ಕವಿಚಕ್ರವರ್ತಿ ರನ್ನ ಸ್ಮರಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯುತ್ತಿರುವ ರನ್ನ ವೈಭವ-2025ರ ಕಾರ್ಯಕ್ರಮ ಅದ್ಧೂರಿತನದಿಂದ ಗಮನ ಸೆಳೆಯಿತು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಫೆ.23): ಕವಿಚಕ್ರವರ್ತಿ ರನ್ನ ಸ್ಮರಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯುತ್ತಿರುವ ರನ್ನ ವೈಭವ-2025ರ ಕಾರ್ಯಕ್ರಮ ಅದ್ಧೂರಿತನದಿಂದ ಗಮನ ಸೆಳೆಯಿತು. ಮುಧೋಳದ ರನ್ನ ಬೆಳಗಲಿಯಲ್ಲಿ ನಡೆದ ರನ್ನ ವೈಭವದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ & ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿದರು. ಇನ್ನು ಮೊದಲ ದಿನ ಕವಿ ಚಕ್ರವರ್ತಿ ರನ್ನವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಗುರುಕಿರಣ ಹಾಡಿದ ಹಾಡುಗಳ ಎಲ್ಲರನ್ನ ಎದ್ದು ಕುಣಿಯುವಂತೆ ಮಾಡಿದ್ದವು.
ಅದರಲ್ಲೂ ಬೊಂಬೆ ಹೇಳುತೈತೆ ಹಾಡಿಗೆ ವೇದಿಕೆ ಎದುರಿಗಿದ್ದ ಸಾರ್ವಜನಿಕರೆಲ್ಲರೂ ಮೊಬೈಲ್ ಟಾರ್ಚ್ ಆನ್ ಮಾಡಿ, ಹಾಡಿಗೆ ಧ್ವನಿಗೂಡಿಸಿ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ರನ್ನವೈಭವ ಕಾರ್ಯಕ್ರಮದಲ್ಲಿ ಗುರುಕಿರಣ ತಂಡದಿಂದ ನಡೆದ ಚಿತ್ರ ಸಂಗೀತ ಸುಧೆ ಕಾರ್ಯಕ್ರಮದಲ್ಲಿ ಗಾಯಕಿ ಸುನೀತಾ ಸೇರಿದಂತೆ ಅನೇಕರು ಹಾಡಿದ ಹಾಡುಗಳು ಮನಸೂರೆಗೊಂಡವು. ಇವುಗಳ ಮಧ್ಯೆ ಬೊಂಬೆ ಹೇಳುತೈತೆ ಹಾಡಿನ ವೇಳೆ ಅತ್ತ ಎಲ್‍ಇಡಿ ಪರದೆಯ ಮೇಲೆ ಅಪ್ಪುವಿನ ಫೋಟೋ ಗೋಚರವಾಗುತ್ತಿದ್ದಂತೆ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತ್ತು.
ಇನ್ನು ಕನ್ನಡಾಭಿಮಾನ ಮೂಡಿಸುವ ಹಾಡುಗಳಾದ ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ ಹಾಡಗಳ ಮೂಲಕ ಪ್ರಾರಂಭವಾದ ಸಂಗೀತ ಸುಧೆ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಗುರುಕಿರಣ ವಿವಿಧ ಚಲನಚಿತ್ರದ ಹಾಡುಗಳನ್ನು ಹಾಡಿದರು. ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸಹ "ಸವಿ ಮುರಳಿ ಕರೆದ ವೇಳೆ" ಎಂಬ ಹಾಡನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಇದರ ಜೊತೆಗೆ ಯಮನಪ್ಪ ಪೂಜೇರಿಯಿಂದ ಚೌಡಕಿ ಪದ, ಕುಮಾರ ಬಡಿಗೇರ ಅವರಿಂದ ಶಾಸ್ತ್ರೀಯ ಸಂಗೀತ, ಕೃಷ್ಣಪ್ಪ ಹೂಲಗೇರಿಯಿಂದ ಡೊಳ್ಳಿನ ಪದಗಳು, ಡಾ.ವೆಂಕಪ್ಪ ಸುಗತೇಕರಿಂದ ಗೊಂದಳಿ ಪದ.
9 ಅಸುರಕ್ಷಿತ ಔಷಧಗಳ ಮಾರಾಟ ನಿರ್ಬಂಧ: ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಪತ್ರ
ನಟರಾಜ ಸಂಗೀತ ನೃತ್ಯನಿಕೇತನದಿಂದ ಸಮೂಹ ನೃತ್ಯ, ಕಾಂಚನಾ ಘಾರಗೆಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ರಾಚಯ್ಯ ಮುಧೋಳ ಜೋಗತಿ ಮತ್ತು ದೀಪ ನೃತ್ಯ, ನಟರಂಗ ಕಲ್ಚರ ಅಕಾಡೆಮಿಯಿಂದ ಲಂಬಾಣಿ ನೃತ್ಯ, ಪ್ರಿಯಾಂಕ ಸರಶೆಟ್ಟಿಯಿಂದ ಭರತನಾಟ್ಯ, ಯಶವಂತ ವಾಜಂತ್ರಿಯಿಂದ ಹಾಸ್ಯ ಚಟಾಕಿ, ಉತ್ತರ ಕನ್ನಡ ಅಮೇಜಿಂಗ್ ಸಿದ್ದಿ ಬಾಯ್ಸ್‍ದಿಂದ ಸಿದ್ದ ಡಮಾಮಿ ನೃತ್ಯ, ಗುರುರಾಜ ಹೊಸಕೋಟಿಯ ಜಾನಪದ ಸಂಗೀತ ರಸದೌತಣಕ್ಕೆ ಕವಿ ಚಕ್ರವರ್ತಿ ರನ್ನನವೇದಿಕೆ ಸಾಕ್ಷಿಯಾಯಿತು.
