* ನ್ಯಾ.ಬಿ.ಎಸ್‌.ಪಾಟೀಲ್‌ ಸೂಚನೆ ಹಿನ್ನೆಲೆ* ಕಚೇರಿಗಳ ವಾಸ್ತವಾಂಶ ತಿಳಿಸಲು ಸೂಚನೆ* ಅನಗತ್ಯ ಕಿರುಕುಳ ನೀಡದಂತೆ ನಿರ್ದೇಶನ

ಬೆಂಗಳೂರು (ಜೂ.29): ಸಾರ್ವಜನಿಕರಿಗೆ ಅನಗತ್ಯ ಕಿರುಕುಳ, ಮಧ್ಯವರ್ತಿ ಹಾವಳಿ ಸಂಬಂಧ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 10 ಉಪನೋಂದಣಾಧಿಕಾರಿಗಳ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಸೂಚನೆಯ ಮೇರೆಗೆ ಲೋಕಾಯುಕ್ತ ಪೊಲೀಸರು ಮಂಗಳವಾರ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ತೆರಳಿ ಪರಿಶೀಲಿಸಿದರು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ, ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದರು. ಯಶವಂತಪುರ, ಕೆ.ಆರ್‌.ಪುರ, ಜಯನಗರ, ನಾಗರಭಾವಿ, ಬೊಮ್ಮನಹಳ್ಳಿ, ಗಂಗಾನಗರ, ಬ್ಯಾಟರಾಯನಪುರ, ಮಾದನಾಯಕನಹಳ್ಳಿ, ಆರ್‌.ಆರ್‌.ನಗರ, ಅತ್ತಿಬೆಲೆ ಮತ್ತು ಜಿಗಣಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಭೇಟಿ ನೀಡಲಾಗಿದೆ.

ಬೆಳ್ಳಂಬೆಳಗ್ಗೆ ಬೆಂಗ್ಳೂರಲ್ಲಿ ಐಟಿ ದಾಳಿ: ಶಿಕ್ಷಣ ಸಂಸ್ಥೆಗಳಿಗೆ ಬಿಗ್‌ ಶಾಕ್‌..!

ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಇಸಿ ಪ್ರಮಾಣ ಪತ್ರ ವಿಳಂಬ, ಅಕ್ರಮವಾಗಿ ಜಮೀನು ಪರಭಾರೆ, ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಹೆಚ್ಚು ಹಣ ವಸೂಲಿ ಸೇರಿದಂತೆ ಇತರೆ ದೂರುಗಳು ಲೋಕಾಯುಕ್ತ ಸಂಸ್ಥೆಗೆ ಬಂದಿವೆ. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಅವರು ಪೊಲೀಸ್‌ ತಂಡಗಳಾಗಿ ನಗರದಲ್ಲಿನ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಭೇಟಿ ನೀಡಿ ವಾಸ್ತವಾಂಶದ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಎಸಿಬಿ ದಾಳಿ: ಬಚ್ಚಲಲ್ಲಿ ಹಣ ಬಚ್ಚಿಟ್ಟಿದ್ದ ಭ್ರಷ್ಟ ಅಧಿಕಾರಿ..!

ಕಚೇರಿಗೆ ಭೇಟಿ ನೀಡಿದ ವೇಳೆ ಸಿಬ್ಬಂದಿ ಲಂಚ ಕೇಳಿದರೆ ಅಥವಾ ದಲ್ಲಾಳಿಗಳಿಂದ ಮತ್ತು ಸಿಬ್ಬಂದಿಯಿಂದ ಅನಗತ್ಯವಾಗಿ ಕಿರುಕುಳವಾದರೆ ದೂರು ನೀಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಿ ಅರಿವು ಮೂಡಿಸಲಾಯಿತು. ಸಿಬ್ಬಂದಿಗೂ ಅನಗತ್ಯ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಲಾಯಿತು ಎಂದು ಮೂಲಗಳು ಹೇಳಿವೆ. ಸಬ್‌-ರಿಜಿಸ್ಟ್ರಾರ್‌ ಕಚೇರಿಗಳಿಗೆ ಭೇಟಿ ನೀಡುವ ಕಾರ್ಯವು ಲೋಕಾಯುಕ್ತ ಪೊಲೀಸರು ಮುಂದುವರಿಸಲಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿನ ಎಲ್ಲಾ ಸಬ್‌-ರಿಜಿಸ್ಟ್ರಾರ್‌ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ಸಂಪೂರ್ಣ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಕೆ ಮಾಡಲಿದ್ದಾರೆ. ನಂತರ ಲೋಕಾಯುಕ್ತರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.