ಚಿತ್ರದುರ್ಗ: ಅಶಿಸ್ತು ತೋರಿದ ಅಧಿಕಾರಿಗಳಿಗೆ ಸಚಿವ ಡಿ ಸುಧಾಕರ್ ತರಾಟೆ!
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸದೃಢ ಹೆಜ್ಜೆ ಇಡಲು ಮುಂದಾಗಿದ್ದು, ಬುಧವಾರ ಹಿರಿಯೂರಿನ ವಿವಿಧ ಕಚೇರಿಗೆ ಭೇಟಿ ನೀಡಿ, ಹಾಜರಾತಿ ಪರಿಶೀಲಿಸಿದರು
ಹಿರಿಯೂರು (ಜೂ.15) ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸದೃಢ ಹೆಜ್ಜೆ ಇಡಲು ಮುಂದಾಗಿದ್ದು, ಬುಧವಾರ ಹಿರಿಯೂರಿನ ವಿವಿಧ ಕಚೇರಿಗೆ ಭೇಟಿ ನೀಡಿ, ಹಾಜರಾತಿ ಪರಿಶೀಲಿಸಿದರು. ತಡವಾಗಿ ಬಂದವರಿಗೆ, ನಾಗರಿಕರಿಗೆ ಸ್ಪಂದನೆ ಮಾಡದೇ ಇರುವ ಅಧಿಕಾರಿಗಳ ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು, ಸಿಬ್ಬಂದಿ ಸಕಾಲಕ್ಕೆ ಕಚೇರಿಗೆ ಬರುತ್ತಿಲ್ಲ, ಸಾರ್ವಜನಿಕರ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದಾರೆಂಬ ಆರೋಪಗಳ ಹಿನ್ನೆಲೆ ಅನಿರೀಕ್ಷಿತ ಭೇಟಿ ನೀಡಿದ ಸಚಿವ ಸುಧಾಕರ್, ಅಲ್ಲಿನ ಪರಿಸ್ಥಿತಿಯ ಖುದ್ದು ಅವಲೋಕಿಸಿದರು.
ಆಹಾರ ಇಲಾಖೆ, ಸಬ್‌ರಿಜಿಸ್ಟರ್ ಕಚೇರಿ, ಪಡಸಾಲೆ, ಪಹಣಿ ಕೇಂದ್ರ, ಜನನ ಮರಣ ಇಲಾಖೆ, ಭೂ ದಾಖಲೆಗಳ ಇಲಾಖೆಗಳಿಗೆ ಭೇಟಿ ನೀಡಿ, ಸ್ಥಳದಲ್ಲಿದ್ದ ಸಾರ್ವಜನಿಕರ ಅಹವಾಲು ಆಲಿಸಿದರು. ಹಾಜರಾತಿ ಪುಸ್ತಕದಲ್ಲಿ ಇಲಾಖೆಯ ಕೆಲಸ ಎಂದು ನಮೂದಿಸಿ ಬೇರೆ ಕಡೆ ಹೋಗಿದ್ದ ಆಹಾರ ನೀರಿಕ್ಷಕ ಲಿಂಗರಾಜ… ಅವರನ್ನು ಸಾರ್ವಜನಿಕರ ಎದುರಲ್ಲೇ ತರಾಟೆಗೆ ತೆಗೆದುಕೊಂಡರು. ನಿನ್ನೆ ಬೆಂಗಳೂರಿಗೆ ಬಂದಿದ್ದೆ. ಆದರೆ ಇಂದು ಇಲ್ಲಿ ಬೇರೆಯದೇ ತರಹ ಮಾಹಿತಿ ಇದೆ. ಇಷ್ಟುಸಾಕಲ್ಲವೇ ಮನೆಗೆ ಕಳಿಸಲು ಎಂದು ಸಚಿವರು ಪ್ರಶ್ನಿಸಿದರು.
ದಂಡ ಕಟ್ಟಲಾಗದೇ ಪೊಲೀಸ್ ಠಾಣೆ ಮುಂದಿದ್ದ ಲಾರಿ ಚಾಲಕ 8 ದಿನದಿಂದ ನಾಪತ್ತೆ: ಪೊಲೀಸರ ಮೇಲೆ ಅನುಮಾನ
ಸಾರ್ವಜನಿಕರು ಆಹಾರ ನೀರಿಕ್ಷಕರ ಮೇಲೆ ಹಲವು ಕರ್ತವ್ಯ ಲೋಪ, ಉದಾಸೀನತೆ ಕುರಿತಂತೆ ಆರೋಪಗಳ ಮಳೆ ಸುರಿಸಿದರು. ಎಲ್ಲವನ್ನು ಆಲಿಸಿದ ಸಚಿವ ಸುಧಾಕರ್ ಸಾರ್ವಜನಿರ ಅಲೆದಾಡಿಸುವುದು, ಕಚೇರಿ ಕೆಲದ ವೇಳೆ ಏನೇನೋ ನಮೂದಿಸಿ ಹೊರ ಹೋದರೆ ಸುಮ್ಮನಿರಲು ಆಗೋಲ್ಲ. ಕ್ರಮ ಕೈಗೊಳ್ಳಬೇಕಾಗೀತೆಂದು ಎಚ್ಚರಿಸಿದರು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ ಎಂದು ಕಟ್ಟುನಿಟ್ಟಿನ ಆದೇಶ ಮಾಡಿದರು.
ಅಲ್ಲಿಂದ ಭೂ ದಾಖಲೆಗಳ ಇಲಾಖೆಯ ಒಳ ಹೊಕ್ಕ ಸಚಿವರಿಗೆ ಸಾರ್ವಜನಿಕರು ಆರೋಪಗಳ ಸುರಿಮಳೆ ಸುರಿಸಿದರು. ಅರ್ಜಿ ಕೊಟ್ಟತಕ್ಷಣ ಇಲ್ಲಿ ಕೆಲಸಗಳು ಆಗುತ್ತಿಲ್ಲ. ವಾರಗಟ್ಟೆ, ಕೆಲವು ಬಾರಿ ತಿಂಗಳುಗಟ್ಟಲೆ ಸತಾಯಿಸುತ್ತಾರೆ. ರೈತರು ಮನೆ ಕೆಲಸ ಬಿಟ್ಟು ಕಚೇರಿ ಅಲೆಯುವಂತಾಗಿದೆ. ಇನ್ನು ಮೇಲಾದರೂ ಜನರ ಕೆಲಸ ಮಾಡಿಕೊಡಲು ಹೇಳಿ ಎಂದು ರೈತರು ವಿನಂತಿಸಿದರು. ಈ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಇಲ್ಲಿವರೆಗೆ ಹೇಗಿತ್ತು, ಏನಾಗಿತ್ತು ಎಂಬುದು ಬೇಡ. ನನ್ನ ಆಡಳಿತದ ಅವಧಿಯಲ್ಲಿ ತಾಲೂಕಿನ ಜನಕ್ಕೆ ತೊಂದರೆಯಾಗಬಾರದು. ಸಾರ್ವಜನಿಕರನ್ನು ರೈತರನ್ನು ಸತಾಯಿಸದೆ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
Shakti Scheme: ಚಿತ್ರದುರ್ಗದಲ್ಲಿ ಶಕ್ತಿ ಯೋಜನೆಗೆ ವೀರೇಂದ್ರ ಪಪ್ಪಿ ಚಾಲನೆ
ಸಬ…ರಿಜಿಸ್ಟಾರ್ ಕಚೇರಿಯಲ್ಲಿ ಲಂಚದ ಪ್ರಸ್ತಾಪ ಮಾಡಿದ ಸಾರ್ವಜನಿಕರು, ಸಮಯಕ್ಕೆ ಸರಿಯಾಗಿ ಕೆಲಸ ಆಗುವುದಿಲ್ಲ ಎಂದು ದೂರಿದರು. ಬದಲಾಗಬೇಕಿರುವುದು ತುಂಬಾ ಇದೆ. ಬದಲಾವಣೆ ಮಾಡಿಕೊಂಡರೆ ಒಳ್ಳೆಯದು ಎಂದು ಅಧಿಕಾರಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದರು. ಆಸ್ತಿ ನೋಂದಣಿ ಬರುವವರಿಗೆ ಸರಿಯಾದ ಮಾಹಿತಿ ನೀಡಿ ಸಕಾಲದಲ್ಲಿ ಕೆಲಸ ಮಾಡಿಕೊಡಬೇಕು. ಲಂಚದ ಬೇಡಿಕೆ ಇಟ್ಟರೆ ಪರಿಣಾಮ ಚೆನ್ನಾಗಿರುವುದಿಲ್ಲವೆಂದು ಸುಧಾಕರ್ ಎಚ್ಚರಿಸಿದರು.