ತುಮಕೂರು(ಜ.25): ಶಿಕ್ಷಕರ ಟಿಇಟಿ ಪರೀಕ್ಷೆ ನೇಮಕಾತಿ ಹಾಗೂ ಪ್ರಮೋಷನ್ ತೊಡಕುಗಳನ್ನ ಪರಿಹಾರ ಮಾಡಲು ಚರ್ಚಿಸಲಾಗಿದೆ. ಅರ್ಹತಾ ಪರೀಕ್ಷೆಯಿಂದಾಗಿ ಶಿಕ್ಷಕರ ಆಯ್ಕೆ ಕಷ್ಟವಾಗುತ್ತಿದ್ದು ಈ ನಿಟ್ಟಿನಲ್ಲಿ ಕೆಲವು ಮಾನದಂಡಗಳನ್ನು ರದ್ದು ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಶಿಕ್ಷಣ‌ ಸಚಿವ ಸುರೇಶ್ ಕುಮಾರ್, ಶಿಕ್ಷಕರ ಟಿಇಟಿ ಪರೀಕ್ಷೆ ತೊಡಕುಗಳನ್ನು ಪರಿಹಾರ ಮಾಡಲು ಚರ್ಚಿಸಲಾಗಿದೆ. ಸಿಇಟಿ ಪರೀಕ್ಷೆಯಲ್ಲಿ  C ಮತ್ತು R  ರೂಲ್ಸ್‌ನಲ್ಲಿ ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಇದರಿಂದ ಶಿಕ್ಷಕರ ಆಯ್ಕೆ ಕಠಿಣ ವಾಗಿದೆ. ಈ ಮಾನದಂಡಗಳು ಮಟ್ಟ ಬೇಕೋ ಬೇಡವೋ ಅನ್ನುವ ಚರ್ಚೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಡೀಸಿ ಕಚೇರಿಗಳಲ್ಲಿ ಪಿಯು ಪರೀಕ್ಷೆ ನಿಯಂತ್ರಣ: ಸುರೇಶ್‌

ಈ ವಿಚಾರದಲ್ಲಿ ಸದ್ಯದಲ್ಲೇ ಪರಿಹಾರ ದೊರೆಯಲಿದೆ. ಹಿಂದಿನ ಸರ್ಕಾರ ಹೊರಡಿಸಿದ ಆದೇಶದಂತೆ ಆರ್‌ಟಿಇ  ಪದ್ದತಿ ಮುಂದುವರೆದಿದೆ. ಅರ್ಜಿ ಹಾಕುವ ವಿದ್ಯಾರ್ಥಿಯ ನಿವಾಸದ 1 ಕಿ.ಮಿ.ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇರಬಾರದು. ಅದೇ ಆದೇಶ ಮುಂದುವರೆದಿದೆ. ಬದಲಾವಣೆ ಬಗ್ಗೆ ಸಿಎಂ ಬಳಿ ಚರ್ಚಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳದ ವಾಟರ್ ಬೆಲ್ ಪದ್ಧತೆ ಜಾರಿ:

ಸರ್ಕಾರಿ ಶಾಲೆಯೂ ಸದೃಢವಾಗಬೇಕು ಎಂಬ ಆಶಯ ನನ್ನದು. ಎರಡರ ನಡುವೆ ಬ್ಯಾಲೆನ್ಸ್ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಶಾಲೆಗಳಲ್ಲಿ ಶುದ್ದವಾದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆರ್.ಒ.ಪ್ಲಾಂಟ್ ಗಳನ್ನು ಕೊಡುತಿದ್ದೇವೆ. ವಿದ್ಯಾರ್ಥಿಗಳಿಗೆ ನೀರು ಕುಡಿಯುವ ಅಭ್ಯಾಸ ಆಗಬೇಕು. ಆ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ವಾಟರ್ ಬೆಲ್ ಪದ್ದತಿ ಜಾರಿ ಮಾಡುತ್ತೇವೆ ಎಂದಿದ್ದಾರೆ.

ಸರ್ಕಾರಿ ಶಾಲೆಯ ಆಂಗ್ಲ ಮಾಧ್ಯಮ ತರಗತಿಗಳು ಚೆನ್ನಾಗಿ‌ ನಡೆಯುತ್ತಿದೆ. ಇನ್ನೂ ಹೆಚ್ಚಿನ ಪಬ್ಲಿಕ್ ಶಾಲೆಗಳು ಬೇಕೆಂದು ಶಾಸಕರು ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.