ಬೆಳ್ತಂಗಡಿ ಬಿಜೆಪಿ ಎಂಎಲ್‌ಎ ಹರೀಶ್ ಪೂಂಜ ಬಂಧನದ ಹೈಡ್ರಾಮಾ: ಶಾಸಕರ ಮನೆಯ ಬಳಿ ಉದ್ವಿಗ್ನ ವಾತಾವರಣ
ಪೊಲೀಸರು ಶಾಸಕರಿಗೆ ನೋಟಿಸ್ ನೀಡಿದರು. ನೋಟಿಸ್‌ಗೆ ಐದು ದಿನಗಳಲ್ಲಿ ಉತ್ತರಿಸುವ ಭರವಸೆಯನ್ನು ಶಾಸಕರು ನೀಡಿದ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಪೋಲಿಸರು ಶಾಸಕರನ್ನು ಬಂಧಿಸಲು ಸಾಧ್ಯವಾಗದೆ ತೆರಳಿದರು.
ಬೆಳ್ತಂಗಡಿ(ಮೇ.23): ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಬುಧವಾರ ಬೆಳಗ್ಗೆ ಗರ್ಡಾಡಿ ಗ್ರಾಮದಲ್ಲಿರುವ ಶಾಸಕರ ಮನೆಗೆ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದರು. ವಿಷಯ ತಿಳಿದು ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರು ಶಾಸಕರಿಗೆ ನೋಟಿಸ್ ಕೊಟ್ಟು ಬರಿಗೈಯಲ್ಲಿ ವಾಪಸ್ ಹೋದ ಘಟನೆ ನಡೆದಿದೆ.
ಶಾಸಕರ ಮನೆಯೊಳಗೆ ಪೊಲೀಸರು ಮತ್ತು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬ್ರಿಜೇಶ್ ಚೌಟ, ವಕೀಲರಾದ ಶಂಭು ಶರ್ಮ, ಅಜಯ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹರಿಕೃಷ್ಣ ಬಂಟ್ವಾಳ ಮೊದಲಾದವರ ನಡುವೆ ಮಾತುಕತೆ, ವಾಗ್ವಾದ, ವಾದ, ಪ್ರತಿವಾದಗಳು ನಡೆದವು. ಕೊನೆಗೆ ಪೊಲೀಸರು ಶಾಸಕರಿಗೆ ನೋಟಿಸ್ ನೀಡಿದರು. ನೋಟಿಸ್‌ಗೆ ಐದು ದಿನಗಳಲ್ಲಿ ಉತ್ತರಿಸುವ ಭರವಸೆಯನ್ನು ಶಾಸಕರು ನೀಡಿದ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಪೋಲಿಸರು ಶಾಸಕರನ್ನು ಬಂಧಿಸಲು ಸಾಧ್ಯವಾಗದೆ ತೆರಳಿದರು.
ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪ; ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೊಂದು ಎಫ್‌ಐಆರ್!
ಘಟನೆ ಹಿನ್ನೆಲೆ:
ಪೊಲೀಸ್ ಇಲಾಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿರುವ ಬಗ್ಗೆ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ರೌಡಿ ಶೀಟರ್ ಶಶಿರಾಜ್ ಶೆಟ್ಟಿಯ ಬಂಧನ ವಿರೋಧಿಸಿ ಬೆಳ್ತಂಗಡಿ ವಿಕಾಸ ಸೌಧದ ಎದುರು ಸೋಮವಾರ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಹಾಗೂ ಇತರರು ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿರುವ ಬಗ್ಗೆ ಹಾಗೂ ಈ ಪ್ರತಿಭಟನಾ ಸಭೆಯಲ್ಲಿ ಹರೀಶ್ ಪೂಂಜ ಅವರು ಪ್ರಸ್ತುತ ಬಂಧಿತರಾಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ಧನಿದ್ದೇನೆ ಹಾಗೂ ಬೆಂಗಳೂರಿನ ಡಿ.ಜೆ ಹಳ್ಳಿ ಕೆ.ಜೆ ಹಳ್ಳಿ ಯ ಪೊಲೀಸ್ ಠಾಣೆಗಳಿಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿದ್ದರು. ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿದ್ದಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ. 58/2024 ಕಲಂ 143, 147, 34 , 504, 506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೋಲಿಸರ ಬೆಟಾಲಿಯನ್ ಶಾಸಕರನ್ನು ಬಂಧಿಸಲು ಮನೆಗೆ ದೌಡಾಯಿಸಿತ್ತು.
ಮಾಹಿತಿ ತಿಳಿದ ಬಿಜೆಪಿ ಕಾರ್ಯಕರ್ತರು ಗುಂಪುಗೂಡಿ ಬಂದು ಜಮಾಯಿಸತೊಡಗಿದರು. ಶಾಸಕರ ಮನೆಗ ಬರುವ ದಾರಿ ಜನರಿಂದ ಮತ್ತು ಪೋಲಿಸರಿಂದ ಬಂದ್ ಆಗಿತ್ತು. ಕಾರ್ಯಕರ್ತರು ಪೋಲಿಸರಿಗೆ ಗೋ ಬ್ಯಾಕ್ ಘೋಷಣೆ ಕೂಗುತ್ತಿದ್ದರು. ಶಾಸಕರನ್ನು ಕರೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪೋಲಿಸರ ಮುಂದೆ ಪ್ರತಿಭಟಿಸಿದರು. ಪೊಲೀಸರು ಹಾಗೂ ಕಾರ್ಯಕರ್ತರ ನಡುವಿನ ಹೈ ಡ್ರಾಮಕ್ಕೆ ಸಾಕ್ಷಿಯಾಗಿತ್ತು ಪೂಂಜ ನಿವಾಸ.
ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಮಾತುಕತೆಗೆ ಸಂಸದರು, ಜಿಲ್ಲೆಯ ಶಾಸಕರು ಆಗಮಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಪೂರ್ ಮಠ್ ಮತ್ತು ಪಿಎಸ್ಐ ಚಂದ್ರಶೇಖರ್ ಆಗಮಮಿಸಿದರು. ಬಂಧನ ಸಾಧ್ಯತೆಯ ಬಗ್ಗೆ ನಿವಾಸದೊಳಗೆ ನಿರಂತರ ಚರ್ಚೆ ಮುಂದುವರಿಯಿತು.
ಮೊದಲು ನೋಟಿಸ್ ನೀಡಬೇಕಿತ್ತು ಆದರೆ, ಯಾವುದೇ ನೋಟಿಸ್ ನೀಡಿಲ್ಲ. ನೋಟಿಸ್ ನೀಡದೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕರೆಯುವಂತಿಲ್ಲ, ಹೀಗಾಗಿ ಅದು ಕಾನೂನು ಬಾಹಿರ. ಶಾಸಕ ಪೂಂಜ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿದೆ. ಅದರಲ್ಲಿ ಕೆಲವು ಸೆಕ್ಷನ್ ನಾನ್ ಬೇಲೆಬಲ್ ಆಗಿವೆ. ಸುಪ್ರೀಂ ಕೋರ್ಟ್ ಈ ಹಿಂದಿನ ಆದೇಶದ ಪ್ರಕಾರ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವ ಪ್ರಕರಣಗಳಲ್ಲಿ ಬಂಧನ ಅನಿವಾರ್ಯವಲ್ಲ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಬಂಧನ ಮಾಡಲು ಅವಕಾಶವಿದೆ. ಆದರೆ ಎಲ್ಲ ಪ್ರಕರಣಗಳಲ್ಲೂ ಬಂಧನ ಅಗತ್ಯವಿಲ್ಲ, ವಿಚಾರಣೆಗೆ ಕರೆಯಲು ಪೇದೆಯ ಮೂಲಕ ನೋಟಿಸ್ ನೀಡಬಹುದು. ಆದರೆ ಹಿರಿಯ ಅಧಿಕಾರಿಗಳು ಬರುವ ಅಗತ್ಯತೆ ಏನಿದೆ? ನೋಟಿಸ್ ನೀಡಲು ಕೇಳಿದ್ದೇವೆ ಈವರೆಗೂ ನೋಟಿಸ್ ನೀಡಿಲ್ಲ ಎಂದು ವಕೀಲ ಶಂಭು ಶರ್ಮ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.
ವಿಟ್ಲ ಠಾಣಾಧಿಕಾರಿಗಳಿಂದ ನೋಟಿಸ್ ಜಾರಿ:
ಇತ್ತ ಜನಪ್ರತಿನಿಧಿಗಳ ಚರ್ಚೆಯಲ್ಲಿ ಶಾಸಕರ ಬಂಧನವಾದರೆ ದ.ಕ. ಜಿಲ್ಲಾ ಬಂದ್‌ಗೆ ಕರೆ ಕೊಡಲು ನಿರ್ಧಾರಕ್ಕೆ ಬಂದರು. ಆದರೂ ಪೋಲಿಸರ ಮುಂದಿನ ನಡೆಗಾಗಿ ಅವರು ಕಾದರು. ಕೆಲ ಹೊತ್ತಿನಲ್ಲಿ ಕೊನೆಗೂ ಶಾಸಕ ಹರೀಶ್ ಪೂಂಜಗೆ ವಿಟ್ಲ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಮತ್ತು ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಅವರಿಂದ ನೋಟಿಸ್ ಜಾರಿಯಾಯಿತು. ತನಿಖಾಧಿಕಾರಿಗಳ ಜೊತೆ ಠಾಣೆಗೆ ಬರಲು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆದರೆ ಶಾಸಕರ ಪರ ವಕೀಲರು ಮೂರು ದಿನಗಳ ಕಾಲ ಸಮಯಾವಕಾಶ ಕೋರಿದರು. ಆದರೆ ನೋಟಿಸ್ ಪ್ರಕಾರ ಶಾಸಕರಿಗೆ ಒಂದು ಗಂಟೆ ಮಾತ್ರ ಸಮಯಾವಕಾಶ ಎಂದು ಪೋಲಿಸರು ಪಟ್ಟು ಹಿಡಿದರು. ಒಂದು ಗಂಟೆಯೊಳಗೆ ಠಾಣೆಗೆ ವಿಚಾರಣೆಗೆ ಬರಲು ಸೂಚಿಸಿದರು. ಬರದಿದ್ದರೆ ಬಂಧಿಸುವ ಪರೋಕ್ಷ ಸೂಚನೆಯನ್ನು ಪೋಲಿಸರು ನೀಡಿದರು. ಇದನ್ನರಿತ ಕಾರ್ಯಕರ್ತರು ಇನ್ನಷ್ಟು ಪ್ರಕ್ಷುಬ್ದರಾದರು.
ಜಿಲ್ಲಾ ಬಂದ್ ಎಚ್ಚರಿಕೆ:
ಇತ್ತ ಸಂಸದ ನಳೀನ್ ಕುಮಾರ್ ಕಟೀಲು ಅವರು ಶಾಸಕರನ್ನು ಬಂಧಿಸಿದರೆ ನಾಳೆ ದ.ಕ. ಜಿಲ್ಲಾ ಬಂದ್ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರಲ್ಲದೆ ಯಾವುದೇ ಕಾರಣಕ್ಕೂ ನಾವು ಶಾಸಕ ಪೂಂಜಾ ಬಂಧಿಸಲು ಬಿಡುವುದಿಲ್ಲ. ಕಾನೂನನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸರ್ಕಾರದ ಕೈಗೊಂಬೆಯಂತೆ ಪೊಲೀಸರು ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಇಂಥಹ ಅದೆಷ್ಟೋ ಕೇಸ್‌ಗಳು ಆಗಿವೆ, ಸ್ವತಃ ನನ್ನ ವಿರುದ್ದವೂ ಇಂಥಹ ಕೇಸ್‌ಗಳಿದ್ದರೂ ಬಂಧನ ಆಗಿರಲಿಲ್ಲ. ಕಾನೂನಿನ ಪ್ರಕಾರ ನೊಟೀಸ್ ಕೊಟ್ಟು ವಿಚಾರಣೆಗೆ ಕರೆಯಲಿ. ಅದು ಬಿಟ್ಟು ಮನೆಗೆ ನುಗ್ಗಿ ನೋಟಿಸ್ ಕೊಟ್ಟು ಬಂಧಿಸಲು ಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಮತ್ತೊಂದು ನೋಟಿಸ್ ಕೊಟ್ಟು ವಿಚಾರಣೆಗೆ ಬರಲು ಹೇಳಿದ್ದಾರೆ. ಕಾನೂನಿಗೆ ಗೌರವ ಕೊಟ್ಟು ನೋಟಿಸ್ ಸ್ವೀಕರಿಸಿದ್ದೇವೆ, ಆದರೆ ವಿಚಾರಣೆಗೆ ಬರಲು ಐದು ದಿನ ಸಮಯ ಕೇಳಿದ್ದು, ನೋಟಿಸ್‌ಗೆ ಉತ್ತರಿಸಲಿದ್ದೇವೆ. ದ್ವೇಷದ ರಾಜಕಾರಣಕ್ಕೆ ಸೋಲಾಗಿದೆ. ಮೊದಲ ಹಂತದ ಗೆಲುವು ನಮ್ಮದಾಗಿದೆ. ಎಸ್ಪಿಯವರು ಕಾನೂನು ಪ್ರಕಾರ ಕೆಲಸ ಮಾಡಲಿ, ಅದು ಬಿಟ್ಟು ಬಂಧನಕ್ಕೆ ಯತ್ನಿಸಿದ್ರೆ ಜಿಲ್ಲೆಯಾದ್ಯಂತ ಉತ್ತರ ಕೊಡಲಿದ್ದೇವೆ ಎಂದು ಸಂಸದ ನಳಿನ್ ಕುಮಾರ್ ಎಚ್ಚರಿಸಿದರು.
ಈ ಎಲ್ಲ ಘಟನೆಗಳ ನಡುವೆ ಶಾಸಕ ಹರೀಶ್ ಪೂಂಜ ಅವರ ಮನೆಗೆ ಹೆಚ್ಚುವರಿ ಪೊಲೀಸರು ಆಗಮಿಸಿದರು. ಲಾಠಿ ಹಿಡಿದು ಬಂದ ಪೊಲೀಸರನ್ನು ಕಾರ್ಯಕರ್ತರು ಮನೆಯ ಒಳಗೆ ಹೋಗಲು ಬಿಡದೆ ಅಡ್ಡಗಟ್ಟಿದರು. ಡಿವೈಎಸ್‌ಪಿ ಹಾಗೂ ಸರ್ಕಲ್ ಪೋಲಿಸ್ ಅಧಿಕಾರಿಗಳು ಹರೀಶ ಪೂಂಜ ಜೊತೆ ಮಾತುಕತೆ ನಡೆಸಿದರು. ಹೊರಗೆ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಶಾಸಕರ ಬದಲು ನಮ್ಮನ್ನು ಬಂಧಿಸಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮನೆಯಿಂದ ಹೊರಗೆ ಬಂದು ಶಾಸಕರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಬರಿಗೈಲಿ ವಾಪಸ್ ಹೋದ ಪೊಲೀಸ್ ಪಡೆ
ಅಂತೂ ಭಾರೀ ಪ್ರತಿರೋಧ, ಚರ್ಚೆ, ವಾದ, ವಿವಾದ, ಕಾನೂನು ಸಮರ ಹಾಗೂ ಕಾರ್ಯಕರ್ತರ ವಿರೋಧದ ನಡುವೆ ಶಾಸಕರ ಬಂಧನ ಆಗಲಿಲ್ಲ. ಇದರಿಂದ ಕಾರ್ಯಕರ್ತರು ನಿರಾಳಗೊಂಡರು. ಭಾರೀ ಸಂಖ್ಯೆಯಲ್ಲಿ ಪೊಲೀಸ್ ಪಡೆ ಬಂದರೂ ಬಂಧನ ಅಸಾಧ್ಯವಾಯಿತು. ಕೊನೆಗೆ ನೋಟಿಸ್ ಕೊಟ್ಟು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪೊಲೀಸರು ತೆರಳಿದರು.ಓರ್ವ ಡಿವೈಎಸ್‌ಪಿ, 3 ಸರ್ಕಲ್ ಇನ್ಸ್‌ಪೆಕ್ಟರ್‌ಗಳು, 25 ಎಸ್.ಐ.ಗಳು, 9 ಬಸ್‌ಗಳಲ್ಲಿ ಬಂದ ನೂರಕ್ಕೂ ಹೆಚ್ಚು ಪೊಲೀಸರ ಬೆಟಾಲಿಯನ್ ಶಾಸಕರ ಮನೆಯ ಸುತ್ತ ಜಮಾಗೊಂಡು ಬಂಧಿಸಲು ಪ್ರಯತ್ನ ನಡೆಸಿದ್ದರು.
ಕರಾವಳಿ ಬಿಜೆಪಿಗರ ಕಡೆಗಣನೆ ವಿರುದ್ಧ ನನ್ನ ಸ್ಪರ್ಧೆ: ರಘುಪತಿ ಭಟ್
ಬಿಜೆಪಿ ಶಕ್ತಿ ಏನೆಂದು ಗೊತ್ತಾಗಿದೆ: ಶಾಸಕ ಪೂಂಜ
ಬಿಜೆಪಿಯ ಶಕ್ತಿ ಏನೆಂಬು ಇಂದು ಗೊತ್ತಾಗಿದೆ. ಕಾರ್ಯಕರ್ತನಿಗೆ ವಿನಾಕಾರಣ ತೊಂದರೆಯಾದಾಗ ಅದನ್ನು ವಿರೋಧಿಸಲು ಜನ ನನನ್ನು ಆರಿಸಿರುವುದು. ಶಶಿರಾಜ್ ಶೆಟ್ಟಿಗೂ ಆಗಿರುವ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಏಳಿಗೆಯನ್ನು ಸಹಿಸದೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅದನ್ನು ನಾನು ಖಂಡಿಸಿದ್ದೇನೆ. ನಾನು ಅಧಿಕಾರಕ್ಕಾಗಿ ಪೊಲೀಸರಿಗೆ ಬೈದಿಲ್ಲ. ಕಾರ್ಯಕರ್ತರ ಶಕ್ತಿಗಾಗಿ ಬೈದಿದ್ದೇನೆ. ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇಲ್ಲ. ಇಲಾಖೆಯವರ ಮೇಲೆ ಹೆಚ್ಚು ದೌರ್ಜನ್ಯ ಮಾಡಿದವರು, ಅವರ ಮೂಲಕ ಸಮಾಜದ ಮೇಲೆ ದೌರ್ಜನ್ಯ ಮಾಡಿದವರು ಕಾಂಗ್ರೆಸ್‌ನವರು. ಸಿದ್ದರಾಮಯ್ಯನವರು ಪೊಲೀಸ್ ಅಧಿಕಾರಿ ಬಿದರಿ ಅವರ ಕಾಲರ್ ಹಿಡಿದಿಲ್ಲವೇ? ಎಂದು ಶಾಸಕ ಹರೀಶ್ ಪೂಂಜ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ತುರ್ತು ಪರಿಸ್ಥಿತಿಯಿಂದ ಹಿಡಿದು ಇಂದಿನವರೆಗೆ ಪೋಲಿಸ್ ಇಲಾಖೆಯನ್ನು ಬಳಸಿ ವಿಪಕ್ಷಗಳನ್ನು ಹಣಿಯುವುದು ಅಭ್ಯಾಸವಾಗಿದೆ. ತಾಲೂಕಿಗೆ ಸಿದ್ದರಾಮಯ್ಯ ಬರುವ ಮೊದಲು ಯಾಕೆ ಎಫ್.ಐ.ಆರ್. ಹಾಕಿಲ್ಲ ? ನಾಚಿಕೆಯ ವಿಚಾರ ಇದು. ಅವರು ಬರುವ ಮೊದಲು ದಾಖಲಿಬೇಕಿತ್ತು. ಇಷ್ಟು ದಿನ ಯಾಕೆ ಮಾಡಿದರು. ಬೆಳ್ತಂಗಡಿಯ ಕಾರ್ಯಕರ್ತರ ರಕ್ಷಣೆಗೆ ಜನಪ್ರತಿನಿಧಿಗಳು ಬಂದಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರವಾಣಿ ಮೂಲಕ ಪರಿಸ್ಥಿತಿಯನ್ನು ಆಗ್ಗಾಗೆ ವಿಚಾರಿಸುತ್ತಿದ್ದರು. ಕಾರ್ಯಕರ್ತರ ಶಕ್ತಿಗೆ ಹೆದರು ಪೊಲೀಸರು ಇಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.