ಚುನಾವಣೆ ನೆಪದಲ್ಲಿ ಅಧಿಕಾರಿಗಳು ಕಚೇರಿಗೆ ಚಕ್ಕರ್!
ಇನ್ನೂ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾಗಿ ನೀತಿ ಸಂಹಿತೆಯೇ ಜಾರಿಯಾಗಿಲ್ಲ. ಆಗಲೇ ಸರ್ಕಾರಿ ಅಧಿಕಾರಿಗಳು ಚುನಾವಣೆ ನೆಪದಲ್ಲಿ ಕಚೇರಿಗೆ ಚಕ್ಕರ್ ಹೊಡೆಯಲು ಆರಂಭಿಸಿದ್ದಾರೆ.
-ಎಂ.ಅಫ್ರೋಜ್ ಖಾನ್
ರಾಮನಗರ: ಇನ್ನೂ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾಗಿ ನೀತಿ ಸಂಹಿತೆಯೇ ಜಾರಿಯಾಗಿಲ್ಲ. ಆಗಲೇ ಸರ್ಕಾರಿ ಅಧಿಕಾರಿಗಳು ಚುನಾವಣೆ ನೆಪದಲ್ಲಿ ಕಚೇರಿಗೆ ಚಕ್ಕರ್ ಹೊಡೆಯಲು ಆರಂಭಿಸಿದ್ದಾರೆ.
ಕೆಲ ಸರ್ಕಾರಿ ಕಚೇರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಜನ ಸಾಮಾನ್ಯರಿಗೆ ‘ಸಾಹೇಬರು ಚುನಾವಣಾ ಕೆಲಸದ ಮೇಲೆ ತೆರಳಿದ್ದಾರೆ. ವಾಪಸು ಬರುವುದು ತಡವಾಗುತ್ತದೆ. ನಾಳೆ ಬೆಳಿಗ್ಗೆ ಬಂದರೆ ಸಿಗಬಹುದು. ಇಲ್ಲ ಸರ್ ಈಗ ನಿಮ್ಮ ಯಾವುದೇ ಕೆಲಸ ಆಗಲ್ಲ, ಎಲ್ಲರೂ ಎಲೆಕ್ಷನ್‌ನಲ್ಲಿ ಬ್ಯುಜಿಯಾಗಿದ್ದಾರೆ. ಏನಿದ್ದರೂ ಚುನಾವಣೆ ಮುಗಿಯಲಿ, ಆ ಮೇಲೆ ನೋಡೋಣ ಸರ್ ...’ ಎಂಬ ಸಿದ್ದ ಉತ್ತರ ಸಿಗುತ್ತಿದೆ.
ನಗರದ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಅಧಿಕಾರಿಗಳನ್ನು ಹುಡುಕಿಕೊಂಡು ತಮ್ಮ ಕುಂದು-ಕೊರತೆ ಅಥವಾ ಇತರೆ ಯಾವುದೇ ಸರ್ಕಾರಿ ಕೆಲಸ ಮಾಡಿಸುವುದಕ್ಕೆ ಹೋದರೆ, ಅಲ್ಲಿ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಚುನಾವಣೆ ಕುರಿತು ವಿಡಿಯೋ ಕಾನ್ಫರೆನ್ಸ್ ಇದೆ. ಆದಾದ ಮೇಲೆ ಮೀಟಿಂಗ್ ಇದೆ. ಮಧ್ಯಾಹ್ನ ತರಬೇತಿ ಬೇರೆ ಇದೆಯಂತೆ. ನಾಳೆ ಬೆಳಿಗ್ಗೆ ಬಂದರೆ ಸಿಗುತ್ತಾರೆ ಎಂಬ ವಿವರಣೆಯನ್ನು ಕಚೇರಿ ಸಿಬ್ಬಂದಿ ಜನ ಸಾಮಾನ್ಯರಿಗೆ ನೀಡಿ ಕಳುಹಿಸುತ್ತಿದ್ದಾರೆ.
ವಿಧಾನಸಭಾ ಚುನಾವಣೆ ಕಾವು ಜೋರಾಗುತ್ತಿದ್ದಂತೆ ಅತ್ತ ಆಡಳಿತ ಯಂತ್ರ ವ್ಯವಸ್ಥೆ ಕೂಡ ಸ್ವಲ್ಪ ಮಟ್ಟಿಗೆ ನಿಧಾನವಾಗುವ ಮೂಲಕ ಅಧಿಕಾರಿಗಳು ಜನರ ಕೆಲಸಗಳಿಗೆ ಸಿಗುವುದು ಅನುಮಾನ ಎನ್ನುವ ಪರಿಸ್ಥಿತಿ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಾಣುತ್ತಿದೆ. ಜನರು ತಮ್ಮ ತುರ್ತು ಕೆಲಸಗಳನ್ನು ಮಾಡಿಸಿಕೊಳ್ಳಲು ಹೋದರೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೇ ಇರುವುದಿಲ್ಲ. ಎಲ್ಲರೂ ಚುನಾವಣಾ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಸಿದ್ಧ ಉತ್ತರ ದೊರೆಯುತ್ತದೆ. ಇದರಿಂದ ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗೆ ತೆರಳುವ ಜನರು ಮಾತ್ರ ಖಾಲಿ ಕೈಯಲ್ಲಿ ಹಿಂದಿರುಗಬೇಕಾದ ಸ್ಥಿತಿಯಿದೆ.
ಜನಸಾಮಾನ್ಯರಿಗೆ ಮಾತ್ರವಲ್ಲದೆ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೂ ‘ಸಾಹೇಬರ ಚುನಾವಣಾ ಕರ್ತವ್ಯ’ದ ಬಿಸಿ ತಟ್ಟಿದೆ. ಮತದಾರರ ಆಧಾರ್ ಲಿಂಕ್ ಮಾಡುವುದರಲ್ಲಿ ರಾಮನಗರ ಟೌನ್‌ನಲ್ಲಿ ನಿಗದಿತ ಗುರಿ ಸಾಧಿಸಿಲ್ಲ. ಹೀಗಾಗಿ ನಗರಸಭೆ ಸಿಬ್ಬಂದಿಗಳು ಆ ಕಾರ್ಯದಲ್ಲಿ ತೊಡಗಿದ್ದಾರೆ. ಸದಸ್ಯರು ತಮ್ಮ ವಾರ್ಡ್‌ನಲ್ಲಿ ದೈನಂದಿನ ಕೆಲಸಗಳಿಗೆ ಎದುರಾದ ತೊಡಕು ನಿವಾರಣೆಗಾಗಿ ಕಚೇರಿಗೆ ಬಂದರೆ ಅಧಿಕಾರಿಗಳೇ ಸಿಗುತ್ತಿಲ್ಲ. ಯಾವ ಅಧಿಕಾರಿಯನ್ನು ಕಾಣಲು ಹೋದರೂ ‘ಇಲ್ಲ’ ಎನ್ನುವ ಉತ್ತರವೇ ಎದುರಾಗುತ್ತದೆ ಎಂದು ಸದಸ್ಯರೊಬ್ಬರು ಅಳಲು ತೋಡಿಕೊಂಡರು.
ಅಲ್ಲಿ ಜನರಿಂದ ನಾವು ಉಗಿಸಿಕೊಳ್ಳಬೇಕಾಗಿದೆ. ಇಲ್ಲಿ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಣ್ಣ-ಪುಟ್ಟಕೆಲಸಕ್ಕೂ ಚುನಾವಣೆ ನೆಪ ಹೇಳಲಾಗುತ್ತಿದೆ. ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ. ಆದರೂ ಅಧಿಕಾರಿಗಳು ಚುನಾವಣೆ ನೆಪ ಹೇಳಿಕೊಂಡು ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದಾರೆ. ಇದರಿಂದಾಗಿ ವಾರ್ಡುಗಳಲ್ಲಿ ಕೆಲಸ ಕಾರ್ಯಗಳಿಗೆ ತಡೆ ಬಿದ್ದಿದೆ ಎಂದು ಅಲವತ್ತುಕೊಂಡರು.
ಯಾವುದೇ ವಾರ್ಡ್‌ಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಮುಂತಾದ ಸಮಸ್ಯೆಗಳಿಗೆ ಜನರು ಸ್ಥಳೀಯ ವಾರ್ಡ್ ಸದಸ್ಯರನ್ನು ಪರಿಹಾರ ಕಲ್ಪಿಸುವಂತೆ ಕೇಳುತ್ತಾರೆ. ಇನ್ನು ಸದಸ್ಯರು ಏನಿದ್ದರೂ ಅಧಿಕಾರಿ ವರ್ಗದವರನ್ನೇ ಅವಲಂಬಿಸಬೇಕಾಗಿದೆ. ಚುನಾವಣೆ ಕಾರ್ಯಗಳಿಂದಾಗಿ ಅತ್ತ ಅಧಿಕಾರಿಗಳಿಗೂ ಸಂಬಂಧಪಟ್ಟಇಲಾಖಾ ಕೆಲಸಗಳತ್ತ ಗಮನಹರಿ ಸುವುದಕ್ಕೆ ಕಷ್ಟಸಾಧ್ಯವಾಗಿದೆ. ಇದರಿಂದ ಸಾಮಾನ್ಯ ಜನರಿಗೂ ತೊಂದರೆಯಾಗುತ್ತಿದೆ.
ಸ್ಥಳೀಯ ಸಂಸ್ಥೆಯ ಯಾವುದೇ ಕಚೇರಿಗೆ ತೆರಳಿದರೆ ಅಲ್ಲಿ ಅರ್ಧದಷ್ಟುಅಧಿಕಾರಿ ಗಳ ಅನುಪಸ್ಥಿತಿ ಎದ್ದು ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆಗಬೇಕಾದ ಉದ್ದಿಮೆ ಪರವಾನಿಗೆ, ಖಾತಾ ಬದಲಾವಣೆ, ಕುಡಿಯುವ ನೀರಿನ ಬಿಲ್ ಸಮಸ್ಯೆ ಸಹಿತ ಬಹುತೇಕ ಕೆಲಸಗಳು ನಡೆಯುತ್ತಿಲ್ಲ. ಈ ಬಗ್ಗೆ ಕೇಳಿದರೆ ಚುನಾವಣೆಯ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದಾರೆ ಎಂಬುದು ನಾಗರೀಕರ ಆರೋಪ.
ಶಿಕ್ಷಣ ಇಲಾಖೆಯಲ್ಲೂ ಅಧಿಕಾರಿಗಳ ಅನುಪಸ್ಥಿತಿ
ಚುನಾವಣೆ ತರಬೇತಿ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿಯೂ ಹಲವಾರು ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಆರ್‌ಟಿಇ ಮರುಪಾವತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ. ಆರ್‌ಟಿಇ ಮರುಪಾವತಿಗೆಂದೆ ಆನ್‌ಲೈನ್‌ನಲ್ಲಿ ಪ್ರತ್ಯೇಕ ಜಾಲತಾಣವಿದೆ. ಕೆಲವು ಶಾಲೆಗಳ ಪ್ರಸ್ತಾವನೆಯಲ್ಲಿ ಇರಬಹುದಾದ ಲೋಪ-ದೋಷಗಳನ್ನು ಸರಿಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಹಂತಗಳ ಅಧಿಕಾರಿಗಳು ಪ್ರಸ್ತಾವನೆಯನ್ನು ಶಾಲೆಗೆ ವಾಪಸ್ಸು ಕಳುಹಿಸಿದ್ದಾರೆ. ಈ ಪೈಕಿ ಕೆಲವು ಶಾಲೆಗಳ ಮರುಪ್ರಸ್ತಾವನೆ ಸಲ್ಲಿಸಲು ಜಾಲತಾಣದಲ್ಲಿ ಅವಕಾಶವಾಗದೆ ಸಂಬಂಧಿಸಿದ ಅಧಿಕಾರಿಗಳ ಬಳಿ ಅಲವತ್ತುಕೊಂಡಿದ್ದಾರೆ. ಆದರೆ, ಈ ಹಂತದ ಅಧಿಕಾರಿಗಳನ್ನು ಸಹ ಚುನಾವಣಾ ತರಬೇತಿಗೆ ಹಚ್ಚಿರುವುದರಿಂದ ಪ್ರಸ್ತಾವನೆಯನ್ನು ಮರುಸಲ್ಲಿಸಲಾಗದೆ ಖಾಸಗಿ ಶಾಲೆಗಳು ಪರದಾಡುತ್ತಿವೆ. ಚುನಾವಣೆ ತರಬೇತಿಗೆ ನಿಯೋಜಿತರಾದ ಅಧಿಕಾರಿಗಳ ಬದಲಿಗೆ ಅಥವಾ ಹೆಚ್ಚುವರಿಯಾಗಿ ಮತ್ತೊಬ್ಬ ಅಧಿಕಾರಿಯನ್ನು ಇಲಾಖೆ ನೇಮಿಸಬೇಕು.
ಕ್ರಮಬದ್ಧವಾಗಿ ಕರ್ತವ್ಯ ಹಂಚಿಕೆಯಾಗಲಿ
ಅಗತ್ಯ ಕೆಲಸಗಳು ನಡೆಯಬೇಕಾದ ಇಲಾಖೆ ಅಧಿಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ಚುನಾವಣಾ ತರಬೇತಿ ಹಾಗೂ ಕರ್ತವ್ಯಗಳಿಗೆ ಬಳಸುವುದರಿಂದ ಸಾಮಾನ್ಯ ಜನರಿಗೆ ಸಮಸ್ಯೆಯಾಗುವುದು ತಪ್ಪುತ್ತದೆ. ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಕುಡಿಯುವ ನೀರಿನ ಯೋಜನೆ ಸಹಿತ ಜನರಿಗೆ ಅಗತ್ಯವಿರುವ ಇಲಾಖೆಯ ಅಧಿಕಾರಿಗಳಿಗೆ ಚುನಾವಣಾ ಕೆಲಸದಿಂದ ಕೊಂಚ ರಿಯಾಯಿತಿ ನೀಡಿದರೆ, ಜನರ ಕೆಲಸಗಳು ವೇಗವಾಗಿ ನಡೆಯಲು ಸಾಧ್ಯವಾಗುತ್ತದೆ. ಒಂದು ಇಲಾಖೆಯಲ್ಲಿ 10 ಮಂದಿ ಅಧಿಕಾರಿಗಳಿದ್ದರೆ ಅವರಲ್ಲಿ ದಿನಕ್ಕೆ ಕೆಲವು ಜನರಿಗೆ ಮಾತ್ರ ಚುನಾವಣಾ ಕೆಲಸ, ಬಾಕಿ ಉಳಿದಿರುವವರಿಗೆ ಜನರ ದೈನಂದಿನ ಕೆಲಸಗಳನ್ನು ಮಾಡುವ ಅವಕಾಶ ಕಲ್ಪಿಸಬಹುದರು. ಆದರೆ ಈಗ ಎಲ್ಲರನ್ನೂ ಚುನಾವಣಾ ಕೆಲಸಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರ ಕಚೇರಿ ಕೆಲಸಗಳು ಮೂಲೆಗುಂಪಾಗುತ್ತಿವೆ ಎನ್ನುವ ಮಾತುಗಳು ಜನಸಾಮಾನ್ಯರಿಂದ ಕೇಳಿ ಬರುತ್ತಿದೆ.
ಇ - ಖಾತೆ ಮಾಡಲು ಅರ್ಜಿ ಸಲ್ಲಿಸಿ ಆರೇಳು ತಿಂಗಳಾಗಿದೆ. ಇಲ್ಲಿವರೆಗೂ ಅರ್ಜಿ ವಿಲೇವಾರಿ ಮಾಡಿಲ್ಲ. ಈಗ ಕೇಳಿದರೆ, ಅಧಿಕಾರಿಗಳೆಲ್ಲ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಏನಿದ್ದರೂ ಚುನಾವಣೆ ಕಳೆದು ಬನ್ನಿ ಎಂದು ಸಬೂಬು ಹೇಳುತ್ತಿದ್ದಾರೆ. ನನ್ನ ರೀತಿಯಲ್ಲಿ ಅನೇಕ ಜನರು ಅರ್ಜಿ ಕೊಟ್ಟು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
- ಬಾಲರಾಜ್, ರಾಮನಗರ ನಿವಾಸಿ