ತಮಿಳುನಾಡಿಗೆ ನೀರು ಹರಿಸುವ ಕುರುಡು ಆದೇಶಕ್ಕೆ ಅನ್ನದಾತರ ಧಿಕ್ಕಾರ
ವಸ್ತು ಸ್ಥಿತಿಯನ್ನೇ ಅರಿಯದೆ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿರುವುದರ ವಿರುದ್ಧ ಜಿಲ್ಲೆಯ ಅನ್ನದಾತರು ಸಿಡಿದೆದ್ದಿದ್ದಾರೆ. ಕತ್ತೆಗಳ ಮೆರವಣಿಗೆ, ಗುಳೆ ಪ್ರತಿಭಟನೆ, ಅರೆಬೆತ್ತಲೆ ಪ್ರದರ್ಶನ, ರಸ್ತೆ ತಡೆಯೊಂದಿಗೆ ಮಂಗಳವಾರ ವಿನೂತನ ರೀತಿಯ ಚಳವಳಿ ನಡೆಸಿದರು. ನೀರಿನ ಪರಿಸ್ಥಿತಿಯನ್ನೇ ಅಧ್ಯಯನ ನಡೆಸದೆ ಕುರುಡು ಆದೇಶ ಹೊರಡಿಸುತ್ತಿರುವುದರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.
ಮಂಡ್ಯ : ವಸ್ತು ಸ್ಥಿತಿಯನ್ನೇ ಅರಿಯದೆ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿರುವುದರ ವಿರುದ್ಧ ಜಿಲ್ಲೆಯ ಅನ್ನದಾತರು ಸಿಡಿದೆದ್ದಿದ್ದಾರೆ. ಕತ್ತೆಗಳ ಮೆರವಣಿಗೆ, ಗುಳೆ ಪ್ರತಿಭಟನೆ, ಅರೆಬೆತ್ತಲೆ ಪ್ರದರ್ಶನ, ರಸ್ತೆ ತಡೆಯೊಂದಿಗೆ ಮಂಗಳವಾರ ವಿನೂತನ ರೀತಿಯ ಚಳವಳಿ ನಡೆಸಿದರು. ನೀರಿನ ಪರಿಸ್ಥಿತಿಯನ್ನೇ ಅಧ್ಯಯನ ನಡೆಸದೆ ಕುರುಡು ಆದೇಶ ಹೊರಡಿಸುತ್ತಿರುವುದರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.
ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಉಗ್ರವಾಗಿ ಖಂಡಿಸಿದ ರೈತರು, ನೀರನ್ನು ಸಂರಕ್ಷಿಸಲಾಗದ ಕಾಂಗ್ರೆಸ್ ಸರ್ಕಾರ ರೈತ ದ್ರೋಹಿ, ಜನದ್ರೋಹಿಯಾಗಿದೆ. ಅಧಿಕಾರಕ್ಕಾಗಿ ಜನರು ಮತ್ತು ರೈತರನ್ನು ಬಲಿಕೊಡುತ್ತಿದೆ. ಜನ ಜಾಗೃತರಾಗದಿದ್ದರೆ ನೀರನ್ನು ಎಂದಿಗೂ ಉಳಿಸಿಕೊಳ್ಳಲಾಗುವುದಿಲ್ಲ ಎಂದು ರೋಷಾವೇಷದಿಂದ ಹೇಳಿದರು.
ಕತ್ತೆಗಳ ಮೆರವಣಿಗೆ:
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ನೀರು ನಿರ್ವಹಣಾ ಪ್ರಾಧಿಕಾರಗಳಿಗಿಂತ ಕತ್ತೆಗಳೇ ಲೇಸು ಎಂದು ಅನ್ನದಾತರು ವ್ಯಂಗ್ಯವಾಡಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಅರೆಬೆತ್ತಲೆಯಾಗಿ ರೈತರು ಮೂರು ಕತ್ತೆಗಳೊಂದಿಗೆ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪ್ರಾಧಿಕಾರ ನಾಮಫಲಕಗಳನ್ನು ಕತ್ತೆಗಳ ಕುತ್ತಿಗೆಗೆ ಹಾಕಿ ಆಕ್ರೋಶ ಹೊರಹಾಕಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಪ್ರಾಧಿಕಾರ ಕತ್ತೆ ರೀತಿ ವರ್ತಿಸುತ್ತಿದೆ. ಎರಡೂ ರಾಜ್ಯಗಳ ನೀರಿನ ಪರಿಸ್ಥಿತಿಯನ್ನು ಅಧ್ಯಯನ ಮಾಡದೆ ಕುರುಡು ಆದೇಶ ಹೊರಡಿಸುತ್ತಿವೆ. ತಮಿಳುನಾಡಿನ ನೀರಿನ ಪಾಲನ್ನು ದೊರಕಿಸುವುದಕ್ಕಷ್ಟೇ ಆಸಕ್ತಿ ತೋರಿಸುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರಗಳು ಕರ್ನಾಟಕದ ಪಾಲಿನ ನೀರನ್ನು ಉಳಿಸಿಕೊಡುವ ಪ್ರಯತ್ನ ನಡೆಸುತ್ತಿಲ್ಲವೇಕೆ. ಹಾಗಾಗಿ ಸರ್ಕಾರಗಳು ಹಾಗೂ ಪ್ರಾಧಿಕಾರಕ್ಕಿಂತ ಕತ್ತೆಗಳೇ ಲೇಸು ಎಂದು ವ್ಯಂಗ್ಯವಾಡಿದರು.
ಪ್ರತಿಭಟನೆ ನಡೆಸುವ ವೇಳೆ ವಾಹನ ಸವಾರರು ಮುನ್ನುಗ್ಗಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರು ಸವಾರರನ್ನು ತರಾಟೆ ತೆಗೆದುಕೊಂಡರು. ನಿಮಗೆ ನೀರು ಬೇಡವೇ. ನೀವು ಕಾವೇರಿ ನೀರು ಕುಡಿಯೋಲ್ವಾ. ಇಂತಹ ನಿರ್ಲಕ್ಷ್ಯ ಧೋರಣೆಗಳಿಂದಲೇ ನಮಗೆ ಇಂತಹ ದುರ್ಗತಿ ಬಂದಿದೆ ಎಂದು ಕಿಡಿಕಾರಿದರು.
ರಸ್ತೆ ತಡೆ ಪ್ರತಿಭಟನೆ:
ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲವನ್ನು ಖಂಡಿಸಿ ನಗರದ ಸಾರಿಗೆ ಬಸ್ ನಿಲ್ದಾಣದ ಎದುರು ಬಸ್‌ಗಳನ್ನು ಅಡ್ಡಗಟ್ಟಿ ರೈತರು ಪ್ರತಿಭಟನೆ ನಡೆಸಿದರು. ಜೀವ ಜಲವನ್ನು ಉಳಿಸಿಕೊಳ್ಳಲಾಗದ ಸರ್ಕಾರದ ವೈಫಲ್ಯದ ವಿರುದ್ಧ ಆಕ್ರೋಶ ಹೊರಹಾಕಿದರು. ಸರ್ಕಾರ ಕೂಡಲೇ ನೀರು ನಿಲುಗಡೆಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಿಡಿಕಾರಿದರು.
ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ಹಿತ ರಕ್ಷಣಾ ಸಮಿತಿ ಸದಸ್ಯರು ರಸ್ತೆ ತಡೆ ನಡೆಸಿದರು. ಕದ್ದು ಮುಚ್ಚಿ ನೀರು ಬಿಟ್ತಾವ್ರಲ್ಲಪ್ರೋ.. ಎಂದು ಬಾಯಿ ಬಡಿದುಕೊಂಡರು. ವಚನ ಭ್ರಷ್ಟ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಮೊಳಗಿಸಿದರು. ಕಾವೇರಿ ವಿಷಯದಲ್ಲಿ ರಾಜ್ಯವನ್ನು ಕತ್ತಲಲ್ಲಿಟ್ಟಿರುವ ಪ್ರಾಧಿಕಾರ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಶ್ರೀರಂಗಪಟ್ಟಣದಲ್ಲಿ ಗುಳೆ ಹೋರಾಟ:
ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ಗುಳೆ ಚಳವಳಿಯೊಂದಿಗೆ ವಿನೂತನ ರೀತಿಯಲ್ಲಿ ಹೋರಾಟ ನಡೆಸಿದಿರು. ಪಾತ್ರೆ, ಬೆಡ್ ಶೀಟ್ ಸೇರಿ ಹಲವು ವಸ್ತುಗಳನ್ನು ಕಟ್ಟಿಕೊಂಡು ಗುಳೆ ಹೊರಟ ಅಣಕು ಪ್ರದರ್ಶಿಸಿದರು. ಕಾವೇರಿ ನದಿಯ ಸ್ನಾನಘಟ್ಟದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಜಿಲ್ಲೆಯ ರೈತನ್ನು ಗುಳೆ ಹೋಗುವ ಪರಿಸ್ಥಿತಿ ತಂದಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ರೈತರ ಕಿಡಿಕಾರಿದರು.
ನೀರು ಬಿಡುಗಡೆ ವಿರೋಧಿಸಿ ಹೆದ್ದಾರಿ ತಡೆ:
ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ರೈತ ಸಂಘದ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ಧ ಆಕ್ರೋಶಿಸಿದರು. ಪ್ರಾಧಿಕಾರ ವಾಸ್ತವ ಸ್ಥಿತಿಯನ್ನೇ ಅರಿಯದೇ ತಮಿಳುನಾಡಿಗೆ ನೀರು ಬಿಡಲು ಆದೇಶ ಮಾಡಿದೆ. ಕಾಂಗ್ರೆಸ್ ಸರ್ಕಾರ ಪ್ರಾಧಿಕಾರ ಆದೇಶ ಪಾಲಿಸಿ ರಾಜ್ಯದ ಹಿತ ಬಲಿಕೊಟ್ಟಿದೆ ಎಂದು ಕೆಂಡಾಮಂಡಲರಾದರು. ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆವೊಡ್ಡಿ ಪ್ರತಿಭಟನೆ ನಡೆಸಿದರು. ಹೆದ್ದಾರಿ ತಡೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮೂರ್ನಾಲ್ಕು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಆಗಿತ್ತು. ತತ್‌ಕ್ಷಣವೇ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರನ್ನು ನಿಲ್ಲಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.