ಕರ್ನಾಟಕದಿಂದಲೇ ಬಿಜೆಪಿಯ ಸಮಾಪ್ತಿ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದರು.

 ಮೈಸೂರು (ಜ. 03): ಕರ್ನಾಟಕದಿಂದಲೇ ಬಿಜೆಪಿಯ ಸಮಾಪ್ತಿ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದರು.

ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್‌ ಶಾ ಅವರು ಎಚ್‌.ಡಿ. ದೇವೇಗೌಡರನ್ನು ಗೆಜ್ಜಲಗೆರೆಯಲ್ಲಿ ಹಾಡಿ ಹೊಗಳಿದ ಬಳಿಕ ಮಂಡ್ಯದಲ್ಲಿ ಟೀಕಿಸಿದ್ದಾರೆ. ಎಚ್‌.ಡಿ. ದೇವೇಗೌಡರ ವಿರುದ್ಧವೂ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅಮಿತ್‌ ಶಾರ ಇಂತಹ ಹೇಳಿಕೆಗಳೇ ಕರ್ನಾಟಕದಲ್ಲಿ ಬಿಜೆಪಿ ಪತನಕ್ಕೆ ಕಾರಣವಾಗಲಿದೆ ಎಂದರು.

ಕೇಂದ್ರ ಸಚಿವ ಅಮಿತ್‌ ಶಾ ಮಂಡ್ಯ ಸಮಾವೇಶದಲ್ಲಿ ಜೆಡಿಎಸ್‌ ಕುರಿತು ಮಾಡಿರುವ ಟೀಕೆ, ಜೆಡಿಎಸ್‌ ಕುಟುಂಬ ಆಧಾರಿತ ಪಕ್ಷ ಎಂದಿರುವ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಅಮುಲ್‌ ಮತ್ತು ಕೆಎಂಎಫ್‌ ವಿಲೀನ ಪ್ರಸ್ತಾಪ ಮಾಡಿರುವ ಅಮಿತ್‌ ಶಾ ಹೇಳಿಕೆಗೂ ತಿರುಗೇಟು ನೀಡಿದರು.

ಏಕವಚನದಲ್ಲೇ ವಾಗ್ದಾಳಿ

ಹೊಂದಾಣಿಕೆ ಮಾಡಿಕೊಳ್ಳಲು ನಾವೇನು ಇವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಈ ಹಿಂದೆ ಸರ್ಕಾರ ರಚನೆ ವಿಚಾರದಲ್ಲಿ ಯಾರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮನ್ನು ಬ್ಲಾಕ್‌ ಮೇಲ್‌ ಮಾಡುತ್ತಾರೆ ಎಂದು ಹೇಳಿರುವ ಅಮಿತ್‌ ಶಾನಿಗೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಅಮಿತ್‌ ಶಾ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

ನಾವೇನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಅಧಿಕಾರ ಪಡೆಯಲು ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಜೆಡಿಎಸ್‌ 30 ಕ್ಷೇತ್ರ ಗೆದ್ದು ಬ್ಲಾಕ್‌ ಮೇಲ್‌ ಮಾಡುತ್ತದೆ ಎಂದಿದ್ದಾರೆ. ಆದರೆ, ನಾವು 130 ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೇವೆ. ಮಂಡ್ಯ ಜಿಲ್ಲೆಗೆ ಬಿಜೆಪಿ ಕೊಡುಗೆ ಏನೆಂದು ತಿಳಿಸಲಿ ಎಂದು ಅವರು ಸವಾಲು ಹಾಕಿದರು.

ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿ ದುರುಪಯೋಗ

ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ. ಬಿಜೆಪಿ ಕಟ್ಟಿಬೆಳೆಸಿದ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ. ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದಾರೆ. ಮಂತ್ರಿಗಳನ್ನು ನೇಮಕ ಮಾಡಿಕೊಳ್ಳಲು ಬಸವರಾಜ ಬೊಮ್ಮಾಯಿಗೆ ಸಾಧ್ಯವಾಗುತ್ತಿಲ್ಲ. ಎಲ್ಲವೂ ದೆಹಲಿ ಬಿಜೆಪಿ ನಾಯಕರ ಅಣತಿಯಂತೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್‌, ಎಂ. ಅಶ್ವಿನ್‌ಕುಮಾರ್‌, ಸಿ.ಎನ್‌. ಮಂಜೇಗೌಡ, ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್‌, ಮಾಜಿ ಮೇಯರ್‌ಗಳಾದ ಎಂ.ಜೆ. ರವಿಕುಮಾರ್‌, ಆರ್‌. ಲಿಂಗಪ್ಪ ಮೊದಲಾದವರು ಇದ್ದರು.

-----

ಬಾಕ್ಸ್‌...

ಕನ್ನಡಿಗರ ಪಕ್ಷ ಜೆಡಿಎಸ್‌ ಅಧಿಕಾರಕ್ಕೆ

ಮಂಡ್ಯದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಹಣಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದರು. ಆದರೆ, ನಾನು ಹೋದೆಡೆಯೆಲ್ಲಾ ಜನರು ಸ್ವಯಂ ಪ್ರೇರಣೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುವುದಿಲ್ಲ. ನಾನು ಚಾಲೆಂಜ್‌ ಮಾಡಿ ಹೇಳುತ್ತೀನಿ, ಮುಂದಿನ ಚುನಾವಣೆಯಲ್ಲಿ ಕನ್ನಡಿಗರ ಪಕ್ಷ ಜೆಡಿಎಸ್‌ ಬಹುಮತ ಪಡೆಯಲಿದೆ. ಯಾವುದೇ ಕಾರಣಕ್ಕೂ ಅತಂತ್ರ ಫಲಿತಾಂಶ ಬರುವುದಿಲ್ಲ. ರಾಜ್ಯದ ಜನರು ಜೆಡಿಎಸ್‌ಗೆ ಅಧಿಕಾರ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

----

ಕೋಟ್‌...

ಅನ್ಯ ಪಕ್ಷದ ಶಾಸಕರನ್ನು ಖರೀದಿಸುವಲ್ಲಿ ಬಿಜೆಪಿ ದಾಖಲೆ ಮಾಡಿದೆ. ಚುನಾವಣೆಗೂ ಮುನ್ನವೇ ಶಾಸಕರ ಖರೀದಿಗೆ ಬಿಜೆಪಿ ಸಿದ್ಧತೆ ನಡೆಸಿದೆ. ಉತ್ತರ ಭಾರತದ ರಾಜಕೀಯ ಕರ್ನಾಟಕದಲ್ಲಿ ನಡೆಯುವುದಿಲ್ಲ.

- ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ