Asianet Suvarna News Asianet Suvarna News

.ರಸ್ತೆಗಳಲ್ಲೇ ಜಾನುವಾರು ಠಿಕಾಣಿ; ವಾಹನ ಸವಾರರು ಪರದಾಟ

ಪಟ್ಟಣದ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲೇ ಜಾನುವಾರುಗಳು ಠಿಕಾಣಿ ಹೂಡುತ್ತಿವೆ. ಸಂಚಾರಕ್ಕೆ ಅಡತಡೆ ಉಂಟಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

the cattles on road traffic problems lokapur at bagalkote rav
Author
First Published Sep 17, 2022, 2:54 PM IST

ಲೋಕಾಪುರ (ಸೆ.17) : ಪಟ್ಟಣದ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲೇ ಜಾನುವಾರುಗಳು ಠಿಕಾಣಿ ಹೂಡುತ್ತಿವೆ. ಸಂಚಾರಕ್ಕೆ ಅಡತಡೆ ಉಂಟಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹೌದು ಬಸವೇಶ್ವರ ವೃತ್ತ, ಮುಧೋಳ ರಸ್ತೆ, ಬಾಗಲಕೋಟೆ ರಸ್ತೆ, ಮೇನ ಬಜಾರ, ತರಕಾರಿ ಮಾರುಕಟ್ಟೆ, ಬೆಳಗಾವಿ ರಸ್ತೆಯೂ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ಠಿಕಾಣಿ ಹೂಡಿರುತ್ತವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ನಡೆದು ಹೋಗುವ ಮಕ್ಕಳು ಮಹಿಳೆಯರು ಸಹ ಆತಂಕದಲ್ಲೇ ಸಂಚರಿಸುವಂತಾಗಿದೆ.

 

Chikkamagaluru: ವಾಹನಕ್ಕೆ ಬಿಡಾಡಿ ದನಗಳು ಬಲಿ, ಕಳೆದ 20 ದಿನದಲ್ಲಿ 50ಕ್ಕೂ ಹೆಚ್ಚು ರಾಸುಗಳು ಸಾವು!

ಪೊಲೀಸರ ಪರದಾಟ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ರಸ್ತೆ ಸಂಚಾರ ಸುಗಮಗೊಳಿಸಲು ಪೊಲೀಸರು ಹೆಣಗಾಡುವಂತಾಗಿದೆ. ರಸ್ತೆಯಲ್ಲಿನ ಬಿಡಾಡಿ ದನಗಳನ್ನು ಓಡಿಸುವ ಕೆಲಸ ನಿರ್ವಹಿಸುವಂತಹ ಪರಿಸ್ಥಿತಿ ಪೊಲೀಸರದ್ದಾಗಿದೆ. ಇಷ್ಟಿದ್ದರೂ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಲು ಪಪಂ ಮುಂದಾಗುತ್ತಿಲ್ಲ. ಬಿಡಾಡಿ ದನಗಳ ನಿಯಂತ್ರಣಕ್ಕೆ ಈವರೆಗೂ ಸ್ಥಳ ನಿಗದಿ ಮಾಡದಿರುವುದರಿಂದ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಇತ್ತೀಚೆಗಂತೂ ತರಕಾರಿ-ದಿನಸಿ ತರಲು ಮಾರುಕಟ್ಟೆಗೆ ಹೋಗಲು ಭಯವಾಗುತ್ತಿದೆ. ಖರೀದಿಸಿದ ಕಾಯಿಪಲ್ಲೆ ಹಾಗೂ ದಿನಸಿ ಎಷ್ಟೋ ಸಲ ದನಗಳ ಪಾಲಾಗಿವೆ. ಬೈಕ್‌ನಲ್ಲಿ ಇರಿಸಲಾಗಿದ್ದ ದಿನಸಿಯ ಬ್ಯಾಗ್‌ನ್ನು ಹರಿದು ಚೆಲ್ಲಾಪಿಲ್ಲಿ ಮಾಡುತ್ತಿವೆ. ಪಪಂ ಇನ್ನಾದರೂ ಎಚ್ಚೆತ್ತು ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಮುಂದಾಗಬೇಕು.

ಎಲ್ಲೆಂದರಲ್ಲಿ ಓಡಾಡುವ ಈ ದನ-ಕರುಗಳು ಸಿಕ್ಕಿದ್ದನ್ನು ತಿನ್ನುತ್ತವೆ. ಕಸದೊಂದಿಗೆ ಪ್ಲಾಸ್ಟಿಕ್‌ ಕೂಡ ಅವುಗಳ ಹೊಟ್ಟೆಸೇರುತ್ತಿದೆ. ಇದು ಅವುಗಳ ಪ್ರಾಣಕ್ಕೂ ಕುತ್ತು ತರುತ್ತಿದೆ. ವಾಹನಗಳು ಡಿಕ್ಕಿಯಾಗುವುದರಿಂದಲೂ ಜೀವಕ್ಕೆ ಕಂಟಕವಿದೆ. ಸವಾರರು ಕೂಡ ಗಾಯಗೊಂಡ ಉದಾಹರಣೆಗಳಿವೆ. ರಸ್ತೆಗಳ ಮಧ್ಯೆ’ ಕೃತಕ ಸ್ಪೀಡ್‌ ಬ್ರೇಕರ್‌’ಗಳ ರೀತಿಯಲ್ಲಿರುವ ಅವುಗಳನ್ನು ಹಿಡಿದು ಬೇರೆ ಕಡೆಗೆ ಸಾಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಆದ್ದರಿಂದ ಮುಖ್ಯಾಧಿಕಾರಿಗಳು ಕೂಡಲೇ ಜಾನುವಾರುಗಳ ವಾರಸುದಾರರಿಗೆ ಖಡಕ್‌ ಎಚ್ಚರಿಕೆ ನೀಡಿ, ಬಿಡಾಡಿ ದನಗಳನ್ನು ನಿಯಂತ್ರಿಸಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

Chitradurga: ಮೂಕಜೀವಿಗಳ ಪಾಲಿಗೆ ಆಶ್ರಯದಾತೆ ಕೋಟೆನಾಡಿನ ಸ್ಪೂರ್ತಿ..!

ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಇರುವುದು ಗಮನಕ್ಕಿದೆ. ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಆಗುತ್ತಿರುವುದು ಕಂಡು ಬಂದಿದೆ. ಮಾಲೀಕರು ಜಾನುವಾರುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಗೋಶಾಲೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದು.

-ಎಂ. ವಿ. ನಡುವಿನಕೇರಿ ಮುಖ್ಯಾಧಿಕಾರಿ, ಪಪಂ ಲೋಕಾಪುರ

ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವ್ಯಾಪಾರಸ್ಥರು, ಪಾದಚಾರಿಗಳು ಸೇರಿದಂತೆ ವಾಹನ ಸವಾರರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರು ರಸ್ತೆಯಲ್ಲಿ ಸಂಚರಿಸದಂತಾಗಿದೆ. ಈ ದನಗಳು ವ್ಯಾಪಾರಸ್ಥರ ಅಂಗಡಿಗಳ ಮುಂದೆ ಗುಂಪು ಗುಂಪಾಗಿ ಮಲಗುತ್ತವೆ. ಅಲ್ಲದೇ ರಸ್ತೆ ಮಧ್ಯೆ ಭಾಗದಲ್ಲಿಯೇ ಒಂದಕ್ಕೊಂದು ಕಾದಾಡುವುತ್ತಿರುವುದರಿಂದ ರಸ್ತೆ ಸಂಚಾರಕ್ಕೂ ಸಂಚಕಾರ ಉಂಟಾಗುತ್ತಿದೆ. ಬೆಳಗಿನಜಾವವೇ ರಸ್ತೆಗೆ ದಾಂಗುಡಿಯಿಡುವ ಬಿಡಾಡಿ ದನಗಳು ರಸ್ತೆಗೆ ಅಡ್ಡಲಾಗಿ ನಿಂತು ಟ್ರಾಫಿಕ್‌ ಸಮಸ್ಯೆ ಉಂಟು ಮಾಡುತ್ತವೆ. ವಾಹನಗಳ ಧ್ವನಿ ಕೇಳಿಯೂ ಕೇಳದಂತೆ ನಿಂತಿರುತ್ತವೆ. ಕೆಲವೊಮ್ಮೆ ಬೈಕ್‌ ಗುದ್ದಿಕೊಂಡು ಹೋದ ಘಟನೆಗಳು ಸಂಭವಿಸಿವೆ.

-ಸಾರ್ವಜನಿಕರು ಲೋಕಾಪುರ

Follow Us:
Download App:
  • android
  • ios