಯಾಜಮಾನ ಹಲ್ಲೆಗೆರೆ ಶಂಕರ್ ಹಾಗೂ ಆತನ ಅಳಿಯಂದಿರು ಜೈಲುಪಾಲಾಗಿದ್ದಾರೆ.
ಈ ಮಧ್ಯೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಶಂಕರ್ ಮನೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಪವರ್ ಕಟ್ ಆಗಿತ್ತು. ಈ ಬೆನಲ್ಲೇ ಸ್ಥಳೀಯರು ದೆವ್ವದ ಕಥೆ ಕಟ್ಟಿದ ಹಿನ್ನೆಲೆ ಮನೆಗೆ ಯಾರು ಬರುತ್ತಿರಲಿಲ್ಲ. ಹೀಗಾಗಿ ಶಂಕರ್ ಮನೆ ಅನಾಥವಾಗಿತ್ತು. ಅಕ್ಕಪಕ್ಕದ ಜನ ಇಲ್ಲಿ ಓಡಾಡೋಕು ಭಯಪಡುತ್ತಿದ್ದರು. ಆದರೆ ಕಳೆದ ಅಮಾವಾಸ್ಯೆ ಮಾರನೇ ದಿನ ಮನೆ ಬಳಿ ಒಂದು ಅಚ್ಚರಿಯ ಘಟನೆ ನಡೆದಿದೆ. ಅಂದು ಮಧ್ಯರಾತ್ರಿ ಶಂಕರ್ ಮನೆಯಲ್ಲಿ ಮಂದಬೆಳಕು ನೋಡಿ ಜನರು ಗಾಬರಿಗೊಂಡಿದ್ದರು.
ಇದನ್ನೂ ಓದಿ:ಪತ್ನಿ, ಮಗನಿಂದಲೇ ಕುಟುಂಬ ಸರ್ವನಾಶ ಎಂದ ಶಂಕರ್, ಡೆತ್‌ನೋಟ್ ಹೇಳುವುದೇ ಬೇರೆ ಕತೆ!
ಈ ವೇಳೆ ಬೆಳಕನ್ನು ಕಂಡು ಶಂಕರನ ಸಂಬಂಧಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅಲ್ಲದೇ ಜನರು ಮನೆಯೊಳಗೆ ಹೋಗಿ ಹುಡುಕಾಟ ನಡೆಸಿದ್ದರು. ಈ ವೇಳೆ ದೆವ್ವ ದೆವ್ವ ಎಂದು ಹೇಳುತ್ತ ಅಪರಿಚಿತ ವ್ಯಕ್ತಿಯೊಬ್ಬ ಹೊರ ಬಂದಿದ್ದ. ದೆವ್ವದ ಕಥೆ ಕಟ್ಟಿದ ಮನೆಯಿಂದ ಈ ರೀತಿ ಅಪರಿಚಿತ ವ್ಯಕ್ತಿ ಹೊರ ಬಂದಿದ್ದು ಜನರನ್ನು ಗಾಬರಿಗೊಳಿಸಿತ್ತು.
ಆದರೆ ದೆವ್ವ ದೆವ್ವ ಎಂದು ಕೂಗುತ್ತ ಹೊರಬಂದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಮನೆ ದೋಚಲು ಬಂದಿದ್ದ ಕಳ್ಳ ಎಂಬುದು ಗೊತ್ತಾಗಿದೆ. ಫೆಬ್ರವರಿ 1ರ ಅಮಾವಾಸ್ಯೆಯಂದು ಶಂಕರ್ ಮನೆ ಕಳ್ಳತನಕ್ಕೆ ಆರೋಪಿ ಭರತ್ ಬಂದಿದ್ದ. ಈ ವೇಳೆ ಮೊಬೈಲ್ ಟಾರ್ಚ್ ಹಿಡಿದು ಮನೆಯಲ್ಲಿ ಹುಡುಕಾಡಿದ್ದರಿಂದ ಮನೆಯಲ್ಲಿ ಬೆಳಕು ಕಾಣಿಸಿಕೊಂಡಿದೆ. ಆದರೆ ಜನರು ವಿಚಾರಿಸುತ್ತಿದ್ದಂತೆಯೇ ಆರೋಪಿ ಭರತ್ ದೆವ್ವದ ಕಥೆ ಕಟ್ಟಿದ್ದಾನೆ. ಕಳ್ಳನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು ಬ್ಯಾಡರಹಳ್ಳಿ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.
ಇದನ್ನೂ ಓದಿ:ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಪವಾಡಸದೃಶ ರೀತಿಯಲ್ಲಿ ಮಗು ಬಚಾವ್!

ಮಗು ಕೊಂದು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು 9 ತಿಂಗಳ ಮಗುವನ್ನು ಕೊಂದು ಬಳಿಕ ಸ್ಥಳೀಯ ಪತ್ರಿಕೆಯೊಂದರ ಸಂಪಾದಕರ ಪತ್ನಿ ಮತ್ತು ಮೂವರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದು, ಐದು ದಿನಗಳ ಕಾಲ ಮೃತದೇಹಗಳ ಜೊತೆಯಲ್ಲೇ ಇದ್ದ ಎರಡೂವರೆ ವರ್ಷದ ಹೆಣ್ಣು ಮಗು ಪ್ರಾಣಾಪಾಯದಿಂದ ಪರಾಗಿರುವ ದಾರುಣ ಘಟನೆ ಆಂದ್ರಹಳ್ಳಿ ಮುಖ್ಯರಸ್ತೆ ಬಳಿ ನಡೆದಿತ್ತು.
ತಿಗಳರಪಾಳ್ಯದ ಭಾರತಿ (51), ಅವರ ಮಕ್ಕಳಾದ ಸಿಂಚನ (34), ಸಿಂಧೂರಾಣಿ (31), ಮಧುಸಾಗರ್ (25) ಹಾಗೂ ಸಿಂಧೂ ಪುತ್ರನಾದ 9 ತಿಂಗಳ ಗಂಡು ಮಗು ಮೃತ ದುರ್ದೈವಿಗಳು. ಅನ್ನಾಹಾರವಿಲ್ಲದೆ ಪ್ರಜ್ಞಾಹೀನಸ್ಥಿತಿಯಲ್ಲಿದ್ದ ಮೃತ ಸಿಂಚನ ಪುತ್ರಿ ಪ್ರೇಕ್ಷಾಳನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಐದು ದಿನಗಳ ಹಿಂದೆಯೇ ನಾಲ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬಳಿಕ ಪತ್ರಕರ್ತ ಶಂಕರ್ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಇದಾದ ಬಳಿಕ ತಂದೆಯ ವಿರುದ್ಧ ಮಕ್ಕಳು ಬರೆದಿರುವ ಮೂರು ಡೆತ್‌ನೋಟ್ ಪೊಲೀಸರಿಗೆ ಸಿಕ್ಕಿತ್ತು. ತಂದೆ ಶಂಕರ್ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿರುವುದು ಹಾಗೂ ನಮಗೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿತ್ತು.
ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಆರೋಪಿ ಶಂಕರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 2ನೇ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದರು. ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಘಟನೆಗೆ ಸಬಂಧಿಸಿದಂತೆ ತನಿಖೆ ಮುಂದುವರೆಯುತ್ತಿದೆ. ಈ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟು, ಅರ್ಜಿಯನ್ನು ವಜಾಗೊಳಿಸಿದ್ದರು.
