ಪೊಲೀಸ್ ಇಲಾಖೆ ದಿನದ 24 ಗಂಟೆಯೂ ಶ್ರಮಿಸುತ್ತಿದೆ
ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ, ಬಡವರ, ದೀನದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ದಿನದ 24 ಗಂಟೆಗಳ ಕಾಲ ಶ್ರಮಿಸುತ್ತಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆ ನಿವೃತ್ತ ಪೊಲೀಸ್ ಉಪನಿರೀಕ್ಷಕರಾದ ಎಚ್. ಪುಟ್ಟರಾಜಯ್ಯ ತಿಳಿಸಿದರು.
ಹಾಸನ: ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ, ಬಡವರ, ದೀನದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ದಿನದ 24 ಗಂಟೆಗಳ ಕಾಲ ಶ್ರಮಿಸುತ್ತಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆ ನಿವೃತ್ತ ಪೊಲೀಸ್ ಉಪನಿರೀಕ್ಷಕರಾದ ಎಚ್. ಪುಟ್ಟರಾಜಯ್ಯ ತಿಳಿಸಿದರು.
ನಗರದ ಡಿ.ಎ.ಆರ್. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಣ್ಣಪುಟ್ಟವಿಚಾರಣೆ ಬಿಟ್ಟರೇ ಯಾವುದೇ ತೊಂದರೆಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಲಾಗಿದೆ. 1984ನೇ ಇಸವಿಯಲ್ಲಿ ಕರ್ನಾಟಕ ಪೊಲೀಸ್ ಸೇವೆಗೆ ಕಾನ್ಸ್ ಟೇಬಲ್ ಆಗಿ ನನ್ನ ಮೊದಲ ವೃತ್ತಿ ಆರಂಭಿಸಿದೆನು. ಹಾಸನ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸಿ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯಲ್ಲಿ ಪಿಸಿಯಿಂದ ಇಡಿದು ಪಿಎಸ್‌ಐ. ವರೆಗೂ ಒಂದೆ ಠಾಣೆಯಲ್ಲಿ ಸತತವಾಗಿ 18 ವರ್ಷಗಳ ಕಾಲ ಕೆಲಸ ನಿರ್ವಹಿಸಿರುವುದು ಹೆಮ್ಮೆಯ ವಿಚಾರ ಎಂದರು.
ಕರ್ತವ್ಯದ ವೇಳೆ ಅನೇಕ ಕಷ್ಟಸುಖಗಳು ಬಂದರೂ ಎಲ್ಲವನ್ನು ನಿಭಾಯಿಸಿ ಈಗ ನಿವೃತ್ತಿ ಹೊಂದಿರುವುದು ಸಂತೋಷವಾಗಿದೆ. ಪೊಲೀಸ್ ಇಲಾಖೆ ಎಂದರೇ ಮುಖ್ಯವಾದ ಅಂಗವಾಗಿದ್ದು, ಎಲ್ಲಾ ಇಲಾಖೆಗಿಂತಲೂ ಅಗ್ರಸ್ಥಾನದಲ್ಲಿ ಪೊಲೀಸ್ ಇಲಾಖೆ ಇದೆ. ಪ್ರತಿ ಇಲಾಖೆಗೂ ನಾವು ಗಮನಕೊಟ್ಟು ದಿನದ 24 ಗಂಟೆಗಳ ಕಾಲ ಮುಂಚೂಣಿಯಲ್ಲಿರಬೇಕು. ನೊಂದ ಬಡವರ, ದೀನದಲಿತರ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಕಷ್ಟಕಾರ್ಪಣ್ಯಗಳಿಗೆ ಹೆಗಲಾಗಿ ನಿಂತು ಸಾಮಾಜಿಕ ನ್ಯಾಯ, ಸಂವಿಧಾನಿಕ ಬದ್ಧವಾದ ನ್ಯಾಯವನ್ನು ಕೊಡಿಸುವ ನಿಟ್ಟಿನಲ್ಲಿ ಇನ್ನು ಕೂಡ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು.
ಹಿಂದಿನ ದಿನಗಳಲ್ಲಿ ಅಷ್ಟೊಂದು ಸವಲತ್ತುಗಳು ಪೊಲೀಸ್ ಇಲಾಖೆಗೆ ಇರಲಿಲ್ಲ. ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಸವಲತ್ತುಗಳು ಸಿಗುತ್ತಿದೆ. ಪೊಲೀಸ್ ಎಂದ್ರೆ ನಾಗರೀಕ ಪೊಲೀಸರಾಗಿ ಸಾರ್ವಜನಿಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಾಹಿತಿಯನ್ನು ಸಂಗ್ರಹಿಸಿ ಪೊಲೀಸ್ ಇಲಾಖೆಯಿಂದ ಭದ್ರತೆ ಕೊಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದು. ಇಲಾಖೆಯಲ್ಲಿರುವ ಎಲ್ಲರೂ ಸರಕಾರದ ಸೇವೆಯನ್ನು ನಿಷ್ಠೆಯಿಂದ ಮಾಡಬೇಕು. 112 ಪೊಲೀಸ್ ಸೇವೆ ಸಾರ್ವಜನಿಕರಿಗೆ ಉತ್ತಮವಾಗಿದೆ. ಪೊಲೀಸ್ ಧ್ವಜಾ ದಿನಾಚರಣೆಯಲ್ಲಿ ಧ್ವಜವನ್ನು ಸಾರ್ವಜನಿಕವಾಗಿ ಮಾರಾಟ ಮಾಡಿ ಬಂದಂತಹ ಹಣವನ್ನು ರಾಜ್ಯ ಪೊಲೀಸ್ ಮತ್ತು ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಗೆ ವಿನಿಯೋಗಿಸಲಾಗುವುದು. ಇದರಿಂದ ಪೊಲೀಸ್ ಕರ್ತವ್ಯ ನಿರ್ವಹಿಸುವ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಕೆ. ತಮ್ಮಯ್ಯ ಮಾತನಾಡುತ್ತಾ, ಅಪರಾಧ ತಡೆಗಟ್ಟುವಲ್ಲಿ ಮತ್ತು ಸಂಚಾರ ನಿಯಮ ಪಾಲನೆಯಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ತಮ್ಮ ಜೀವಿತ ಅವಧಿಯನ್ನು ಸರಕಾರಿ ಸೇವೆಯಲ್ಲಿಯೇ ಕಳೆಯುತ್ತಾರೆ. ಇಂತಹ ಸೇವೆಯನ್ನು ಇಲಾಖೆ ಮತ್ತು ಸಾರ್ವಜನಿಕರು ನೆನಯಬೇಕು ಎಂದರು.
ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ನಿಧಾನಗತಿ ಮತ್ತು ಶೀಘ್ರ ಪಥಸಂಚಲನಾ ನಡೆಸಲಾಯಿತು. ಧ್ವಜವನ್ನು ಬರಮಾಡಿಕೊಂಡು ಗೌರವ ಸೂಚಿಸಿ, ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರದಲ್ಲಿದ್ದ ಎಲ್ಲರನ್ನು ಡಿವೈಎಸ್ಪಿ ವೀರಣ್ಣ ಸ್ವಾಗತಿಸಿದರು. ಮುರುಳೀಧರ್ ವಂದಿಸಿದರು. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತ ಅಧಿಕಾರಿಗಳಿಗೆ ಸನ್ಮಾನ
ನಿವೃತ್ತ ಪೊಲೀಸ್ ಅಧಿಕಾರಿಗಳಾದ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ನಿವೃತ್ತ ಪೊಲೀಸ್ ಉಪನಿರೀಕ್ಷಕರಾದ ಎಚ್. ಪುಟ್ಟರಾಜಯ್ಯ, ಹಳ್ಳಿ ಮೈಸೂರು ಎ.ಎಸ್.ಐ. ಸಣ್ಣಮಲ್ಲಯ್ಯ, ಡಿಎಆರ್ ಎಪಿಸಿ-34 ಪಿ.ಟಿ. ರಘುನಾಥ್, ಪಿಎಆರ್ ಎ.ಆರ್.ಎಸ್.ಐ. ಶಿವಸ್ವಾಮಿ, ನುಗ್ಗೆಹಳ್ಳಿ ಪೊಲೀಸ್ ಠಾಣೆ ಸಿ.ಎಚ್.ಸಿ. ಟಿ.ಜಿ. ನಂಜುಂಡೇಗೌಡ ಇವರ ಸೇವೆಯನು ಸ್ಮರಿಸಿ ಸನ್ಮಾನ ಮಾಡುವುದರ ಮೂಲಕ ಗೌರವಿಸಲಾಯಿತು. ಇನ್ನು ಹಲವಾರು ವರ್ಷಗಳ ಕಾಲ ನಿರೂಪಣೆ ಮಾಡಿದ ಸ್ವರೂಪ್ ಅವರನ್ನು ನೆನಪಿಸಿಕೊಂಡು ಅವರ ಸಹೋದರರಾದ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.