ತುಮಕೂರು - ಮಹಿಳೆ, ಮಕ್ಕಳ ಕಾಣೆ ಪ್ರಕರಣ ಗಂಭೀರವಾಗಿ ಪರಿಗಣಿಸಿ : ನ್ಯಾಯಾಧೀಶೆ ನೂರುನ್ನಿಸಾ
ಮಹಿಳೆಯರು ಮತ್ತು ಮಕ್ಕಳ ಕಾಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಕಾಣೆಯಾದ ಕೂಡಲೇ ಎಫ್ಐಆರ್ ದಾಖಲಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನಿಸಾ ಸಲಹೆ ನೀಡಿದರು.
ತುಮಕೂರು : ಮಹಿಳೆಯರು ಮತ್ತು ಮಕ್ಕಳ ಕಾಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಕಾಣೆಯಾದ ಕೂಡಲೇ ಎಫ್ಐಆರ್ ದಾಖಲಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನಿಸಾ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತುಮಕೂರಿನ ಬಾಲ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತಂತೆ ಭಾಗೀದಾರ ಇಲಾಖೆಯ ಅಧಿಕಾರಿ ವರ್ಗದವರಿಗೆ ಆಯೋಜಿಸಿದ್ದ ಪುನಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತರೆ ಪ್ರಕರಣಗಳಂತೆ ಕಾಣೆಯಾಗುವ ಪ್ರಕರಣಗಳನ್ನು ನಿರ್ಲಕ್ಷಿಸಬಾರದು. ಮಕ್ಕಳಾಗಲಿ, ಮಹಿಳೆಯರಾಗಲಿ ಕಾಣೆಯಾದ ಕೂಡಲೇ ಒಂದು ಮಿಸ್ಸಿಂಗ್ ದೂರನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕು. ಪೊಲೀಸರೂ ಸಹ ನಿರ್ಲಕ್ಷ್ಯ ಮಾಡದೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಒಂದು ವೇಳೆ ಕಾಣೆಯಾದ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಾಗಾಣಿಕೆ ಜಾಲವು ಹೆಚ್ಚು ಕ್ರಿಯಾಶೀಲವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಣೆ ಮಾಡಲು ಸಹಕಾರಿಯಾಗುತ್ತದೆ. ಮುಂದಿನ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ನಮ್ಮ ಕೈಮೀರಿ ಹೋದ ಮೇಲೆ ಮತ್ತೆ ಕರೆತರುವುದು ಕಷ್ಟದ ಕೆಲಸ. ಹೀಗಾಗಿ ಕೂಡಲೇ ದೂರು ದಾಖಲಿಸಿ ಪತ್ತೆ ಹಚ್ಚುವ ಕಾರ್ಯಕ್ಕೆ ಸನ್ನದ್ಧರಾಗಬೇಕು. ಇದಕ್ಕೆ ಪೊಲೀಸರ ಜೊತೆ ಇತರೆ ಭಾಗೀದಾರ ಇಲಾಖೆಗಳೂ ಸಹ ಸಹಕರಿಸಬೇಕು ಎಂದರು.
ಪ್ರೀತಿ-ಪ್ರೇಮ ಮತ್ತು ಕೆಲಸದ ಆಮಿಷಗಳನ್ನು ಒಡ್ಡಿ ಹೆಣ್ಣು ಮಕ್ಕಳನ್ನು ಸಾಗಾಣಿಕೆಗೆ ಗುರಿ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿವಿಧ ಸಮುದಾಯಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಅನೈತಿಕ ಸಾಗಾಣಿಕೆ ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ತರಬೇತಿ ಉಪನ್ಯಾಸಕರಾಗಿದ್ದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ ಮಾತನಾಡಿ, ಕಾಣೆಯಾಗುವ ಬಹಳಷ್ಟು ಪ್ರಕರಣಗಳಲ್ಲಿ ಅಂಗಾಂಗ ಕಸಿ, ಅಶ್ಲೀಲ ಚಿತ್ರಗಳ ಬಳಕೆ, ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿದ್ದಾರೆ. ಇದನ್ನು ತಪ್ಪಿಸಲಿಕ್ಕಾಗಿಯೇ ಸಂವಿಧಾನದ ಕಲಂ ೨೩ ಮತ್ತು ೨೪ ರಲ್ಲಿ ವಿಶೇಷ ಅವಕಾಶಗಳನ್ನು ಕಲ್ಪಿಸಲಾಗಿದೆ. ಭಾರತ ದಂಡ ಸಂಹಿತೆಯ ಕಲಂ ೩೫೯ ರಿಂದ ೩೭೩ರವರೆಗೆ ವಿಶೇಷ ವ್ಯಾಖ್ಯಾನಗಳನ್ನು ನೀಡಿ ಶಿಕ್ಷೆ ವಿಧಿಸಲಾಗಿದೆ. ಅನೈತಿಕ ಸಾಗಾಣಿಕೆ ತಡೆ ಕಾಯ್ದೆ ೧೯೫೬ ರಲ್ಲಿ ಜಾರಿಗೆ ಬಂದಿದ್ದು, ಎರಡು ಬಾರಿ ತಿದ್ದುಪಡಿಯಾಗಿದೆ. ೨೦೧೩ರಲ್ಲಿ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿಯಾಗಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಪ್ರಕರಣಗಳನ್ನು ಮತ್ತು ವೇಶ್ಯಾವಾಟಿಕೆ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಗಂಭೀರ ಸ್ವರೂಪದ ಶಿಕ್ಷೆ ವಿಧಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆ ನಿರ್ಬಂಧ ಇದ್ದು, ವೇಶ್ಯಾವಾಟಿಕೆ ಮತ್ತಿತರ ಕೃತ್ಯಗಳಿಗೆ ಮಹಿಳೆ ಮತ್ತು ಮಕ್ಕಳನ್ನು ಬಳಸಿಕೊಳ್ಳುವುದರ ವಿರುದ್ಧ ಎಲ್ಲರೂ ಜಾಗೃತರಾಗಬೇಕಿದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಎಸ್. ನಂದಕುಮಾರ್ ಸಾಮಾಜಿಕ ಆಯಾಮಗಳಲ್ಲಿ ಅನೈತಿಕ ಸಾಗಾಣಿಕೆ ಕುರಿತು ಮಾತನಾಡಿದರು. ಮಹಿಳಾ ಇಲಾಖೆ ಅಭಿವೃದ್ಧಿ ಅಧಿಕಾರಿ ಆರ್.ಜೆ. ಪವಿತ್ರಾ ಸ್ವಾಗತಿಸಿದರು. ಸಿಡಿಪಿಒ ಗೋಪಾಲಪ್ಪ ವಂದಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ನಾಗರಾಜು, ಶಶಿಧರ್ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಿಕ್ಷಾಟನೆ, ಅಂಗಾಂಗ ಕಸಿ, ಮಾದಕ ವಸ್ತುಗಳ ಮಾರಾಟಕ್ಕೆ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಇದರ ಜಾಲ ಹೆಚ್ಚು ವ್ಯಾಪಕವಾಗಿದೆ. ವೇಶ್ಯಾವಾಟಿಕೆಯ ದಂಧೆಗೆ ಹೆಣ್ಣು ಮಕ್ಕಳನ್ನು ದೂಡುವ ಸಾಮಾಜಿಕ ಅನೈತಿಕತೆಯ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಮಾಹಿತಿ ತಿಳಿದ ಕೂಡಲೇ ಸಂಬಂಧಪಟ್ಟವರಿಗೆ ತಿಳಿಸಬೇಕು.
ಎಂ.ಎಸ್. ಶ್ರೀಧರ್ ಮಹಿಳಾ ಇಲಾಖೆ ಉಪನಿರ್ದೇಶಕ