ಹುಷಾರ್: ಮುಂದಿನ ವಾರ ಇನ್ನಷ್ಟು ಹೆಚ್ಚಲಿದೆ ಬಿಸಿಲು..!
ಹೆಚ್ಚುತ್ತಿದೆ ಬಿಸಿಲ ಝಳ: ಆರೋಗ್ಯದ ಬಗ್ಗೆ ಎಚ್ಚರ| ದಿನದಿಂದ ದಿನಕ್ಕೆ ತಾಪಮಾನ ಏರಿಕೆ| ಈ ವರ್ಷ ವಾಡಿಕೆಗಿಂತ ಹೆಚ್ಚು ತಾಪಮಾನ ನಿರೀಕ್ಷೆ| ಎಚ್ಚರ ತಪ್ಪಿದರೆ ಅನಾರೋಗ್ಯ ಖಂಡಿತ|
ಬೆಂಗಳೂರು(ಮಾ.07): ಕಳೆದ ಒಂದು ವಾರದಿಂದ ಉದ್ಯಾನನಗರಿ ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಬಿಸಿಲಿನಿಂದ ಉಂಟಾಗಬಹುದಾದ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ವಾಡಿಕೆಯಂತೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ. ಹಂತ-ಹಂತವಾಗಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಇದೀಗ ಕಳೆದ ಒಂದು ವಾರದಿಂದ ದಿಢೀರ್ ಏರಿಕೆಯಾಗಿದ್ದು, ಒಂದೇ ವಾರದ ಅಂತರದಲ್ಲಿ ಕನಿಷ್ಠ ತಾಪಮಾನದಿಂದ ಗರಿಷ್ಠ ತಾಪಮಾನದ ಸಮೀಪ ತಲುಪಿದೆ. ಹೀಗಾಗಿ ಜನರಿಗೆ ಬೇಸಿಗೆಯ ಬಿಸಿ ಮುಟ್ಟಿದೆ.
ಕಳೆದ ಒಂದು ವಾರದ ಹಿಂದೆ ಬೆಂಗಳೂರಿನಲ್ಲಿ ಕನಿಷ್ಠ 17-18 ಡಿಗ್ರಿ ಹಾಗೂ ಗರಿಷ್ಠ 25-28 ಡಿಗ್ರಿ ಸೆಲ್ಸಿಯಸ್‌ನಷ್ಟುಉಷ್ಣಾಂಶ ಮಾತ್ರ ದಾಖಲಾಗಿತ್ತು. ಇದೀಗ ಗುರುವಾರ (ಮಾ.4) ಮತ್ತು ಶುಕ್ರವಾರ ಎರಡೂ ದಿನ ಗರಿಷ್ಠ 32 ಡಿಗ್ರಿ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಷಿಯಸ್‌ಗೆ ತಲುಪಿದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 34.1 ರಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ಹೀಗಾಗಿ ಮುಂದಿನ ವಾರದಿಂದ ಬಿಸಿಲಿನ ಝಳ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಚಳಿ ಇಳಿಕೆ, ಬಿಸಿಲು ಏರಿಕೆ: ಕಲಬುರಗಿಯಲ್ಲಿ 38.6 ಡಿಗ್ರಿ!
ಮುಂದಿನ ವಾರದಿಂದ ಹಂತ-ಹಂತವಾಗಿ ತಾಪಮಾನ ಹೆಚ್ಚಾಗಲಿದೆ. ಮೇ ಅಂತ್ಯದ ವೇಳೆಗೆ ಇಳಿಮುಖದತ್ತ ಸಾಗಲಿದೆ. ಈಗಿನ ಸ್ಥಿತಿ ಗಮನಿಸಿದರೆ ಈ ಬಾರಿ ವಾಡಿಕೆಗಿಂತ ಹೆಚ್ಚು ತಾಪಮಾನ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಗ್ಯದ ಬಗ್ಗೆ ಎಚ್ಚರ ವಹಿಸಿ:
ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಮಾನವನ ದೇಹದಲ್ಲಿನ ನೀರಿನÜ ಅಸಮತೋಲನ(ಡಿಹೈಡ್ರೇಷನ್- ನಿರ್ಜಲೀಕರಣ) ಉಂಟಾಗುತ್ತದೆ. ಇದರಿಂದ ತಲೆ ಸುತ್ತುವುದು, ರಕ್ತದೊತ್ತಡ ಕಡಿಮೆಯಾವುಗುವುದು ಸೇರಿದಂತೆ ಹಲವು ಸಮಸ್ಯೆ ಉಂಟಾಗುತ್ತವೆ. ಅದರಲ್ಲೂ ವೃದ್ಧರು, ಮಹಿಳೆ ಹಾಗೂ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಹೀಗಾಗಿ ಬಿಸಿಲಿನಲ್ಲಿ ಓಡಾಟ ನಿಯಂತ್ರಿಸಬೇಕು. ಮುಖ್ಯವಾಗಿ ಹೃದಯಾಘಾತ ಹಾಗೂ ಹೀಟ್ ಸ್ಟೊ್ರೕಕ್‌ಗಳ ಬಗ್ಗೆ ವಿಶೇಷ ಗಮನ ನೀಡಬೇಕು.
ಬೆಳಗ್ಗೆ 11ನಂತರ ಮಧ್ಯಾಹ್ನ 3ಗಂಟೆವರೆಗೆ ಅಧಿಕ ಬಿಸಿಲು ಬೀಳಲಿದ್ದು, ಈ ಸಂದರ್ಭದಲ್ಲಿ ಮನೆ, ಕಚೇರಿಗಳಲ್ಲೇ ಇರುವಂತೆ ದಿನಚರಿ ರೂಢಿಸಿಕೊಳ್ಳಬೇಕು. ಹೊರಾಂಗಣ ಕೆಲಸ ಕಾರ್ಯಗಳನ್ನು ಆದಷ್ಟುಕಡಿಮೆ ಮಾಡಬೇಕು. ಬಿಸಿಲಿನ ಬೇಗೆಗೆ ಬಾಯಾರಿ ಸಿಕ್ಕ ಸಿಕ್ಕ ಕಡೆಗಳಲ್ಲಿ ನೀರು ಕುಡಿಯದೇ ಶುದ್ಧ ನೀರನ್ನೇ ಹೆಚ್ಚೆಚ್ಚು ಕುಡಿಯುವ ಮೂಲಕ ದೇಹದಲ್ಲಿ ನೀರಿನ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅನ್ಸರ್ ಅಹಮದ್ ಹೇಳುತ್ತಾರೆ.
ಹಲವು ಕಾಯಿಲೆಗಳ ಭೀತಿ
ಬೇಸಿಗೆ ಕಾಲದಲ್ಲಿ ಟೈಫಾಯ್ಡ್, ಹೀಟ್ ಸ್ಟೊ್ರೕಕ್, ಸನ್ ಬರ್ನ್, ಚಿಕನ್ ಪಾಕ್ಸ್, ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಬರುವ ಕಾಲರಾ, ಡಯೇರಿಯಾದಂತಹ ಸಮಸ್ಯೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಆಶುದ್ಧ ನೀರು ಬಳಸಿದ ತಿಂಡಿ, ತಿನಿಸು ಹಾಗೂ ಮಜ್ಜಿಗೆ, ಜ್ಯೂಸ್ ಸೇವಿಸುವುದನ್ನು ನಿಲ್ಲಿಸಬೇಕು. ಇಂತಹ ಪದಾರ್ಥ ಸೇವಿಸಿದರೆ ಭೇದಿ, ಹೊಟ್ಟೆಉರಿ, ಡಯೇರಿಯಾದಂತಹ ಸಮಸ್ಯೆಗಳು ಉಂಟಾಗುತ್ತೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಜೊತೆಗೆ ತ್ವಚೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತ್ವಚೆ ಒಣಗುವುದು, ಟ್ಯಾನ್ ಆಗುವುದನ್ನು ತಪ್ಪಿಸಲು ಕಾಳಜಿ ವಹಿಸಬೇಕು ಎಂದಿದ್ದಾರೆ.