ದೇಶದಲ್ಲಿ ರೈತರ ಸಂಖ್ಯೆ ದಿನೇ ದಿನೇ ಕ್ಷೀಣ : ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ

ದೇಶದಲ್ಲಿ ದಿನ ಕಳೆದಂತೆ ರೈತರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಉದ್ಭವಿಸಲು ಕಾರಣವಾಗಬಹುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

The number of farmers in the country is dwindling day by day  snr

  ನಾಗಮಂಗಲ :  ದೇಶದಲ್ಲಿ ದಿನ ಕಳೆದಂತೆ ರೈತರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಉದ್ಭವಿಸಲು ಕಾರಣವಾಗಬಹುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ನಡೆದ ಆದಿಚುಂಚನಗಿರಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಳೆದ 60ರ ದಶಕದಲ್ಲಿ ಶೆ.75ರಷ್ಟಿದ್ದ ರೈತರ ಸಂಖ್ಯೆ ಪ್ರಸ್ತುತ ಶೆ.67ಕ್ಕೆ ಕುಸಿದಿದೆ. ರೈತರ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ಗಮನಿಸಿದರೆ ಕೃಷಿ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿದೆ ಎನಿಸುತ್ತದೆ. ಗ್ರಾಮೀಣ ಪ್ರದೇಶದ ರೈತರು ಕೃಷಿಗೆ ಪೂರಕವಾದ ವಾತಾವರಣ ನಿರ್ಮಿಸಿ ಕೃಷಿ ಚಟಿವಟಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಬೆಂಗಳೂರು ವ್ಯಾಪಕವಾಗಿ ಬೆಳೆಯುತ್ತಿರುವ ಪರಿಣಾಮ 1.5 ಕೋಟಿ ಜನಸಂಖ್ಯೆಯಿದ್ದು, ಮುಂದಿನ 25 ವರ್ಷಗಳಲ್ಲಿ 4 ಕೋಟಿಗೂ ಅಧಿಕ ಜನಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಆದ್ದರಿಂದ ಹಳ್ಳಿಗಾಡಿನ ಜನರು ನಗರ ಪ್ರದೇಶದ ವ್ಯಾಮೋಹದಿಂದ ಹೊರ ಬಂದು ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆ ಒತ್ತು ನೀಡಬೇಕು ಎಂದರು.

60 ಮತ್ತು 70ರ ದಶಕದಲ್ಲಿ ನಮ್ಮ ದೇಶದಲ್ಲಿ ಆಹಾರ ಸಮಸ್ಯೆಯಿತ್ತು. ಆ ವೇಳೆ ನೆರೆ ದೇಶಗಳಿಂದ ಆಹಾರ ಪದಾರ್ಥಗಳನ್ನು ತಂದು ಊಟ ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು. ತದನಂತರದಲ್ಲಿ ಕೃಷಿ ಕ್ಷೇತ್ರ ಬೆಳೆದು ನಮ್ಮಲ್ಲಿ ಆಹಾರ ಪದಾರ್ಥಗಳ ಸಮಸ್ಯೆ ನೀಗಿಸುವ ಜೊತೆಗೆ ಬೇರೆ ದೇಶಗಳಿಗೂ ಆಹಾರ ಪದಾರ್ಥಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಇದೇ ವಾತಾವರಣ ಮುಂದುವರಿಸಬೇಕು ಎಂದರು.

ರೈತರ ಸಂಖ್ಯೆ ಇಳಿಮುಖವಾದರೆ ಆಹಾರ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಇದಕ್ಕೆ ನಾವು ಭೂಮಿಗೆ ಬಳಸುತ್ತಿರುವ ರಾಸಾಯನಿಕ ಪದಾರ್ಥಗಳೂ ಸಹ ಒಂದು ರೀತಿಯಲ್ಲಿ ಕಾರಣವಾಗಿದೆ. ಆದ್ದರಿಂದ ರೈತರಿಗೆ ಪ್ರೋತ್ಸಾಹ ನೀಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಜೊತೆಗೆ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಬೇಕು. ಉತ್ತಮ ಮಾರುಕಟ್ಟೆವ್ಯವಸ್ಥೆಯಾಗಬೇಕು. ದೇಶದ ಬೆನ್ನೆಲುಬಾಗಿರುವ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ಪ್ರಧಾನ ಭಾರತ ದೇಶದ ಅಭಿವೃದ್ಧಿಗೆ ರೈತರು ಮುಂದಾಗಬೇಕು. ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಹೆಚ್ಚು ಅಧ್ಯಯನ ಮಾಡಿದರೆ ದೇಶ ಅಭಿವೃದ್ಧಿಯಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಲಭ್ಯವಿರುವ ತಂತ್ರಜ್ಞಾನ ಬಳಸಿ ರೈತರು ಹೆಚ್ಚು ಲಾಭ ಪಡೆದುಕೊಳ್ಳಬೇಕು. ಜಗತ್ತಿನಾದ್ಯಂತ ಆಗಿರುವ ಆವಿಷ್ಕಾರಗಳು, ಆಧುನಿಕ ತಂತ್ರಜ್ಞಾನದ ಮಾಹಿತಿಗಳನ್ನು ಅಧಿಕಾರಿಗಳು ರೈತರಿಗೆ ತಲುಪಿಸಬೇಕು ಎಂದರು.

ರೈತರು ಆಧುನಿಕ ಕೃಷಿ ಚಟುವಟಿಕೆಯ ಹೊಸ ಮಾದರಿಯನ್ನು ಅಳವಡಿಸಿಕೊಂಡಲ್ಲಿ ಹೆಚ್ಚಿನ ಶ್ರಮ ಹಾಗೂ ಕೆಲಸಗಾರರ ಸಂಖ್ಯೆ ಕಡಿಮೆಯಾಗಿ ಅಧಿಕ ಇಳುವರಿ ಹಾಗೂ ಉತ್ತಮ ಆರೋಗ್ಯಪೂರ್ಣ ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯಬಹುದು. ಮಳೆ ನೀರು ಸಂಗ್ರಹಣೆ ಮತ್ತು ಗಿಡಮರಗಳ ಬೆಳವಣಿಗೆಗೂ ಸಹ ರೈತರು ಶ್ರಮಿಸಬೇಕು. ಆಗ ಮಾತ್ರ ಕೃಷಿ ಜೊತೆಗೆ ಸುಂದರ ಪರಿಸರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಶೋಕ್‌ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿದರು. ರಾಗಿ ಮೌಲ್ಯವರ್ಧಿತ ಉತ್ಪನ್ನಗಳ ಕೈಪಿಡಿಯನ್ನು ಡಾ.ನಿರ್ಮಲಾನಂದನಾಥಶ್ರೀಗಳು ಬಿಡುಗಡೆ ಮಾಡಿದರು. ರೈತರ ಉತ್ಪನ್ನಗಳ ಮಾರುಕಟ್ಟೆಬಗ್ಗೆ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟರೆಡ್ಡಿ ವಿಶೇಷ ಉಪನ್ಯಾಸ ನೀಡಿದರು.

ವಸ್ತು ಪ್ರದರ್ಶನ :

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ವಿವಿಧ ಬಗೆಯ ಬೆಳೆಗಳು, ಹಣ್ಣು ಮತ್ತು ಹೂವುಗಳು ಸೇರಿದಂತೆ ಅಂತಾರಾಷ್ಟ್ರೀಯ ಸಿರಿ ಧಾನ್ಯ ಉತ್ಪನ್ನಗಳನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು. ಕೃಷಿ ವಸ್ತು ಪ್ರದರ್ಶನದಲ್ಲಿದ್ದ ಹಲವು ಮಳಿಗೆಗಳನ್ನು ವೀಕ್ಷಣೆ ಮಾಡಿದ ಶ್ರೀಗಳು, ಆಧುನಿಕ ಕೃಷಿ ಪದ್ಧತಿ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಡಟರ್‌ ಟ್ರ್ಯಾಕ್‌ ಬೈಕ್‌ ರೇಸ್‌ ಗೆ ನಿರ್ಮಲಾನಂದನಾಥ ಶ್ರೀಗಳು ಚಾಲನೆ ನೀಡಿದರು. ನಾಡಿನ ವಿವಿಧ ಭಾಗಗಳಿಂದ ಬೈಕ… ಸವಾರರು ರೇಸ್‌ನಲ್ಲಿ ಪಾಲ್ಗೊಂಡಿದ್ದರು. ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಉಪ ಕೃಷಿ ನಿರ್ದೇಶಕರಾದ ಡಾ.ಕೆ.ಮಾಲತಿ, ಮಮತ, ಬಿಜಿಎಸ್‌ ಐಟಿ ಪ್ರಾಂಶುಪಾಲ ಡಾ.ಬಿ.ಕೆ.ನರೇಂದ್ರ, ಕೃಷಿ ಇಲಾಖೆಯ ಅಧಿಕಾರಿಗಳಾದ ಹರ್ಷ, ಮಂಜುನಾಥ… ಸೇರಿದಂತೆ ನೂರಾರುಮಂದಿ ರೈತರು ಮತ್ತು ಭಕ್ತರು ಇದ್ದರು.

Latest Videos
Follow Us:
Download App:
  • android
  • ios