ಮದ್ಯವ್ಯಸನದಿಂದ ದೇಶವೇ ಹಾಳಾಗಲಿದೆ

ಮದ್ಯವ್ಯಸನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಒಂದು ಕುಟುಂಬವಲ್ಲ, ಇಡೀ ದೇಶವೇ ಹಾಳಾಗಲಿದೆ. ಈ ಎಚ್ಚರಿಕೆಯನ್ನು ಎಲ್ಲಾ ಯುವಜನರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ಅಭಿಪ್ರಾಯಪಟ್ಟರು.

The country will be ruined by alcoholism snr

  ತುಮಕೂರು : ಮದ್ಯವ್ಯಸನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಒಂದು ಕುಟುಂಬವಲ್ಲ, ಇಡೀ ದೇಶವೇ ಹಾಳಾಗಲಿದೆ. ಈ ಎಚ್ಚರಿಕೆಯನ್ನು ಎಲ್ಲಾ ಯುವಜನರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ಅಭಿಪ್ರಾಯಪಟ್ಟರು.

ನಗರದ ಅಚರ್ಡ್‌ ಮದ್ಯ ವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ-2023ಗೆ ಚಾಲನೆ ನೀಡಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆ, ದಾಸ್ತಾನು ಮಾಡುವುದು,ಉತ್ಪಾದಿಸುವುದು, ಸಾಗಾಣಿಕೆ ಮಾಡುವುದು ಎಲ್ಲರೂ ಅಪರಾಧ. ಒತ್ತಡದಿಂದ ಹೊರಬರುವ ಸಲುವಾಗಿ ಆರಂಭಿಸುವ ಈ ಚಟ ನಿಮ್ಮ ಆರೋಗ್ಯದ ಜೊತೆಗೆ ಕುಟುಂಬದ ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತದೆ. ಮದ್ಯಪಾನ ಮತ್ತು ಮಾದಕ ಪದಾರ್ಥ ಸೇವನೆಯಿಂದ ನಿಮ್ಮ ಅರ್ಥಿಕ, ಸಾಮಾಜಿಕ ಸ್ಥಿತಿಗತಿಯೂ ಹಾಳಾಗಲಿದೆ. ಮನೆಯವರು ಮತ್ತು ಸಾಮಾಜದ ದೃಷ್ಟಿಯಲ್ಲಿ ನೀವೊಬ್ಬ ವಿವೇಕರಹಿತ ವ್ಯಕ್ತಿಯಾಗುವಿರಿ. ಹಾಗಾಗಿ ಮದ್ಯ ಮತ್ತು ಮಾದಕ ವಸ್ತುಗಳ ಚಟದಿಂದ ದೂರಾಗಿ, ಒಳ್ಳೆಯ ಬದುಕು ನಡೆಸುವಂತೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ಶ್ರೀನಿವಾಸ್‌ ಮಾತನಾಡಿ, ದೇಶದಲ್ಲಿ ಸುಮಾರು 16.50 ಕೋಟಿ ಅಧಿಕ ಜನರು ಮಾದಕ ವಸ್ತುಗಳ ಸೇವೆಯಿಂದ ಉಂಟಾಗುವ ಮಾರಕ ರೋಗಗಳಿಗೆ ತುತ್ತಾಗಿದ್ದು, ಇವರಲ್ಲಿ ಸುಮಾರು 6 ಕೊಟಿಗೂ ಹೆಚ್ಚು ಜನರ ಅತ್ಯಂತ ಕ್ಷಿಷ್ಟಕರ ಪರಿಸ್ಥಿತಿಯಲ್ಲಿದ್ದಾರೆ. ಮದ್ಯವಸನಿಗಳ ದುಡಿಮೆಯ ಶೇ.30 ಪಾಲು ಕುಡಿತಕ್ಕೆ ಹೋದರೆ, ಉಳಿದ ಹಣ ಚಿಕಿತ್ಸೆಗೆ ಖರ್ಚಾಗುತ್ತದೆ. ಹಾಗಾಗಿ ಜನರು ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಚರ್ಡ್‌ ಮದ್ಯವಸನಿ ಮುಕ್ತ ಕೇಂದ್ರದ ನಿರ್ವಾಹಕ ನಿರ್ದೇಶಕ ಡಾ.ಸದಾಶಿವಯ್ಯ ಮಾತನಾಡಿ, ಕಳೆದ 23 ರಿಂದ ನಮ್ಮ ಸಂಸ್ಥೆಯಿಂದ ಮಾದಕ ವಸ್ತುಗಳ ಸೇವೆ ಮತ್ತು ಸಾಗಾಣಿಕೆ ವಿರೋಧಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಮದ್ಯವಸನಕ್ಕೆ ತುತ್ತಾದ ಜನರಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದು, ಇದುವರೆಗೂ ಸಾವಿರಾರು ಜನರು ನಮ್ಮ ಕೇಂದ್ರದಿಂದ ಚಿಕಿತ್ಸೆ ಪಡೆದು, ಮದ್ಯಪಾನ ಮತ್ತು ಮಾದಕ ವಸ್ತು ವಸನದಿಂದ ಮುಕ್ತರಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂದರು.

ಮದ್ಯ ವರ್ಜನ ಶಿಬಿರದ ಶಿಬಿರಾರ್ಥಿ ಮಹೇಶ್‌ ಮಾತನಾಡಿ, ಸ್ನೇಹಿತರ ಸಹವಾಸದಿಂದ ಆರಂಭವಾದ ಈ ಚಟ ಇಡೀ ಜೀವನವನ್ನೇ ನುಂಗಿ ಹಾಕಿತ್ತು. ಕಳೆದ 11 ವರ್ಷಗಳ ಹಿಂದೆ ಚಿಕಿತ್ಸೆ ಪಡೆದು ಒಳ್ಳೆಯ ಬದುಕು ಕಟ್ಟಿಕೊಂಡಿದ್ದ ನನಗೆ, ವ್ಯವಹಾರದಲ್ಲಿ ಆದ ನಷ್ಟದಿಂದ ಮತ್ತೊಮ್ಮೆ ಕುಡಿತದ ಚಟ ಹತ್ತಿಸಿಕೊಂಡು ಮತ್ತೆ ಚಿಕಿತ್ಸೆಗೆ ಒಳ್ಳಗಾಗಿದ್ದೇನೆ. ಮುಂದೆ ಕುಡಿಯಬಾರದು ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದರು.

ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಚೇತನ್‌ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್‌. ಡಿ.ಎನ್‌. ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ ಎಂ.ಎಸ್‌., ಜಿಲ್ಲಾ ವಿಕಲಚೇತನ ಅಧಿಕಾರಿ ಡಾ.ಎಂ.ರಮೇಶ್‌, ಜಿಲಾ ಕುಷ್ಟರೋಗ ನಿಯಂತ್ರಣಾಧಿಕಾರಿ, ಮಾಸಿಕ ಆರೋಗ್ಯ ವಿಭಾಗದ ಡಾ.ರವೀಶ್‌ ಎನ್‌.ಆರ್‌., ಆಚರ್ಡ್‌ ಸಂಸ್ಥೆಯ ಕಾರ್ಯದರ್ಶಿ ಮಾಲ ಸದಾಶಿವಯ್ಯ ಮತ್ತಿತರರು ಭಾಗವಹಿಸಿದ್ದರು.

ಭಾರತದಲ್ಲಿರುವ ಹಲವು ಕಾಫ್‌ ಶಿರಫ್‌ಗಳು ಮಾದಕ ವಸ್ತುಗಳಿಂದ ಮಾಡಲ್ಪಟ್ಟಿವೆ. ಮಾದಕ ವಸ್ತು ವಸನಿಗಳಿಗೆ ಇವು ಅತಿ ಸುಲಭದಲ್ಲಿ ದೊರೆಯುವುದರಿಂದ ಚಟಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಔಷಧ ನಿಯಂತ್ರಣ ಮಂಡಳಿಗಳು ಇಂತಹ ಔಷಧಿ ಸೇವಿಸುವವರ ಮೇಲೆ ನಿಗಾವಹಿಸಬೇಕಾಗಿದೆ. ಪದೇ ಪದೇ ಇಂತಹ ಕೆಮ್ಮಿನ ಔಷಧಿ ದೊರೆಯದಂತೆ ಮಾಡಬೇಕಾಗಿದೆ.

- ಡಾ.ಕೆ.ಶ್ರೀನಿವಾಸ್‌, ಜಿಲ್ಲಾಧಿಕಾರಿ

ಕೌಟುಂಬಿಕ ದೌರ್ಜನ್ಯ, ವಿಚ್ಛೇಧನ ಕೇಸುಗಳಲ್ಲಿ ಮದ್ಯವಸನ, ಮಾದಕ ವಸ್ತು ಸೇವನೆಯೂ ಒಂದು ಕಾರಣವಾಗಿರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಮಕ್ಕಳೇ ತಂದೆ, ತಾಯಿಗಳ ಮದ್ಯವಸನದಿಂದ ಬೇಸತ್ತು ತಮಗೆ ಬಿಡುಗಡೆ ಕೊಡುವಂತೆ, ಬದುಕಲು ವ್ಯವಸ್ಥೆ ಮಾಡಿಕೊಡುವಂತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ ಉದಾಹರಣೆಗಳಿವೆ.

- ನ್ಯಾ.ನೂರುನ್ನಿಸಾ, ಸದಸ್ಯ ಕಾರ್ಯದರ್ಶಿ ಜಿ.ಕಾ.ಸೇ.ಪ್ರಾ

Latest Videos
Follow Us:
Download App:
  • android
  • ios