ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕನ್ನು ಕಸಿಯುತ್ತಿದೆ : ಡಿ.ಎ. ವಿಜಯಬಾಸ್ಕರ್
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಮತ್ತು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. 44 ಕಾರ್ಮಿಕ ಕಾನೂನುಗಳನ್ನು 4 ಕೋಡುಗಳಾಗಿ ವಿಂಗಡಿಸಿ ಕಾರ್ಮಿಕರಿಗೆ ಸಂಘಟನೆ ಮಾಡುವ ಹಕ್ಕನ್ನು ಕಸಿದುಕೊಂಡಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಬಾಸ್ಕರ್ ತಿಳಿಸಿದರು.
ತುಮಕೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಮತ್ತು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. 44 ಕಾರ್ಮಿಕ ಕಾನೂನುಗಳನ್ನು 4 ಕೋಡುಗಳಾಗಿ ವಿಂಗಡಿಸಿ ಕಾರ್ಮಿಕರಿಗೆ ಸಂಘಟನೆ ಮಾಡುವ ಹಕ್ಕನ್ನು ಕಸಿದುಕೊಂಡಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಬಾಸ್ಕರ್ ತಿಳಿಸಿದರು.
ತುಮಕೂರಿನ ಉಪ್ಪಾರಹಳ್ಳಿಯಲ್ಲಿರುವ ಕಾಂ. ಟಿ.ಆರ್. ರೇವಣ್ಣ ಭವನದಲ್ಲಿ ಹಮ್ಮಿಕೊಂಡಿದ್ದ ಎಐಟಿಯುಸಿ 8ನೇ ತುಮಕೂರು ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಕೇವಲ ಬಂಡವಾಳದಾರರ ಪರ ಕಾನೂನು ರಚಿಸಿ ಕಾರ್ಪೋರೇಟ್ ಕಂಪನಿಗಳಿಗೆ ಉತ್ತೇಜನ ನೀಡಿದೆ. ಅಲ್ಲದೆ, ಬಂಡವಾಳದಾರರ ಹಿತದೃಷ್ಟಿಯಿಂದ ಗುತ್ತಿಗೆ ಪದ್ದತಿ, ಹೊರಗುತ್ತಿಗೆ ಪದ್ಧತಿ ಮುಂತಾದ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದೆ. ಇದರಿಂದ ಕಾರ್ಮಿಕರಿಗೆ ಖಾಯಂ ಉದ್ಯೋಗ ಎಂಬುದು ಕನಸಾಗಿದೆ. ಈಗ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವೂ ಕೂಡ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಇಂಡಿಯನ್ ಲಾಯರ್ಸ್ ಅಸೋಸಿಯೇಷನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಮಾತನಾಡಿ, ಬಿಜೆಪಿ ಸರ್ಕಾರ ಮಾಡಿದ್ದ 8 ರಿಂದ 12 ಗಂಟೆ ಕೆಲಸದ ಅವಧಿಯ ತಿದ್ದುಪಡಿಯ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಬಂದು ನೂರು ದಿನಗಳಾದರೂ ವಾಪಸ್ ಪಡೆದಿಲ್ಲ. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರಿಗೆ ಆರನೇ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿಲ್ಲ. ಹಿಂದೆ ಇದ್ದ ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಭ್ರಷ್ಟಾಚಾರವೆಸಗಿದ್ದನ್ನು ಸರಿಪಡಿಸುವ ಬದಲು ಪ್ರಸ್ತುತ ರಾಜ್ಯ ಸರ್ಕಾರವೂ ಅದೇ ಚಾಳಿಯನ್ನು ಮುಂದುವರಿಸಿದೆ. ಈಗಾಗಲೇ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯದ 15ಲಕ್ಷ ಅರ್ಜಿಗಳು ಬಾಕಿ ಇದ್ದು, ವಿಲೇವಾರಿ ಮಾಡಲು ರಾಜ್ಯ ಸರ್ಕಾರ ಕಾಲ ಹರಣ ಮಾಡುತ್ತಿದೆ. ಇವುಗಳ ವಿರುದ್ಧ ಎಐಟಿಯುಸಿ ನಿರಂತರ ಹೋರಾಟ ಮಾಡಬೇಕು ಎಂದರು
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ತುಮಕೂರು ಜಿಲ್ಲೆಯ ಕೈಗಾರಿಕ ವಲಯ ವಿಸ್ತಾರಗೊಳ್ಳುತ್ತಿದ್ದು, ಈಗಿರುವ ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ, ಸತ್ಯಮಂಗಲ ಕೈಗಾರಿಕಾ ಪ್ರದೇಶ, ವಸಂತನರಸಾಪುರ ಕೈಗಾರಿಕಾ ಪ್ರದೇಶ, ಜೊತೆಗೆ ಸಿರಾ, ಮಧುಗಿರಿ, ಗುಬ್ಬಿ ಮುಂತಾದ ಕಡೆ ಹೊಸ ಕೈಗಾರಿಕೆಗಳಲ್ಲಿ ಕಾರ್ಮಿಕರ ಸ್ಥಿತಿ ತುಂಬಾ ಶೋಚನೀಯವಾಗಿದೆ ಎಂದರು.
ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕಂಬೇಗೌಡ ಮಾತನಾಡಿ, ನರೇಂದ್ರ ಮೋದಿಯವರು 2014ರಲ್ಲಿ ವಸಂತ ನರಸಾಪುರದ ಫುಡ್‌ಪಾರ್ಕ್ ಅನ್ನು ಉದ್ಘಾಟನೆ ಮಾಡಿದ್ದರು. ಈ ಕಾರ್ಖಾನೆಯಲ್ಲಿ 10 ಸಾವಿರ ಉದ್ಯೋಗದ ಭರವಸೆ ನೀಡಿದ್ದರು. 2016ರಲ್ಲಿ ಗುಬ್ಬಿ ಹೆಚ್‌ಎಎಲ್ ಕೈಗಾರಿಕೆ ಉದ್ಘಾಟನೆ ಮಾಡಿ, 4 ಸಾವಿರ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಪ್ರಸ್ತುತ ಇದಾವುದೂ ಈಡೇರದಿರುವುದು ವಿಪರ್ಯಾಸ. ಇವುಗಳ ವಿರುದ್ಧ ಕಾರ್ಮಿಕ ರಂಗದಿಂದ ಒಗ್ಗಟ್ಟಿನ ಹೋರಾಟದ ಅಗತ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರ್ಗೋ ಅಶ್ವತ್ಥನಾರಾಯಣ ಕಾರ್ಯಕ್ರಮ ನಿರೂಪಿಸಿ ಸ್ವಾಗತಿದರು. ಜಿಲ್ಲಾ ಖಜಾಂಚಿ, ಜಿ. ಚಂದ್ರಶೇಖರ್ ವಂದಿಸಿದರು.
ಹೊಸ ಪದಾಧಿಕಾರಿಗಳ ಆಯ್ಕೆ: ಎಐಟಿಯುಸಿ ೮ನೇ ತುಮಕೂರು ಜಿಲ್ಲಾ ಸಮ್ಮೇಳನವು 41 ಜನರ ಸಮಿತಿಯನ್ನು ಆಯ್ಕೆ ಮಾಡಿತು.ಟಿ.ಆರ್. ರೇವಣ್ಣ ಗೌರವಾಧ್ಯಕ್ಷ, ಕಂಬೇಗೌಡ ಅಧ್ಯಕ್ಷ, ಗಿರೀಶ್ ಕಾರ್ಯಾಧ್ಯಕ್ಷ, ಉಪಾಧ್ಯಕ್ಷರಾಗಿ ಕಲಾವತಿ, ಗೋವಿಂದರಾಜು, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಚಂದ್ರಶೇಖರ್, ಕಾರ್ಯದರ್ಶಿಯಾಗಿ ಬಸವರಾಜು ಸಿಪ್ಸಾ, ರಾಧಮ್ಮ ಬಿಸಿಯೂಟ, ಖಜಾಂಚಿ ರವಿಪ್ರಸಾದ್, ಒಟ್ಟು ಕೈಗಾರಿಕಾವಲಯ, ಕಟ್ಟಡ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ಆಶಾ, ಕೆಎಸ್‌ಆರ್‌ಟಿಸಿ ಸೇರಿದಂತೆ ಇತರೆ ಅಸಂಘಟಿತ ವಲಯದಿಂದ 41 ಜನರ ಜಿಲ್ಲಾ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ.