Hubballi : ಅಗ್ನಿಶಾಮಕ ಠಾಣೆಗಿಲ್ಲ ಶಾಶ್ವತ ಕಟ್ಟಡ
- ಅಗ್ನಿಶಾಮಕ ಠಾಣೆಗಿಲ್ಲ ಶಾಶ್ವತ ಕಟ್ಟಡ
- 2006ರಿಂದ ತಾತ್ಕಾಲಿಕ ಶೆಡ್‌ನಲ್ಲಿ ಕಾರ್ಯ
- ಸರ್ಕಾರದಿಂದ .3 ಕೋಟಿ ಬಿಡುಗಡೆ
- ಜಾಗ ಸಿಗದೆ ವಿಳಂಬ
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ (ನ.10) : ನಗರದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ 11ರ ಆವರಣದ ತಾತ್ಕಾಲಿಕ ಶೆಡ್‌ನಲ್ಲಿಯೇ 2006ರಿಂದ ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕ ಠಾಣೆ ಶಾಶ್ವತ ಕಟ್ಟಡದಿಂದ ವಂಚಿತಗೊಂಡಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 7 ಅಗ್ನಿಶಾಮಕ ಠಾಣೆಗಳಿವೆ. ಹುಬ್ಬಳ್ಳಿ, ಕುಂದಗೋಳ, ಕಲಘಟಗಿ, ಅಣ್ಣಿಗೇರಿ, ಧಾರವಾಡ, ಅಮರಗೋಳ, ಬೇಲೂರಿನಲ್ಲಿ ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 6 ಠಾಣೆಗಳು ಶಾಶ್ವತ ಹಾಗೂ ಸುಸಜ್ಜಿತ ಕಟ್ಟಡ ಹೊಂದಿವೆ.
ಗದಗ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ
ಆದರೆ ಹುಬ್ಬಳ್ಳಿ ನಗರ ಅಗ್ನಿಶಾಮಕ ಠಾಣೆಗೆ ಆರಂಭದಿಂದಲೂ ಕಟ್ಟಡದ ಸಮಸ್ಯೆ ಎದುರಾಗಿದೆ. ನಗರದ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಸಮೀಪ ಮಹಾನಗರ ಪಾಲಿಕೆ ವಲಯ ಕಚೇರಿ 11ರ ಆವರಣದಲ್ಲಿ ತಾತ್ಕಾಲಿಕವಾಗಿ ಹಾಕಲಾದ ತಗಡಿನ ಶೆಡ್‌ನಲ್ಲಿಯೇ ಠಾಣೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಠಾಣೆಗೆ ವರ್ಷಕ್ಕೆ 100ಕ್ಕೂ ಅಧಿಕ ಬೆಂಕಿ ಹೊತ್ತಿದ ಕುರಿತು ಕರೆಗಳು ಬರುತ್ತವೆ. 70ರಿಂದ 80 ನಿಲುಗಡೆ ಕರ್ತವ್ಯ, ವಿವಿಐಪಿಗೆ ಭದ್ರತೆ ಹಾಗೂ ಪ್ರತಿ ವರ್ಷ 20ಕ್ಕೂ ಹೆಚ್ಚಿನ ಶಾಲಾ-ಕಾಲೇಜುಗಳ ಅಣುಕು ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಠಾಣೆಯಲ್ಲಿ 1 ಜಿಲ್ಲಾ ಅಗ್ನಿಶಾಮಕ ಅಧಿಕಾರಿ, 1 ಅಗ್ನಿಶಾಮಕ ಠಾಣಾಧಿಕಾರಿ ಮತ್ತು 3 ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಸೇರಿ ಒಟ್ಟು 35 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗಿರುವ ತಾತ್ಕಾಲಿಕ ಶೆಡ್ ನಿರ್ಮಾಣವಾಗಿ 16 ವರ್ಷ ಕಳೆದಿದೆ. 2 ಜಲವಾಹನ, 3 ಜೀಪ್, 3 ದ್ವಿಚಕ್ರ ವಾಹನ ಇವೆ. ತಾತ್ಕಾಲಿಕ ಶೆಡ್‌ನಲ್ಲಿ ವಾಹನ ನಿಲುಗಡೆಗೆ ಸಮಸ್ಯೆ ಇದೆ. ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಸಿಬ್ಬಂದಿಯ ವಾಹನ ನಿಲುಗಡೆಗೂ ಜಾಗದ ತೊಂದರೆ ಇದೆ. ಪಕ್ಕದಲ್ಲಿಯೇ ತ್ಯಾಜ್ಯ ಸಂಸ್ಕರಣಾ ಘಟಕ ಇರುವುದರಿಂದ ದುರ್ವಾಸನೆ, ಸೊಳ್ಳೆ ಕಾಟ ಇದೆ. ಇದಕ್ಕೆಲ್ಲ ಶಾಶ್ವತ, ಸುಸಜ್ಜಿತ ಕಟ್ಟಡವೇ ಪರಿಹಾರವಾಗಿದೆ. ಆದರೆ ಅದಕ್ಕಾಗಿ ನಡೆಯುತ್ತಿರುವ ಪ್ರಕ್ರಿಯೆಗೆ ವೇಗ ದೊರೆಯಬೇಕು ಎನ್ನುತ್ತಾರೆ ಠಾಣೆಯ ಸಿಬ್ಬಂದಿ.
.3 ಕೋಟಿ ಬಿಡುಗಡೆ:
ಠಾಣೆಗೆ ನೂತನ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ . 3 ಕೋಟಿ ಬಿಡುಗಡೆ ಮಾಡಿ ಸೂಕ್ತ ಜಾಗ ನಿಗದಿ ಮಾಡುವಂತೆ ತಿಳಿಸಿದೆ. ಜಾಗ ಸಿಗದ ಕಾರಣ ವಿಳಂಬವಾಗಿತ್ತು. ಆದರೆ ಇತ್ತೀಚೆಗೆ ದೇವರಗುಡಿಹಾಳದಲ್ಲಿರುವ ಹುಡಾದ ಜಾಗ ಗುರುತಿಸಲಾಗಿದೆ. . 1.43 ಕೋಟಿ ಭರಿಸಿದರೆ 30 ವರ್ಷಕ್ಕೆ 1ಎಕರೆ 4 ಗುಂಟೆ ಜಾಗ ನೀಡಲು ಹುಡಾ ಕಮಿಷನರ್ ಒಪ್ಪಿಗೆ ನೀಡಿದ್ದಾರೆ. ಸರ್ಕಾರ ಮಟ್ಟದಲ್ಲಿ ಇದರ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎನ್ನುತ್ತಾರೆ ಅಗ್ನಿಶಾಮಕ ಅಧಿಕಾರಿಗಳು.
ಅಗ್ನಿ ಅವಘಡದಂತಹ ಅಪಾಯದ ಸಂದರ್ಭದಲ್ಲಿ ನೆರವಾಗುವ ಮೂಲಕ ಜನರ ಪ್ರಾಣ ಸಂರಕ್ಷಣೆಗೆ ಶ್ರಮಿಸುವ ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಸೂಕ್ತ ಕಟ್ಟಡವಿಲ್ಲ. ಹಾಗಾಗಿ ಠಾಣೆಗೆ ಅಗತ್ಯವಿರುವ ಶಾಶ್ವತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಮುಂದಾಗಲಿ ಎನ್ನುವುದು ಸಾರ್ವಜನಿಕ ಆಶಯವಾಗಿದೆ..
ಯಾದಗಿರಿ: ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಮಗುಚಿದ ಲಾರಿ: ಚಾಲಕನ ರಕ್ಷಣೆ
ಅಗ್ನಿಶಾಮಕ ಠಾಣೆಗೆ ನೂತನ ಕಟ್ಟಡ ನಿರ್ಮಿಸಲು ನಗರದಲ್ಲಿ ಹೊಸ ಜಾಗ ಇದುವರೆಗೆ ಸಿಕ್ಕಿರಲಿಲ್ಲ. ಈಗ ದೇವರಗುಡಿಹಾಳದಲ್ಲಿ 1 ಎಕರೆ 4 ಗುಂಟೆ ಗುರುತಿಸಲಾಗಿದೆ. ಜಾಗ ಹಸ್ತಾಂತರ ಪ್ರಕ್ರಿಯೆ ಇಲಾಖೆ ಹಂತದಲ್ಲಿದೆ. ಬಳಿಕ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಗಲಿದ್ದು, ಶೀಘ್ರದಲ್ಲಿ ಜಾಗ ಸಿಗುವ ಭರವಸೆ ಇದೆ.
ಚಂದ್ರಶೇಖರ ಭಂಡಾರಿ, ಹುಬ್ಬಳ್ಳಿ ನಗರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ