ಆಶ್ರಯ ಮನೆ ನಿರ್ಮಾಣ ಸಂಕಲ್ಪ ಕೈಗೂಡಿದೆ : ರಾಮದಾಸ್
ಕಳೆದ 11 ವರ್ಷಗಳ ನಿರಂತರ ಶ್ರಮದ ಫಲವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ 6207 ಮನೆಗಳ ನಿರ್ಮಾಣದ ಸಂಕಲ್ಪ ಕೈಗೂಡಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ಮೈಸೂರು : ಕಳೆದ 11 ವರ್ಷಗಳ ನಿರಂತರ ಶ್ರಮದ ಫಲವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ 6207 ಮನೆಗಳ ನಿರ್ಮಾಣದ ಸಂಕಲ್ಪ ಕೈಗೂಡಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ಕರ್ನಾಟಕ ವಸ್ತು ಪ್ರದರ್ಶನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಆಶ್ರಯ ಮನೆಗಳ ಮಂಜೂರಾತಿ ಪತ್ರವನ್ನು ಅಂಚೆ ಮೂಲಕ ರವಾನಿಸುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಕೆಂಪು ಕೋಟೆ ಮೇಲೆ ನಿಂತು ಮಾಡಿದ ಪ್ರಧಾನಮಂತ್ರಿ ಆವಾಸ್ ಯೋಜನೆ ಎಂಬ ದೂರದೃಷ್ಟಿಯ ಯೋಜನೆಯೇ ಇಂದು ಮನೆಯಿಲ್ಲದವರ ಪಾಲಿನ ವರವಾಗಿದೆ. ಸೂರಿಲ್ಲದವರಿಗೆ ಸೂರು ಕಲ್ಪಿಸುವ ಮಹಾಸಂಕಲ್ಪದ ಭಾಗವಾಗಿ ಯೋಜನೆ ಯಶಸ್ವಿಯಾಗಿದೆ ಎಂದರು.
ನಮ್ಮ ಕ್ಷೇತ್ರದಲ್ಲಿ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಗುರಿಯೊಂದಿಗೆ ಕಳೆದ 11 ವರ್ಷಗಳ ಹಿಂದೆ ಯೋಜನೆ ರೂಪಿಸಲಾಯಿತು. ನಗರದ ಲಲಿತಾದ್ರಿಪುರ, ಗೊರೂರು ಹಾಗೂ ಮಳಲವಾಡಿ ಬಡಾವಣೆಯಲ್ಲಿ ಭೂಮಿ ಖರೀದಿಸಲಾಯಿತು. ಆದರೆ, ಭೂಮಿ ಮಾಲೀಕರು ಹೆಚ್ಚಿನ ಪರಿಹಾರ ಕೋರಿ ಹೈಕೋರ್ಚ್ ಮೊರೆ ಹೋದರು. ಅಲ್ಲಿಯೂ ಸರ್ಕಾರದ ಪರವಾಗಿ ತೀರ್ಪು ಬಂದಿತ್ತು. ನಂತರ ಸುಪ್ರೀಂ ಕೋರ್ಚ್ ಮೊರೆ ಹೋದರು. ಬಳಿಕ ರಾಜೀನ್ಯಾಯದ ಮೂಲಕ ಭೂಮಾಲೀಕರು ಹಾಗೂ ಸರ್ಕಾರದ ನಡುವೆ ಇದ್ದ ಸಮಸ್ಯೆ ಬಗೆಹರಿಸಲಾಯಿತು. ನಂತರ ಪ್ರತಿ ಎಕರೆ ಭೂಮಿಗೆ ಹೆಚ್ಚುವರಿ ಹಣ ನೀಡಿ ರಾಜ್ಯಪಾಲರ ಹೆಸರಿಗೆ ಭೂಮಿ ನೊಂದಣಿ ಮಾಡಿಸಲಾಯಿತು. ಇದೆಲ್ಲಾ ಒಂದು ದಿನದಲ್ಲಿ ಆದ ಕೆಲಸವಲ್ಲ, ಸತತ ಹನ್ನೊಂದು ವರ್ಷಗಳ ಪರಿಶ್ರಮ ಇದೆ ಎಂದು ಅವರು ತಿಳಿಸಿದರು.
ಕಳೆದ 11 ವರ್ಷಗಳ ಕಾಲ ನಿರಂತರವಾಗಿ ಶ್ರಮಿಸಿದ ಫಲವಾಗಿ ಇಂದು ಮನೆ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ. ಯುಗಾದಿ ಉಡುಗೊರೆಯಾಗಿ ಹಬ್ಬದ ಮುನ್ನಾದಿನವೇ ಮಂಜೂರಾತಿ ಪತ್ರ ನಿಮ್ಮ ಕೈ ಸೇರಲಿದೆ. ಈ ಹಿಂದೆ ಒಮ್ಮೆ ಆಶ್ರಯ ಮನೆಗಳ ಮಂಜೂರಾತಿ ಪತ್ರ ಕೊಡುವ ವೇಳೆ ಮೂರ್ನಾಲ್ಕು ಮಂದಿ ಕಾರ್ಯಕ್ರಮದ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ಕೊಡುವ ಆಮಿಷವೊಡ್ಡಿ 4 ಸಾವಿರ ಕಮಿಷನ್ ವ್ಯವಹಾರ ನಡೆಸುತ್ತಿದ್ದುದು ಕಂಡುಬಂತು. ಆ ತಪ್ಪು ಮತ್ತೊಮ್ಮೆ ಮರುಕಳಿಸಬಾರದು ಎಂಬ ಕಾರಣಕ್ಕಾಗಿ ಇಂದು ಮಂಜೂರಾತಿ ಪತ್ರವನ್ನು ಪೋಸ್ವ್ ಮೂಲಕ ಕಳುಹಿಸಲಾಗುತ್ತಿದೆ. ಇಲ್ಲಿ ಯಾರೂ ದುಡ್ಡು ಕೇಳುವ ಪ್ರಮೇಯವೇ ಇರುವುದಿಲ್ಲ. ಹಬ್ಬದ ಕೊಡುಗೆಯಾಗಿ ಮಂಜೂರಾತಿ ಪತ್ರ ನಿಮ್ಮ ಕೈಸೇರಲಿದೆ ಎಂದರು.
ರಾಜಕೀಯ ಬಿಡುವ ಮುನ್ನ ಮನೆ ಇಲ್ಲದವರಿಗೆ ಮನೆ ನೀಡು ಎಂಬ ಅಮ್ಮನ ಆಸೆ ಹಾಗೂ ಪ್ರಧಾನಮಂತ್ರಿಗಳ ಆಸೆ ಸೇರಿದಂತೆ ಎರಡೂ ಆಸೆಗಳನ್ನು ಪೂರೈಸಿದ ಆತ್ಮತೃಪ್ತಿ ನನ್ನ ಪಾಲಿಗೆ ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಮುಂದಿನ ಆರು ತಿಂಗಳಲ್ಲಿ ಎಲ್ಲರಿಗೂ ಮನೆ ಕೀಲಿ ಕೈ ಸಿಗಲಿದೆ. 2024ರ ಡಿ. 30ರೊಳಗೆ ಎಲ್ಲರಿಗೂ ಹಕ್ಕುಪತ್ರ ನೀಡುವ ಕೆಲಸ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಮನೆಯನ್ನು ಅತ್ಯಂತ ವ್ಯವಸ್ಥಿತವಾಗಿ, ಅಗತ್ಯ ಮೂಲಸೌಕರ್ಯದೊಂದಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್, ನಗರ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಸೌಮ್ಯಾ ಉಮೇಶ್, ಎಡಿಸಿ ರೂಪಾ, ಮುಖಂಡರಾದ ಪೀತಾಂಬರಸ್ವಾಮಿ, ಹ®್ಸ…ರಾಜ…, ವಿದ್ಯಾ ಅರಸ್, ಗೌರಿ, ಹೇಮಂತ್, ಛಾಯಾದೇವಿ ಇದ್ದರು.
-- 5,000 ಮನೆ ನಿರ್ಮಾಣ ಪ್ರಗತಿಯಲ್ಲಿ--
ಕೈಗೊಂಡ ಐದು ಸಾವಿರ ಮನೆಗಳ ನಿರ್ಮಾಣ ಯೋಜನೆ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ ಪ್ರಧಾನಮಂತ್ರಿಗಳು ಒಂದೂವರೆ ಲಕ್ಷ ರೂಪಾಯಿ, ಮುಖ್ಯಮಂತ್ರಿಗಳು . 1 ಲಕ್ಷವನ್ನು ನಿಮ್ಮ ಖಾತೆಗೆ ಹಾಕುತ್ತಾರೆ. ಉಳಿದ ಶೇ. 10ರಷ್ಟುಹಣವನ್ನು ನೀವು 20 ವರ್ಷಗಳ ಕಾಲಮಿತಿಯಲ್ಲಿ ಪಾವತಿಸಬೇಕಿದೆ. ಇದಕ್ಕಾಗಿ ಶೇ. 10ರ ಬಡ್ಡಿ ದರದಲ್ಲಿ ಬ್ಯಾಂಕಿನಿಂದ ಸಾಲ ಸೌಲಭ್ಯ ಕೊಡಲಾಗುತ್ತದೆ. ಆ ಬಡ್ಡಿಯ ಶೇ. 6ರಷ್ಟನ್ನು ಪ್ರಧಾನಮಂತ್ರಿಗಳು ಪಾವತಿಸಿದರೆ, ಉಳಿದ ಶೇ. 4ರಷ್ಟನ್ನು ನೀವು ಪಾವತಿಸಬೇಕಿದೆ ಎಂದು ಅವರು ಹೇಳಿದರು.
ದೇಶದ 7200 ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮನೆ ಕೊಟ್ಟಕೀರ್ತಿಗೆ ಇಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಭಾಜನವಾಗಿದೆ. ಇದರ ಹಿಂದೆ ನಿಮ್ಮೆಲ್ಲರ ಆಶೀರ್ವಾದ ಇದೆ ಎಂದ ಅವರು, ನಿಜವಾಗಿಯೂ ಮನೆ ಇಲ್ಲದವರ ಕುರಿತು ಪರಿಶೀಲನೆ ಮಾಡಿದ ವೇಳೆ ಇನ್ನೂ ಆರು ಸಾವಿರ ಮಂದಿ ಇದ್ದರು. ಈ ಕುರಿತು ಪ್ರಧಾನ ಮಂತ್ರಿಗಳೊಂದಿಗೆ ಇತ್ತೀಚೆಗಷ್ಟೇ ಚರ್ಚಿಸಿ ವಿಷಯ ಮನವರಿಕೆ ಮಾಡಿಕೊಟ್ಟಬಳಿಕ ಹೆಚ್ಚುವರಿಯಾಗಿ ಇನ್ನೂ 6 ಸಾವಿರ ಮನೆಗಳನ್ನು ಕೃಷ್ಣರಾಜ ಕ್ಷೇತ್ರಕ್ಕೆ ನೀಡಿದರು. ಇದಕ್ಕಿಂತ ಸೌಭಾಗ್ಯ ಮತ್ತೇನಿದೆ ಎಂದು ಶಾಸಕ ರಾಮದಾಸ್ ಹೇಳಿದರು.