Asianet Suvarna News Asianet Suvarna News

ರಾಜ್ಯದಲ್ಲಿ ದಲಿತ ಸಿಎಂ ಹೋರಾಟ ನಿಲ್ಲದು: ಸಂಸದ ಜಿಗಜಿಣಗಿ

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಹೋರಾಟವನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ನನ್ನ ಕೊನೆ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

The fight for Dalit CM in the state will not stop  MP Jigajinagi snr
Author
First Published Dec 3, 2022, 5:15 AM IST

 ವಿಜಯಪುರ (ಡಿ.03):  ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಹೋರಾಟವನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ನನ್ನ ಕೊನೆ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಇಂಡಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರು ಅಯೋಗ್ಯರಾ? ಬುದ್ಧಿ ಇಲ್ಲವಾ? ಎಂದರು.

75 ವರ್ಷಗಳಲ್ಲಿ ಎಲ್ಲ ಸಮಾಜದವರು ಮುಖ್ಯಮಂತ್ರಿಗಳಾಗಿದ್ದಾರೆ (CM) . ಒಂದೆರಡು ಪರ್ಸೆಂಟ್‌ ಜನ ಇದ್ದವರು ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಶೇ. 24ರಷ್ಟುಇರುವ ಜನಾಂಗದವರು ಸಿಎಂ ಯಾಕಾಗಾಬಾರದು ಎಂದು ಹೇಳಿದರು.

ದಲಿತ ಮುಖ್ಯಮಂತ್ರಿ ಮಾಡುವಂತೆ ನಮ್ಮ ಪಕ್ಷಕ್ಕೆ ಆಗ್ರಹಿಸುತ್ತೇನೆ ಎಂದವರು ತಿಳಿಸಿದರು. ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ (Election)  ನಾಗಠಾಣ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಪ್ರತಿಯೊಬ್ಬರ ಅಭಿಪ್ರಾಯ ಇದೆ. ನಾನು ಕೂಡಾ ಆ ಭಾಗದಲ್ಲಿ ಶಾಸಕನಾಗಿ, ಸಚಿವನಾಗಿ ಸಾಕಷ್ಟುಕೆಲಸ ಮಾಡಿದ್ದೇನೆ. ನಾನೇ ಅಭ್ಯರ್ಥಿಯಾಗಬೇಕು ಎಂಬ ಒತ್ತಡ ಇದೆ. ಆದಾಗ್ಯೂ ನಾನು ಒಪ್ಪಿಕೊಂಡಿಲ್ಲ ಎಂದರು.

ನಮ್ಮದು ರಾಷ್ಟ್ರೀಯ ಪಕ್ಷ. ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ತೀರ್ಮಾನವನ್ನು ಪಕ್ಷದ ಮುಖಂಡರು ಕೈಗೊಳ್ಳುತ್ತಾರೆ. ವಿಧಾನಸಭೆಗೆ ಸ್ಪರ್ಧಿಸಲು ತಿಳಿಸಿದರೆ ವಿಧಾನಸಭೆಗೆ ಸ್ಪರ್ಧಿಸುತ್ತೇನೆ. ಇಲ್ಲವೆ ಲೋಕಸಭೆಗೆ ಸ್ಪರ್ಧಿಸಲು ತಿಳಿಸಿದರೆ ಲೋಕಸಭೆ ಸ್ಪರ್ಧಿಸಲು ಸಿದ್ದನಿದ್ದೇನೆ. ಎರಡೂ ಕಡೆ ಬೇಡವೆಂದರೆ ಮನೆಯಲ್ಲಿ ಆರಾಗವಾಗಿರುತ್ತೇನೆ ಎಂದು ಹೇಳಿದರು.

ದಲಿತ ಸಿಎಂಗೆ ಎಸ್‌ಸಿ,ಎಸ್‌ಟಿ ಮಠಾಧಿಪತಿಗಳ ಸಂಕಲ್ಪ ಸಭೆ

 ಬೆಳಗಾವಿ :  ಮುಂಬರುವ ಅಸೆಂಬ್ಲಿ ಚುನಾವಣೆ ಹೊತ್ತಿನಲ್ಲೇ 2023ಕ್ಕೆ ದಲಿತ ಮುಖ್ಯಮಂತ್ರಿ ಮಾಡಲು ಎಸ್‌ಸಿ, ಎಸ್‌ಟಿ ಸಮುದಾಯದ ಮಠಾಧೀಶರು ಸಂಕಲ್ಪ ಮಾಡಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್ಲೊಂದರಲ್ಲಿ ಸ್ವಾಭಿಮಾನಿ ಎಸ್‌ಟಿ,ಎಸ್‌ಸಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಠಾಧೀಶರ ಸಭೆ ನಡೆದಿದ್ದು, ಎಸಿ ಮತ್ತು ಎಸ್‌ಟಿ ಸಮುದಾಯಗಳು ಏಕೆ ಒಂದಾಗಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ.

ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರಜಾಪ್ರಭುತ್ವದ ಆಶಯ ಇರುವುದು ಬಹುಜನರು ಯಾರು ಇದ್ದಾರೆ ಅವರೇ ಅಧಿಕಾರಕ್ಕೆ ಬರಬೇಕು ಎಂದು. ಸಂವಿಧಾನ ರಚನೆಯಾಗಿ 73 ವರ್ಷ ಗತಿಸಿವೆ. ಆದರೆ, ಶಾಸನ ಮಾಡುವ ಅಧಿಕಾರದಲ್ಲಿ ನಾವು ಇಲ್ಲ ಎಂದರೆ ಹೇಗೆ? ಈ ನಿಟ್ಟಿನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಮಠಾಧೀಶರು ಎಲ್ಲರೂ ಸೇರಿ ನಾವು ಸಂಕಲ್ಪ ಮಾಡಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನಾವು ಸಭೆಗಳನ್ನು ಮಾಡುತ್ತೇವೆ ಎಂದು ಹೇಳಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಬಂಜಾರಾ ಗುರು ಪೀಠದ ಸಂತ ಸೇವಾಲಾಲ ಸ್ವಾಮೀಜಿ, ಚಿತ್ರದುರ್ಗ ಮೇದಾರ ಕೇತೇಶ್ವರ ಗುರುಪೀಠದ ಬಸವಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ದಲಿತ ನಾಯಕರ ದಮನ ಮಾಡುತ್ತಿರುವ ಕಾಂಗ್ರೆಸ್‌

 ವಿಜಯಪುರ :  ದಲಿತ ನಾಯಕರನ್ನು ಕಾಂಗ್ರೆಸ್‌ ಪಕ್ಷ ದಮನ ಮಾಡುತ್ತಲೇ ಇದೆ. ಆದರೆ, ದಲಿತರ ಬಗ್ಗೆ ನೈಜವಾದ ಕಾಳಜಿ ಹೊಂದಿದ ಬಿಜೆಪಿ ಮಾತ್ರ ದಲಿತ ನಾಯಕರಿಗೆ ದೊಡ್ಡ ಮಟ್ಟದ ನಾಯಕತ್ವ ಅವಕಾಶ ನೀಡುತ್ತ ತನ್ನ ಬದ್ಧತೆ ಪ್ರದರ್ಶಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ನಾಯಕರು ಮುಖ್ಯಮಂತ್ರಿಯಾಗುವ ಅವಕಾಶ ಅನೇಕ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಇತ್ತು. ಆದರೆ, ಕಾಂಗ್ರೆಸ್‌ ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಬಿ.ಬಸವಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಅವಕಾಶ ತಪ್ಪಿಸಿದ್ದು ವೀರಪ್ಪ ಮೊಯ್ಲಿ, ಡಾ.ಜಿ.ಪರಮೇಶ್ವರ ಅವರಿಗೆ ಎರಡು ಬಾರಿ ರಾಜ್ಯದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದರೂ ವ್ಯವಸ್ಥಿತ ಕುತಂತ್ರದಿಂದ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಅದೇ ತೆರನಾಗಿ ಜೊತೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲಾಯಿತು. ಈಗ ಸಂಸತ್‌ ವಿಕಪಕ್ಷ ನಾಯಕ ಸ್ಥಾನ ನೀಡಿದ್ದರೇ ಅದಕ್ಕೆ ಕಾರಣ ದಲಿತರಿಗೆ ನೀಡಿದ ಅವಕಾಶವಲ್ಲ. ಬದಲಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಈಗ ದಲಿತ ನಾಯಕರೇ ಇಲ್ಲದ ಅನಿವಾರ್ಯ ಕಾರಣದಿಂದ ಎಂದು ಗಂಭೀರವಾಗಿ ಆರೋಪಿಸಿದರು.

ಕಾಂಗ್ರೆಸ್‌ ಪಕ್ಷದಲ್ಲಿ ದಲಿತ ಸಿಎಂ ಸ್ಥಾನ ಸಿಗುವ ಹಂತದಲ್ಲಿ ದಲಿತ ನಾಯಕತ್ವವನ್ನು ವ್ಯವಸ್ಥಿತ ದಮನ ಮಾಡುತ್ತಲೇ ಬರಲಾಗುತ್ತಿದೆ. ಆದರೆ, ಬಿಜೆಪಿ ಪಕ್ಷ ಹೋರಾಟಕ್ಕೆ ಅವಕಾಶ ಇಲ್ಲದಂತೆ ಯಾರನ್ನೂ ಕೇಳದೇ, ಹೇಳದೇ ದಲಿತರಿಗೆ ರಾಷ್ಟ್ರಪತಿ ಹುದ್ದೆಯಿಂದ ಏನೆಲ್ಲ ರಾಜಕೀಯ ಅವಕಾಶ ನೀಡುತ್ತಿದೆ. ಹೀಗೆ ಕಾಂಗ್ರೆಸ್‌ ದಲಿತ ನಾಯಕತ್ವವನ್ನು ತುಳಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಲೇ ಇದೆ. ಕೇವಲ ಆರು ವರ್ಷದ ಹಿಂದೆ ಪಕ್ಷಕ್ಕೆ ಬಂದ ಸಿದ್ದರಾಮಯ್ಯ ಇಡೀ ದಲಿತ ನಾಯಕತ್ವವನ್ನೇ ದಮನ ಮಾಡಿ ಮುಖ್ಯಮಂತ್ರಿಯಾದರು ಎಂದು ದೂರಿದರು.

Follow Us:
Download App:
  • android
  • ios