ಸಂಸ್ಕೃತಿ, ಪರಂಪರೆ ಉಳಿವಿನಲ್ಲಿ ಮಹಿಳೆಯರ ಪಾತ್ರ ಅನನ್ಯ : ಭಾರತಿ ಪ್ರಕಾಶ್
ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದ್ದು, ನಮ್ಮ ಸಂಸ್ಕೃತಿ ಪರಂಪರೆ ಉಳಿಯುವಲ್ಲಿ ಮಹಿಳೆಯ ಪಾತ್ರ ಅನನ್ಯ ಎಂದು ತಿಪಟೂರು ಚಿನ್ಮಯ ಮಿಷನ್ ಕಾರ್ಯದರ್ಶಿ ಭಾರತಿ ಪ್ರಕಾಶ್ ತಿಳಿಸಿದರು.
ತಿಪಟೂರು : ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದ್ದು, ನಮ್ಮ ಸಂಸ್ಕೃತಿ ಪರಂಪರೆ ಉಳಿಯುವಲ್ಲಿ ಮಹಿಳೆಯ ಪಾತ್ರ ಅನನ್ಯ ಎಂದು ತಿಪಟೂರು ಚಿನ್ಮಯ ಮಿಷನ್ ಕಾರ್ಯದರ್ಶಿ ಭಾರತಿ ಪ್ರಕಾಶ್ ತಿಳಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹಿಂದಿನಿಂದಲೂ ಹೆಣ್ಣಿಗೆ ಪೂಜ್ಯನೀಯ ಸ್ಥಾನ ಕಲ್ಪಿಸಲಾಗಿದ್ದು, ಪುರಾಣದಲ್ಲಿ ಹೆಣ್ಣನ್ನು ಭೂಮಿಗೆ ಹೋಲಿಸಲಾಗಿದೆ. ಕರುಣಾಮಯಿಯಾಗಿರುವ ಹೆಣ್ಣು ಪ್ರಸ್ತುತ ಎಲ್ಲಾ ರಂಗಗಳಲ್ಲಿಯೂ ಕಾರ್ಯಸಾಧನೆ ಮಾಡುತ್ತಾ ಯಾರಿಗೇನೂ ಕಡಿಮೆ ಇಲ್ಲ ಎಂಬಂತೆ ತನ್ನ ಇರುವಿಕೆ ಗುರ್ತಿಸಿಕೊಂಡಿದ್ದಾಳೆ.
ಸಂಸ್ಕಾರ, ಸಂಯಮ, ಕ್ಷಮಯಾಧರಿತ್ರಿಯಾಗಿರುವ ಮಹಿಳೆಗೆ ಸಮಾಜದ ಬೆಂಬಲ ಅವಶ್ಯಕವಾಗಿದ್ದು, ಬಸ್ ಚಾಲಕಿಯಿಂದ ಹಿಡಿದು ದೇಶ ಕಾಯುವ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದು, ಹೆಣ್ಣು ಆದಿ ಅಂತ್ಯಗಳನ್ನೊಳಗೊಂಡ ವಿಶ್ವರೂಪಿ ಆದಿಶಕ್ತಿಯಾಗಿದ್ದಾಳೆ. ಯುಗ ಯುಗಾಂತ ರಗಳಿಂದಲೂ ವಿಶಿಷ್ಟ, ವಿಶೇಷ ಹಾಗೂ ವಿಭಿನ್ನತೆಗಳಿಂದ ತಾಯಿ, ಅಕ್ಕ, ಅತ್ತೆಯಾಗಿ ಹಲವು ಪಾತ್ರಧಾರಿಗಳಾಗಿ ಕೆಲಸ ನಿರ್ವಹಿಸುತ್ತಾ ಬರುತ್ತಿದ್ದಾಳೆಂದು ತಿಳಿಸಿದರು.
ಕದಳಿ ಮಹಿಳಾ ವೇದಿಕೆ ನಿರ್ದೇಶಕಿ ಸರಸ್ವತಿ ಭೂಷಣ್ ಮಾತನಾಡಿ, ಮಹಿಳೆಯರು ಅಡುಗೆ ಮನೆಗಷ್ಟೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾಳೆ. ಕುಟುಂಬವನ್ನು ತಾವೇ ನಿರ್ವಹಿಸಿಕೊಂಡು ಆದರ್ಶ ಮಹಿಳೆಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುತ್ತಿದ್ದಾಳೆ. ಸ್ವಸಹಾಯ ಸಂಘಗಳ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾಳೆ ಎಂದರು.
ಶಸಾಪ ಜಿಲ್ಲಾಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ ಮಾತನಾಡಿ, ಹೊಸದಾಗಿ ದತ್ತಿ ಸಮರ್ಪಿಸಿದ ಎಸ್.ಕೆ. ರಾಜಶೇಖರ್, ಎಂ.ಎಸ್. ಪುಷ್ಪ, ಡಾ. ವಿವೇಚನ್ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ದತ್ತಿನಿಧಿಯಿಂದ ಬರುವ ಹಣ ಸಾಮಾಜಿಕ ಸೇವೆಯನ್ನು ಮುಂದುವರೆಸಲು ಸಹಕಾರಿ ಎಂದರು.
ಶಸಾಪ ತಾಲೂಕು ಅಧ್ಯಕ್ಷ ಕೆ.ಎಂ.ಪರಮೇಶ್ವರಯ್ಯ ಮಾತನಾಡಿ, ಸ್ತ್ರೀ ಸಮಾನತೆಗಾಗಿ ಪಾಶ್ಚಿಮಾತ್ಯರು ಹೋರಾಡುವುದಕ್ಕೆ ಮೊದಲೆ ಈ ಕರ್ನಾಟಕದ ನೆಲದಲ್ಲಿ ಸ್ತ್ರೀ ಸಮಾನತೆಗೆ ತಾರತಮ್ಯ ನೀತಿಯ ವಿರುದ್ಧ ಹೋರಾಡಿದವರು. ಬಸವಾದಿ ಶಿವಶರಣರು ಅನಕ್ಷರಸ್ತ ಕೆಳವರ್ಗದ ಶರಣೆಯರಿಗೂ ಅಕ್ಷರಾಭ್ಯಾಸ ಮಾಡಿಸಿ ವಚನಗಳ ರಚಿಸುವಷ್ಟು ಸಾಮರ್ಥ್ಯ ಬೆಳೆಸಿದರು. ಅಲ್ಲದೆ ತಮ್ಮ ಗಂಡಂದಿರಿಗೆ ಕಾಯಕ ದಾಸೋಹದ ಮಹತ್ವ ಹೇಳುವಷ್ಟು ಜ್ಞಾನಿಗಳನ್ನಾಗಿ ಮಾಡಿ ಸ್ತ್ರೀಯರ ಏಳಿಗೆಗಾಗಿ ದುಡಿದರು. ನಮ್ಮ ಸಂಸ್ಕೃತಿಯ ಹಿರಿಮೆಯ ಮುಂದಿನ ಜನಾಂಗಕ್ಕೆ ಪಸರಿಸು ವಲ್ಲಿ ಅವಳ ಪಾತ್ರ ಹಿರಿದು ಎಂದರು.
ಈ ಸಂದರ್ಭದಲ್ಲಿ ಎಸ್‌ವಿಪಿ ಸಂಸ್ಥೆಯ ಎಸ್.ಕೆ.ರಾಜಶೇಖರ್, ರಂಗ ಕಲಾವಿದೆ ಸುಮಿತ್ರಮ್ಮ, ಮಹಿಳಾ ಸಮಾಜದ ಮುಖಂಡರಾದ ಸರ್ವ ಮಂಗಳಮ್ಮ, ಉಮಾ ನಾರಾಯಣಗೌಡ, ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ನಾಗರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸ್ವರ್ಣಗೌರಿ, ಅಕ್ಕ ಮಹಾದೇವಿ ಸಮಾಜದ ಮುಕ್ತತಿಪ್ಪೇಶ್, ನಿವೃತ್ತ ಸಹಕಾರ ಸಂಘದ ಅಧ್ಯಕ್ಷ ವಿ.ಎನ್. ಮಹದೇವಯ್ಯ, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಾಕ್ಷಮ್ಮ, ಮಹಿಳಾ ಮುಖಂಡರಾದ ಸುವರ್ಣ, ಶೋಭಾ, ಆಶಾಮಂಜುನಾಥ್, ಸಂಸ್ಕಾರ ಭಾರತೀಯ ದಿವಾಕರ್, ಶಸಾಪ ಗೌರವಾಧ್ಯಕ್ಷ ಜಗದೀಶ್ ಮತ್ತಿತರರಿದ್ದರು.