ಕಾಫಿನಾಡು ದೇಗುಲಗಳಲ್ಲಿ ದೇವರ ದರ್ಶನ; ಭಕ್ತರ ಸಂಖ್ಯೆ ವಿರಳ

ಜಿಲ್ಲೆಯ ಮಳೆ ದೇವರೆಂದು ಖ್ಯಾತಿ ಹೊಂದಿರುವ ಕಿಗ್ಗಾದ ಋುಷ್ಯಶೃಂಗ, ದಕ್ಷಿಣಕಾಶಿ ಶ್ರೀ ಕಳಸೇಶ್ವರ, ಶಕ್ತಿದೇವತೆ ಶ್ರೀ ಶಾರದಾಂಬೆ, ಅಮೃತಾಪುರದ ಶ್ರೀ ಅಮೃತೇಶ್ವರ, ಸಿಂಹನಗದ್ದೆಯ ಬಸ್ತಿಮಠ, ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತಾ ಕೇಂದ್ರ ದತ್ತಪೀಠ ದೇವಾಲಯಗಳ ಬಾಗಿಲುಗಳು ಸೋಮವಾರ ತೆರೆದು, ಭಕ್ತರಿಗೆ ಪ್ರವೇಶ ಕಲ್ಪಿಸಲಾಯಿತು. ಆದರೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 

Temples Open In Chikkamagaluru but Numbers of Devotees Decreased

ಚಿಕ್ಕಮಗಳೂರು(ಜೂ.09): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಕ್ತರಿಂದ ದೂರ ಉಳಿದುಕೊಂಡಿದ್ದ ದೇವಾಲಯಗಳಲ್ಲಿ ಸೋಮವಾರದಿಂದ ದೇವರ ದರ್ಶನ ಆರಂಭವಾಯಿತು.

ಪ್ರಮಖವಾಗಿ ಮಳೆ ದೇವರೆಂದು ಖ್ಯಾತಿ ಹೊಂದಿರುವ ಕಿಗ್ಗಾದ ಋುಷ್ಯಶೃಂಗ, ದಕ್ಷಿಣಕಾಶಿ ಶ್ರೀ ಕಳಸೇಶ್ವರ, ಶಕ್ತಿದೇವತೆ ಶ್ರೀ ಶಾರದಾಂಬೆ, ಅಮೃತಾಪುರದ ಶ್ರೀ ಅಮೃತೇಶ್ವರ, ಸಿಂಹನಗದ್ದೆಯ ಬಸ್ತಿಮಠ, ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತಾ ಕೇಂದ್ರ ದತ್ತಪೀಠ ದೇವಾಲಯಗಳ ಬಾಗಿಲುಗಳು ಸೋಮವಾರ ತೆರೆದು, ಭಕ್ತರಿಗೆ ಪ್ರವೇಶ ಕಲ್ಪಿಸಲಾಯಿತು.

ಕೊರೋನಾ ವೈರಸ್‌ ನಿಯಂತ್ರಣದ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳ ಹಿಂದೆ ದೇವಾಲಯಗಳು ಮುಚ್ಚಿ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಲಾಗಿತ್ತು. ದೇವಾಲಯಗಳನ್ನು ತೆರೆಯಲು ಅವಕಾಶ ಕೋರಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಮುಜರಾಯಿ ದೇವಾಲಯಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಿತು.

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಭಕ್ತರ ಭೇಟಿ ವಿರಳ, ಹೀಗಿತ್ತು ಮೊದಲ ದಿನ

ಈ ಸುತ್ತೋಲೆ ಕೈ ಸೇರುತ್ತಿದ್ದಂತೆ ಜಿಲ್ಲೆಯ 880 ಮುಜರಾಯಿ ದೇವಾಲಯಗಳನ್ನು ತೆರೆಯಲು ಜಿಲ್ಲಾಧಿಕಾರಿ ಅವರು ತಹಸೀಲ್ದಾರ್‌ಗಳ ಮೂಲಕ ನಿರ್ದೇಶನ ನೀಡಿದರು. ಅದರಂತೆ ಮುಂಜಾಗ್ರತಾ ಕ್ರಮವಾಗಿ ದೇವಾಲಯಗಳನ್ನು ಸೋಮವಾರ ತೆರೆಯಲಾಯಿತು. ದೇವಾಲಯದ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಜರ್‌ ಇಡಲಾಗಿತ್ತು. ಭಕ್ತರು, ಕೈಗಳಿಗೆ ಸ್ಯಾನಿಟೈಜರ್‌ ಹಚ್ಚಿ ನಂತರದಲ್ಲಿ 3 ಅಡಿ ಅಂತರದಲ್ಲಿ ಮಾಡಿರುವ ರಿಂಗ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೇವಾಲಯದೊಳಗೆ ಹೂವು, ತೆಂಗಿನಕಾಯಿ ತೆಗೆದುಕೊಂಡು ಹೋಗುವುದನ್ನು ನಿಷೇಧ ಮಾಡಿದ್ದರಿಂದ ಭಕ್ತರು, ಬೆಳಗ್ಗೆ ದೇವಾಲಯಗಳಿಗೆ ಬಂದು ದರ್ಶನ ಪಡೆದರು. ಮೂಡಿಗೆರೆ ತಾಲೂಕಿನ ಕಳಸೇಶ್ವರ, ಕಿಗ್ಗಾದ ಋುಷ್ಯಶೃಂಗ ದೇವಾಲಯಗಳಿಗೂ ಭಕ್ತರು ಭೇಟಿ ನೀಡಿದ್ದರು. ಅಲ್ಲೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ಭಕ್ತರ ಸಂಖ್ಯೆ ಇಳಿಮುಖ:

ಶೃಂಗೇರಿ ಶಾರದಾಂಬೆಯ ದೇಗುಲಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಪ್ರತಿದಿನ ಸಾವಿರಾರು ಮಂದಿ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ, ಸೋಮವಾರ ಈ ಸಂಖ್ಯೆ ತೀರ ಕಡಿಮೆಯಾಗಿತ್ತು. ಚಿಕ್ಕಮಗಳೂರು ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ದೇವಾಲಯ ತೆರೆದ ದಿನದಂದು ಶೇ.50ಕ್ಕಿಂತಲೂ ಕಡಿಮೆ ಇತ್ತು.

ಈ ಕುರಿತು ಮಾತನಾಡಿದ ದೇವಾಲಯ ಅರ್ಚಕ ಕುಮಾರ್‌, ಮುಜರಾಯಿ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಅದರಂತೆ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್‌ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಭಕ್ತರ ಸಂಖ್ಯೆ ಕಡಿಮೆ ಇದೆ, ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಮುಜರಾಯಿ ದೇವಾಲಯಗಳ ಜತೆಗೆ ಆಡಳಿತ ಮಂಡಳಿ ವ್ಯವಸ್ಥೆ ಇರುವ ದೇವಾಲಯಗಳು ತೆರೆದುಕೊಂಡಿದ್ದವು. ಆದರೆ, ಅತಿ ಹೆಚ್ಚು ಭಕ್ತರು ಆಗಮಿಸುವ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಸೋಮವಾರ ತೆರೆದಿರಲಿಲ್ಲ. ದೇವಾಲಯ ತೆರೆದಿರುವುದು ಭಕ್ತರಲ್ಲಿ ಸಂತಸ ಮೂಡಿದೆ. ಆದರೆ, ಭಕ್ತಸಮೂಹ ಕೊರತೆ ಇರುವುದು ಎಲ್ಲೆಡೆ ಕಂಡುಬಂದಿತು.
 

Latest Videos
Follow Us:
Download App:
  • android
  • ios