Asianet Suvarna News Asianet Suvarna News

ಪಾಳು ಬಿದ್ದಿರುವ ಜಲವಿದ್ಯುತ್‌ ಘಟಕ ಸ್ಥಾಪನೆಗೆ ಖರೀದಿಸಿದ್ದ ಜಮೀನು

ತಲಕಾಡು ಮಾಧವಮಂತ್ರಿ ಅಣೆಕಟ್ಟೆಯ ದಂಡೆಯಲ್ಲಿ ಜಲವಿದ್ಯುತ್ ಘಟಕ ಸ್ಥಾಪನೆಗೆ ಖರೀದಿಸಿದ್ದ ರೈತರ ಜಮೀನು ಉದ್ದೇಶಿತ ಪ್ರಯೋಜನಕ್ಕೆ ಬರದೆ ಈಗ ಅದು ಪಾಳು ಬಿದ್ದಿದೆ

The land purchased for setting up a derelict hydroelectric plant snr
Author
First Published Nov 4, 2023, 10:16 AM IST

ಅಕ್ರಂಪಾಷ

 ತಲಕಾಡು :  ತಲಕಾಡು ಮಾಧವಮಂತ್ರಿ ಅಣೆಕಟ್ಟೆಯ ದಂಡೆಯಲ್ಲಿ ಜಲವಿದ್ಯುತ್ ಘಟಕ ಸ್ಥಾಪನೆಗೆ ಖರೀದಿಸಿದ್ದ ರೈತರ ಜಮೀನು ಉದ್ದೇಶಿತ ಪ್ರಯೋಜನಕ್ಕೆ ಬರದೆ ಈಗ ಅದು ಪಾಳು ಬಿದ್ದಿದೆ.

ಇಲ್ಲಿನ ಮಾಧವಮಂತ್ರಿ ಅಣೆಕಟ್ಟೆಯಲ್ಲಿ ಜಲ ವಿದ್ಯುತ್ ಉತ್ಪಾದನೆ ಸಲುವಾಗಿ ಕಟ್ಟೆ ದಂಡೆಯ ಎಸ್ಸಿ, ಎಸ್ಟಿ ರೈತರಿಂದ 35 ವರ್ಷಗಳ ಹಿಂದೆ ಖಾಸಗಿ ಕಂಪನಿ ಭೂಮಿ ಖರೀದಿಸಿತ್ತು. ಕಂಪನಿ ಖರೀದಿಸಿದ್ದ 5 ಎಕರೆ 20 ಗುಂಟೆ ಭೂಮಿಯನ್ನು ಈಗ ಬಂಡಳವಾಳ ಶಾಹಿಗಳಿಗೆ ಮಾರಾಟ ಮಾಡುವ ಪ್ರಯತ್ನ ನಡೆಸಿದೆ ಎಂದು ಭೂಮಿ ಕಳೆದುಕೊಂಡಿರುವ ಈ ಭಾಗದ ತುಂಡು ರೈತರು ಸಂಕಟ ತೋಡಿಕೊಂಡಿದ್ದಾರೆ.

ಇಲ್ಲಿ ಜಲ ವಿದ್ಯುತ್ ಘಟಕ ಸ್ಥಾಪನೆಯಿಂದ ಹೋಬಳಿಗೆ ಜನತೆ ಎದುರಿಸುತ್ತಿರುವ ವಿದ್ಯುತ್ ಅಭಾವ ನೀಗಲಿದೆ, ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ಸಿಗಲಿದೆ, ಮಾದರಿ ಗ್ರಾಮ ಮಾಡುತ್ತೇವೆ ಎಂಬ ಭರವಸೆಯಲ್ಲಿ, ಈ ಭಾಗದ ರೈತರು ವರ್ಷದಲ್ಲಿ ಎರಡು ಫಸಲು ಭತ್ತದ ಫಸಲು ಬೆಳೆಯುತ್ತಿದ್ದ ಭೂಮಿಯನ್ನು ಖಾಸಗಿ ಕಂಪನಿ ಹೆಸರಿಗೆ 1996 ಬರೆದು ಕೊಟ್ಟಿದ್ದರು.

ಆದರೆ ಇಲ್ಲಿನ ಮಾಧವಮಂತ್ರಿ ನಾಲೆಯ ಎಡದಂಡೆಯಲ್ಲಿ ಘಟಕ ಸ್ಥಾಪನೆಯಿಂದ ನಾಲೆಯಲ್ಲಿ ನೀರು ಹರಿಯಲು‌ತೊಡಕಾಗುತ್ತದೆ ಎಂದು ಈ ಭಾಗದ ರೈತರು ಆಗ ಭಾರಿ ಪ್ರತಿರೋಧ ಒಡ್ಡಿದ ಹಿನ್ನೆಲೆ, ಅನ್ಯಮಾರ್ಗವಿಲ್ಲದೆ ಕಂಪನಿ ಅಣೆಕಟ್ಟೆ ಬಲದಂಡೆ (ಹೆಮ್ಮಿಗೆ) ಕಡೆಗೆ ಯೋಜನಾ ಘಟಕ ಸ್ಥಳಾಂತರ ಮಾಡಿ ಕೊಂಡಿತು.

ಹೀಗಾಗಿ ಕಟ್ಟೆಯ ಎಡದಂಡೆಯಲ್ಲಿ ಸ್ಥಾಪನೆ ಯಾಗಬೇಕಿದ್ದ ಘಟಕ ಬಲದಂಡೆ ಕಡೆ ಸ್ಥಾಪನೆಗೊಂಡಿದ್ದರಿಂದ, ತಲಕಾಡು ಎಡದಂಡೆಯ ಬಳಿ ಘಟಕ ಸ್ಥಾಪನೆಗೆಂದು ರೈತರಿಂದ ಖರೀಧಿಸಿದ್ದ ಭೂಮಿ ಪ್ರಯೋಜನಕ್ಕೆ ಬರದೆ ಕಂಪನಿ ಪಾಳು ಗೆಡವಿತು.

ಹೀಗೆ ಸುಮಾರು ವರ್ಷಗಳಿಂದ ಇಲ್ಲಿ ಪಾಳು ಬಿದ್ದಿರುವ ಭೂಮಿಯನ್ನು, ದಳ್ಳಾಳಿಗಳ ಮೂಲಕ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಪ್ರಯತ್ನ ನಡೆಸುತ್ತಿದೆ ಎಂದು ಇಲ್ಲಿ ಭೂಮಿ ಕಳೆದುಕೊಂಡಿರುವ ರೈತರಲ್ಲಿ ಕಳವಳಕ್ಕೆ ಕಾರಣವಾಗಿದೆ.

ಕಂಪನಿಗೆ ರೈತರು ಭೂಮಿ ಮಾರಾಟ ಮಾಡಿದ ನಂತರ 35 ವರ್ಷಗಳಿಂದ ಯಾವುದೇ ಬೆಳೆ ಬೆಳೆಯದೆ ಪಾಳು ಗೆಡವಲಾಗಿದೆ. ಇತ್ತ ಕಂಪನಿಗೂ ಉಪಯೋಗಕ್ಕೆ ಬರದೆ, ಅತ್ತ ವರ್ಷದ ಕೂಳಿಗೆ ದಾರಿ ಮಾಡಿಕೊಳ್ಳುತ್ತಿದ್ದ ರೈತರಿಗೂ ಪ್ರಯೋಜನಕ್ಕೆ ಅತಂತ್ರವಾಗಿದೆ.

35 ವರ್ಷಗಳ ಹಿಂದೆ ರೈತರು ಅಣೆಕಟ್ಟೆ ದಂಡೆಯಲ್ಲಿರುವ ಬೆಲೆಬಾಳುವ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಕಳೆದುಕೊಂಡಿದ್ದಾರೆ. ಜಲ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಒಳ್ಳೆಯ ಉದ್ದೇಶದ ಸಲುವಾಗಿ ಈ ಭಾಗದ ರೈತರು ಭೂಮಿ ಕಳೆದುಕೊಂಡಿದ್ದಾರೆ.

ಉದ್ದೇಶಿತ ಘಟಕ ಸ್ಥಾಪನೆಯಾಗದೆ ಪಾಳುಬಿದ್ದಿರುವ ತುಂಡು ಭೂಮಿಯ ರೈತರ ಜಮೀನನ್ನು ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಬಡ ರೈತರಿಗೆ ಮರಳಿಸಲು ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಅಗತ್ಯ ಕ್ರಮ ವಹಿಸುವಂತೆ ವಡೆಯಾಂಡಹಳ್ಳಿ ರೈತ ನಂಜುಂಡಯ್ಯ ಒತ್ತಾಯಿಸಿದ್ದಾರೆ.

Follow Us:
Download App:
  • android
  • ios