Asianet Suvarna News Asianet Suvarna News

ಲೋಕಾಯುಕ್ತಕ ಅಧಿಕಾರ ಚಲಾಯಿಸಬೇಕು : ಸಂತೋಷ್‌ ಹೆಗ್ಡೆ

ಲೋಕಾಯುಕ್ತಕ್ಕೆ ಈಗಲೂ ಪರಮಾಧಿಕಾರ ಇದೆ. ಅದರ ಜವಾಬ್ದಾರಿ ವಹಿಸಿಕೊಳ್ಳುವವರು ತಮ್ಮ ಅಧಿಕಾರವನ್ನು ಚಲಾಯಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು.

 The Lokayukta is still Have The Supreme Power  snr
Author
First Published Jan 25, 2023, 5:57 AM IST

  ಮೈಸೂರು :  ಲೋಕಾಯುಕ್ತಕ್ಕೆ ಈಗಲೂ ಪರಮಾಧಿಕಾರ ಇದೆ. ಅದರ ಜವಾಬ್ದಾರಿ ವಹಿಸಿಕೊಳ್ಳುವವರು ತಮ್ಮ ಅಧಿಕಾರವನ್ನು ಚಲಾಯಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಾಯಕ್ತಕ್ಕೆ ಅಧಿಕಾರ ಈಗಲೂ ಇದೆ. ಆದರೆ, ಸರ್ಕಾರ ಅವರಿಗೆ ಬೇಕಾದವರನ್ನು ಲೋಕಾಯುಕ್ತಕ್ಕೆ ಕಳುಹಿಸಲಾಗುತ್ತಿದೆ. ಅಧಿಕಾರದಲ್ಲಿ ಇದ್ದವರಿಗೆ ಬಲಿಷ್ಠ ಲೋಕಾಯುಕ್ತ ಬರುವುದು ಬೇಕಿಲ್ಲ. ಕರ್ನಾಟಕದ ಲೋಕಾಯುಕ್ತಕ್ಕೆ ಹೋಲಿಸಿದರೆ ದೇಶದಲ್ಲಿ ಬೇರೆ ಬಲಿಷ್ಠ ಸಂಸ್ಥೆಯೇ ಇಲ್ಲ ಎಂದರು.

ಕರ್ನಾಟಕದ ಲೋಕಾಯುಕ್ತಕ್ಕೆ ಬರುವ ಮೊದಲು ನಾನು ಕೂಪ ಮಂಡೂಕನಂತಿಂದ್ದೆ. ಅಲ್ಲಿಗೆ ಬಂದ ಮೇಲೆ ಸಮಾಜದಲ್ಲಿ ಎಂತಹ ಕಠಿಣ ಸಮಸ್ಯೆ ಇವೆ ಎನ್ನೋದು ಗೊತ್ತಾಯ್ತು. ಸಮಾಜದಲ್ಲಿ ಶ್ರೀಮಂತನಾಗಿದ್ದರೆ ಸಾಕು ಅವನಿಗೆ ಸಮಾಜ ಸಲಾಂ ಹೊಡೆಯುತ್ತದೆ. ಜೈಲಿಗೆ ಹೋಗಿ ಬರುವವರಿಗೆ ಇವತ್ತು ಅದ್ದೂರಿ ಸ್ವಾಗತ ಸಿಗುತ್ತದೆ. ಸಮಾಜದಲ್ಲಿ ಇವತ್ತು ಪ್ರಮಾಣಿಕತೆಗೆ ಬೆಲೆ ಇಲ್ಲ. ಒಂದು ದುರಾಸೆಯ ರೋಗ, ಮತ್ತಷ್ಟುಬೇಕು ಎನ್ನುವ ಆಸೆ. ಇಂದು ಮನುಷ್ಯನಿಗೆ ದುರಾಸೆ ಹೆಚ್ಚಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ಅಸಮಾಧಾಮ ವ್ಯಕ್ತಪಡಿಸಿದರು.

50ರ ದಶಕದಲ್ಲಿ ಜೀಪ್‌ ಹಗರಣದಲ್ಲಿ ನಮ್ಮ ದೇಶಕ್ಕಾದ ನಷ್ಟನೂರಾರು ಕೋಟಿ. ನಂತರ ಕಾಮನ್‌ವೆಲ್ತ್‌ ಗೇಮ್‌ ಹಗರಣ, 2ಜಿ ಹಗರಣ ಬಂತು, ಕಲ್ಲಿದ್ದಲು ಹಗರಣ. ಹಗರಣಗಳಿಂದ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಯಿತು. ಈಗ ಶೇ.40 ಕಮಿಷನ್‌ ಸರ್ಕಾರ ಅಂತಾರೆ, ಮೊದಲು ಶೇ.10 ಅಂತಿದ್ರು. ಅಡಿಕೆ ಕದ್ರೂ ಕಳ್ಳತನ, ಆನೆ ಕದ್ರೂ ಕಳ್ಳತನ. ಚೇನಾದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆಯಿದೆ,

ನಮ್ಮ ದೇಶದಲ್ಲಿ ಬರಿ 7 ವರ್ಷ ಶಿಕ್ಷೆ ಮಾತ್ರ ಎಂದರು.

ನಾನು ಯಾವ ರಾಜಕೀಯ ಪಕ್ಷದ ಪರ ಇಲ್ಲ. ನನ್ನ ಅಕ್ರಮ ಗಣಿ ವರದಿಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಹೆಸರು ಕೊಟ್ಟಿದ್ದೆ ಅದರಲ್ಲಿ, ಎಲ್ಲಾ ಪಕ್ಷದ ನಾಯಕರೂ ಇದ್ದರು. ಲೋಕಾಯುಕ್ತಕ್ಕೆ ಇದ್ದ ಅಧಿಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೆವು. ಅದನ್ನು ತೆಗೆದು ಎಸಿಬಿ ಜಾರಿಗೆ ತಂದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನಿನಲ್ಲಿ ಸರ್ಕಾರಿ ವೇತನ ಪಡೆವ ವ್ಯಕ್ತಿ ಒಬ್ಬ ಪಬ್ಲಿಕ್‌ ಸರ್ವೆಂಟ್‌. ಆದರೆ ಈ ಕಾಲದಲ್ಲಿ ಅವರಿಗೆ ಈ ಭಾವನೆ ಇದೆಯಾ?ಭ್ರಷ್ಟಾಚರಾರಕ್ಕೆ ಮದ್ದಿಲ್ಲ. ಲೋಕಯುಕ್ತವನ್ನು ಮುಚ್ಚಿ ಹಾಕಿ ಎಸಿಬಿ ತಂದರು. ಎಸಿಬಿ ಬಂದ ಮೇಲೆ ಎಷ್ಟುರಾಜಕಾರಣಿಗಳ ಮೇಲೆ ಕ್ರಮ ಜರುಗಿಸಿದೆ? ಎಷ್ಟುಜನರಗೆ ಶಿಕ್ಷೆ ಕೊಡಿಸಿದೆ? ಈಗ ಅದನ್ನು ಮುಚ್ಚಿ ಮತ್ತೆ ಲೋಕಾಯುಕ್ತ ತಂದಿದೆ. ಆದರೆ ಅಲ್ಲಿಗೆ ಸರ್ಕಾರ, ಚುನಾಯಿತ ಜನಪ್ರತಿನಿಧಿಗಳ ಹಸ್ತಕ್ಷೇಪ ಇರಬಾರದು ಎಂದು ಅವರು ಹೇಳಿದರು.

ನ್ಯಾಯಾಲಯಗಳು ಪ್ರಕರಣಗಳನ್ನು ದೀರ್ಘ ಕಾಲ ಎಳೆದುಕೊಂಡು ಹೋಗುವುದನ್ನು ಬಿಡಬೇಕು. ಗೆದ್ದವನು ಸೋತ, ಸೋತವನು ಸತ್ತ ಅನ್ನುವ ಹಾಗೆ ಆಗಬಾರದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜವೇ ಕಾರಣವಾಗಿದೆ ಎಂದರು.

ನನಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಬಂದಿರುವ ಎಲ್ಲಾ ಹಣಕಾಸನ್ನು ಅನಾಥಾಶ್ರಮ, ಸಂಘ ಸಂಸ್ಥೆಗಳಿಗೆ ಕೊಟ್ಟಿದ್ದೇನೆ. ಯಾರಿಂದಲೂ ಒಂದು ರೂಪಾಯಿ ಪಡೆದಿಲ್ಲ. ಸ್ವಂತವಾಗಿ ದುಡಿದ ಹಣದಿಂದ ಅಪಾರ್ಚ್‌ಮೆಂಟ್‌ನಲ್ಲಿ ಒಂದು ಮನೆ ಖರೀದಿ ಮಾಡಿ ಜೀವನ ಮಾಡುತ್ತಿದ್ದೇನೆ. ಯಾಕೆಂದರೆ ನಾನು ಇನ್ನೊಬ್ಬರಿಗೆ ಹೇಳುವಾಗ ಮೊದಲು ನಾನು ಶುದ್ದವಾಗಿರಬೇಕು ಅನ್ನೋದು ನನ್ನ ನಂಬಿಕೆ ಎಂದು ಅವರು ತಿಳಿಸಿದರು.

ಮಾನವೀಯತೆ ಅನ್ನೋದು ನಮ್ಮ ಹಿರಿಯರು ಕಟ್ಟಿದಂತಹ ಒಂದು ಮೌಲ್ಯ. ಹುಟ್ಟಿದಾಗ ಮಾನವನಾಗಿ ಹುಟ್ಟದಿದ್ದರೂ ಪರವಾಗಿಲ್ಲ, ಬೆಳೆಯುವಾಗ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಬದುಕಿ, ಸಾಯುವಾಗ ಮನುಷ್ಯನಾಗಿ ಸತ್ತರೆ ಸಾಕು. ಎಲ್ಲಾ ಹುದ್ದೆಯಲ್ಲೂ ಇಂದು ದುರಾಸೆ ಇದೆ. ಮಾನವೀಯತೆ ಅನ್ನೋದು ಇಂದು ಮರೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಮಣ್ಯ, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ, ನಗರ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.

ಲೋಕಾಯುಕ್ತವನ್ನು ಮುಚ್ಚುವ ಪ್ರಯತ್ನ ಮಾಡಿದರು, ಅದಕ್ಕೆ ಧೈರ್ಯ ಬರಲಿಲ್ಲ. ಸಂಸ್ಥೆಯ ಜನಪ್ರಿಯತೆ, ನಂಬಿಕೆ ಕಡಿಮೆ ಮಾಡಲು ಭ್ರಷರನ್ನು ನ್ಯಾಯಮೂರ್ತಿ ಮಾಡಿದರು. ನಂತರದಲ್ಲಿ ಎಸಿಬಿ ಮಾಡಿದರು, ಇದೀಗ ಮತ್ತೆ ಲೋಕಾಯಕ್ತ ಬಂದಿದೆ. ದೊಡ್ಡ ಅಧಿಕಾರಗಳ ವಿರುದ್ಧ ಪುರಾವೆಗಳ ಸಹಿತ ಕಾರ್ಯಾಚರಣೆ ಮಾಡಬೇಕಿದೆ.

- ನ್ಯಾ. ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ

Follow Us:
Download App:
  • android
  • ios