ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸರ್ಕಾರವೇ ಕಾರಣ
- ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸರ್ಕಾರವೇ ಕಾರಣ
- ಮದನ್ ಗೋಪಾಲ್ ಸಲ್ಲಿಸಿರುವ ವರದಿ ಸಂಪೂರ್ಣ ಜಾರಿಯೇ ಸೂಕ್ತ ಪರಿಹಾರ: ತೀ.ನಾ.ಶ್ರೀ.
ಶಿವಮೊಗ್ಗ (ನ.6) : ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪುನರ್ವಸತಿ ಮಾಡಲಾಗಿತ್ತು. ಆದರೆ, ಈಗ 1980ರ ವನ್ಯಜೀವಿ ಕಾಯಿದೆ ಮುಂದಿಟ್ಟುಕೊಂಡು 56 ಆದೇಶಗಳನ್ನು ರದ್ದುಮಾಡಿ ಸಂತ್ರಸ್ತರನ್ನು ಖುಲ್ಲಾ ಮಾಡಲು ಸರ್ಕಾರ ಮುಂದಾಗಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಆರೋಪಿಸಿದರು.
Shivamogga: ಪ್ರಾಣ ರಕ್ಷಣೆ ಮಾಡುವ ವೈದ್ಯರಿಗೆ ಆಭಾರಿ: ಸಂಸದ ಬಿ.ವೈ.ರಾಘವೇಂದ್ರ
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1954 ರಿಂದ 1964ರ ಅವಧಿಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪುನರ್ವಸತಿ ಮಾಡಲಾಗಿತ್ತು. ಪರಿಸರವಾದಿಗಳು ಹಾಕಿದ ಕೇಸಿನ ವಿಚಾರಣೆ ನಡೆಸಿದ ಹೈಕೋರ್ಚ್ ಶಿವಮೊಗ್ಗ ತಾಲೂಕಿನ ಕೂಡಿ ಹಾಗೂ ಕೂರಂಬಳ್ಳಿಯ ಎರಡು ಸರ್ವೇ ನಂಬರ್‌ಗಳ ಡಿನೋಟಿಫೀಕೇಶನ್ ರದ್ದುಮಾಡಿದೆ. ಆದರೆ, ಸರ್ಕಾರ ಎಲ್ಲವನ್ನೂ ಸೇರಿಸಿಕೊಂಡು 56 ಅಧಿಸೂಚನೆಯನ್ನು ರದ್ದು ಮಾಡಿದೆ. ಹೀಗಾಗಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರಿಗೂ ನೋಟಿಸ್ ನೀಡಲು ಸರ್ಕಾರ ಮುಂದಾಗಿದೆ ಎಂದು ದೂರಿದರು.
ಡಿನೋಟಿಫಿಕೇಶನ್ ಮಾಡಲು ರಾಜ್ಯ ಸರ್ಕಾರ ಕೇಂದ್ರದ ಅನುಮತಿ ಪಡೆಯಲು ಈಗ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯಲ್ಲಿ 56 ಪ್ರಕರಣಗಳ ಬದಲಾಗಿ ಕೇವಲ 26 ಅಧಿಸೂಚನೆಗಳನ್ನು ಉಲ್ಲೇಖಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದಾಗಿ ಶರಾವತಿ ಸಂತ್ರಸ್ತರ ಎಲ್ಲ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರ ಆಗುವುದಿಲ್ಲ. ಕಂದಾಯ ಇಲಾಖೆಯ ಈ ಹಿಂದಿನ ಕಾರ್ಯದರ್ಶಿ ಮದನ್ ಗೋಪಾಲ್ ಅವರು, ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತಂದರೆ ಮಾತ್ರ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರವಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಇನ್ನೂ ಜೀವಂತವಾಗಿ ಇರಲಿದೆ ಎಂದು ತಿಳಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅವರಿಗೆ ವಾಸಕ್ಕೆ ಮನೆ ಹಾಗೂ ಜೀವನೋಪಾಯಕ್ಕೆ ಈಗಿರುವ ಜಮೀನು ದಾಖಲೆಗಳನ್ನು ಸರ್ಕಾರದ ಒದಗಿಸದಿದ್ದರೆ ಜಿಲ್ಲೆಯಲ್ಲಿ ಸಚಿವರು, ಶಾಸಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ ಹೋರಾಟ ನಡೆಸಲಾಗುತ್ತದೆ. ಸಂತ್ರಸ್ತರ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತದೆ. ಸಂತ್ರಸ್ತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಸೊರಬ ಹಾಗೂ ಸಾಗರ ಶಾಸಕರು ಹೋರಾಟಕ್ಕೆ ಬೆಂಬಲಿಸಿ ಬರಲಿ. ಇಲ್ಲದಿದ್ದರೆ ಅವರು ಪಕ್ಷಕ್ಕೆ ಅಂಟಿಕೊಂಡಿದ್ದೇವೆಂದು ಅಲ್ಲೇ ಇರಲಿ ಎಂದು ಕುಟುಕಿದರು.
ಕೆರೆಹಳ್ಳಿ ರಾಮಪ್ಪ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರು ಒತ್ತುವರಿದಾರರಲ್ಲ. ಒಂದು ಕಡೆ ಜಮೀನು ಕಳೆದುಕೊಂಡು ಬಂದು ಇನ್ನೊಂದು ಕಡೆ ಬದುಕು ಕಟ್ಟಿಕೊಂಡಿದ್ದಾರೆ. ಯಾವುದೇ ಮೂಲ ಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ಇಂದಿಗೂ ವಾಸ ಮಾಡಲಾಗುತ್ತಿದೆ. ಈಗ ಅರಣ್ಯದ ಹೆಸರಿನಲ್ಲಿ ಸಾಗುವಳಿ ಭೂಮಿ ಕಸಿದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿ ಕಾರ್ಗಲ್‌ನಲ್ಲಿ ಸಭೆ ನಡೆಸಿ ಸಂತ್ರಸ್ತರ ಪುನರ್ವಸತಿಗೆ 19 ಆಶ್ವಾಸನೆಗಳನ್ನು ಲಿಖಿತವಾಗಿ ನೀಡಿದ್ದರು. ಅವು ಇಂದಿಗೂ ಪಾಲನೆಯಾಗಿಲ್ಲ. ಅಂದೇ ಪರಿಹರಿಸಬಹುದಾಗಿದ್ದ ಸಮಸ್ಯೆಯನ್ನು ಕಗ್ಗಂಟು ಮಾಡಲಾಗಿದೆ. ಕುಟುಂಬಕ್ಕೊಂದು ನಿವೇಶನ, ಸರ್ಕಾರಿ ಉದ್ಯೋಗ, ಕಳೆದುಕೊಂಡ ಭೂಮಿಗೆ 10 ಪಟ್ಟು ಪರಿಹಾರ ಹೀಗೆ ಹಲವು ಆಶ್ವಾಸನೆಗಳು ಇಂದಿಗೂ ಈಡೇರಿಲ್ಲ. ಇದರಿಂದಾಗಿ ಪಕ್ಷಾತೀತ ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಡಬ ರಾಘವೇಂದ್ರ, ಸುಧೀರ್ ಸಂಕ್ಲಾಪುರ, ಎನ್.ಬಿ.ರಘುಪತಿ ಇದ್ದರು.
ಮಾಜಿ ಸಚಿವ ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ: ಹುಡುಕಾಟಕ್ಕೆ ವಿಶೇಷ ತಂಡ ರಚನೆ
ಸಿಗಂದೂರು ಚೌಡಮ್ಮ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರ ನೇತೃತ್ವದಲ್ಲಿ ಹೋರಾಟ ಸಂಘಟಿಸಲಾಗುತ್ತದೆ. ಎಲ್ಲ ಸಂತ್ರಸ್ತರಿಗೆ ಇನ್ನು ಮೂರು ತಿಂಗಳಲ್ಲಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಇಲ್ಲದಿದ್ದರೆ ‘ನಮ್ಮ ನಡೆ ಲಿಂಗನಮಕ್ಕಿ ಅಣೆಕಟ್ಟೆಯ ಕಡೆ’ ಘೋಷಣೆಯೊಂದಿಗೆ ಅಣೆಕಟ್ಟು ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುತ್ತದೆ. ಏನೇ ಆದರೂ, ಸರ್ಕಾರವೇ ಅದಕ್ಕೆ ಹೊಣೆ
- ಜಿ.ಲೋಕೇಶ್, ಸಮಿತಿ ಅಧ್ಯಕ್ಷ, ತೀರ್ಥಹಳ್ಳಿ ತಾಲೂಕು