ರೈತರ ಅಲೆದಾಟ ತಪ್ಪಿಸಲು ಅಧಿಕಾರಿಗಳ ನಡೆ ಹಳ್ಳಿಯ ಕಡೆ

ರೈತರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಇಲಾಖೆಗಳಿಂದ ಇಲಾಖೆಗಳಿಗೆ ವಿನಾಕಾರಣ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಅಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ರೈತರು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ಸಿ.ಆರ್‌. ಕಲ್ಪಶ್ರೀ ತಿಳಿಸಿದರು.

The authorities move towards the village to avoid wandering of farmers snr

  ತಿಪಟೂರು  : ರೈತರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಇಲಾಖೆಗಳಿಂದ ಇಲಾಖೆಗಳಿಗೆ ವಿನಾಕಾರಣ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಅಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ರೈತರು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ಸಿ.ಆರ್‌. ಕಲ್ಪಶ್ರೀ ತಿಳಿಸಿದರು.

ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಮಜುರೆ ಕುಪ್ಪೂರು ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಹುಟ್ಟುವ ಮಗುವಿನಿಂದ ಹಿಡಿದು ವಯಸ್ಸಾದ ವೃದ್ದರವರೆಗೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಗ್ರಾಮಕ್ಕೆ ವೈದ್ಯರ ಕೊರತೆಯ ಬಗ್ಗೆ ಗಮನಕ್ಕೆ ಬಂದಿದ್ದು ಬಿಳಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಾರಕ್ಕೆ ಮೂರು ದಿನ ವೈದ್ಯರನ್ನು ಇಲ್ಲಿಗೆ ನಿಯೋಜನೆ ಮಾಡಲಾಗುವುದು. ಶಿಕ್ಷಣ ಮತ್ತು ಆರೋಗ್ಯ ಬಹಳ ಮಹತ್ವದ್ದಾಗಿದೆ. ಗ್ರಾಮದ ಎಲ್ಲರೂ ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ ಮಾಡಿಸಿಕೊಂಡರೆ 5 ಲಕ್ಷದವರೆಗೂ ಉಚಿತ ಚಿಕಿತ್ಸೆ ದೊರೆಯುತ್ತದೆ. ಇಂದು ಸ್ಥಳದಲ್ಲೇ ಆಭಾಕಾರ್ಡ್‌ ನೊಂದಣಿ ಮಾಡಿಕೊಳ್ಳುತ್ತಿದ್ದು ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.

ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಹಾಗೂ ಗ್ರಾ.ಪಂ ಸದಸ್ಯ ಕೆ.ಆರ್‌.ದೇವರಾಜು ಮಾತನಾಡಿ, ಇಲ್ಲಿ ಸಾರ್ವಜನಿಕರ ಸಮಸ್ಯೆಗಳು ಹಲವಾರಿದ್ದು ಇವುಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಸಂಬಂದಪಟ್ಟಇಲಾಖೆಗೆ ಸೂಚಿಸಿದರು. ಈ ಭಾಗದ ರೈತರು ತಮ್ಮ ಜಮೀನಿನ ಪೌತಿ ಖಾತೆ ಮತ್ತು ಜಂಟಿ ಖಾತೆಗಳನ್ನು ಮಾಡಿಕೊಳ್ಳುವುದರಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕಾನೂನಿನ ಸಡಿಲಕೆ ಮಾಡಿ ಖಾತೆಯನ್ನು ಮಾಡುವಂತೆ ಮನವಿ ಮಾಡಿದರು.

ರೈತ ಚಿಕ್ಕಣ್ಣ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ನವರು ರೈತರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರಿಂದಾಗಿಯೇ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಕೇವಲ ಉಳ್ಳವರು, ರಾಜಕಾರಣಿಗಳು ಹಾಗೂ ಪ್ರಭಾವಿಗಳಿಗೆ ಮಾತ್ರ ಸಾಲ ಕೊಡುತ್ತಾರೆ. ವಿನಃ ಬಡ ರೈತರಿಗೆ ಎಳ್ಳಷ್ಟೂಸಹಾಯ ಮಾಡುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಷಯ ತರಲು ಬಂದಿದ್ದೇನೆ. ಲೀಡ್‌ ಬ್ಯಾಂಕ್‌ನವರನ್ನು ಇಲ್ಲಿಗೆ ಕರೆಸಿ ವಿಚಾರಿಸಿ ಎಂದರು. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಉಪವಿಭಾಗಾಧಿಕಾರಿ ಕಲ್ಪಶ್ರೀ ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಸಂಬಂದಿಸಿದಂತೆ ಸುಮಾರು 200 ಅರ್ಜಿಗಳು ಬಂದಿದ್ದು ಇವುಗಳನ್ನು ಪರಿಶೀಲಿಸಿ ಕ್ರಮ ವಹಿಸುವಂತೆ ಉಪವಿಭಾಗಾಧಿಕಾರಿಗಳು ತಹಸೀಲ್ದಾರ್‌ಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕರಡಿ ಗ್ರಾ.ಪಂ ಅಧ್ಯಕ್ಷೆ ವಸಂತಕುಮಾರಿ, ಉಪಾಧ್ಯಕ್ಷ ಮುನಿರಾಜು, ಸದಸ್ಯರಾದ ರವೀಶ್‌, ಕುಮಾರಯ್ಯ, ತಹಸೀಲ್ದಾರ್‌ ಪವನ್‌ಕುಮಾರ್‌, ಉಪತಹಸೀಲ್ದಾರ್‌ ಕೆ.ಎಸ್‌. ಜಗನ್ನಾಥ್‌ ಮತ್ತು ಅಶೋಕ್‌, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್‌ ಸೇರಿದಂತೆ ಪಿಡಿಓ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios