ವಿಜಯಪುರದಲ್ಲಿ ತೆಲಂಗಾಣ ಮೂಲದ 20 ಜೀತದಾಳು ರಕ್ಷಣೆ

ಮುಂಗಡ ಪಡೆದು ಜೀತದಾಳುಗಳನ್ನಾಗಿ ಇಟ್ಟುಕೊಂಡಿದ್ದ ಬೆಳಗಾವಿಯ ಆದಿತ್ಯ ಕನಸ್ಟ್ರಕ್ಷನ್‌ ಕಂಪನಿ| ಪ್ರತಿ ತಿಂಗಳು 2 ಸಾವಿರದಂತೆ ಮುಂಗಡ ಹಣದಲ್ಲಿ ಕಡತ ಮಾಡುತ್ತಿದ್ದರು| ಕಾರ್ಮಿಕರಿಗೆ ಗುತ್ತಿಗೆದಾರರು ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ| ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು| ಸಂಸ್ಥೆಯ ವಿರುದ್ದ ಕಾನೂನು ಕ್ರಮ| 

Telangana Based 20 Slaves Protection in Vijayapura

ವಿಜಯಪುರ(ನ.30): ಜಿಲ್ಲೆಯ ಚಡಚಣ ತಾಲೂಕಿನ ಚಡಚಣ ಗ್ರಾಮದ ಏತ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಬೆಳಗಾವಿಯ ಆದಿತ್ಯ ಕನಸ್ಟ್ರಕ್ಷನ್‌ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 20 ಜನ ಜೀತದಾಳುಗಳನ್ನು ರಕ್ಷಿಸಿ ಜೀತದಿಂದ ವಿಮುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ತಿಳಿಸಿದ್ದಾರೆ.

ನ್ಯಾಶನಲ್ ಆದಿವಾಸಿ ಸೋಲಿಡರ್ಟಿ ಕೌನ್ಸಿಲ್ ನ ಕೋಆರ್ಡಿನೇಟರ್‌ ವಾಸುದೇವ ರಾವ್‌ ಅವರು ಚಡಚಣ ಗ್ರಾಮದಲ್ಲಿ ಸುಮಾರು 20 ಜೀತದಾಳು ಇರುವ ಕುರಿತು ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂಡಿ ಉಪವಿಭಾಗಾಧಿಕಾರಿಗಳಿಗೆ ನಿರ್ದೇಶನ ನೀಡಿ, ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಈ ಹಿನ್ನಲೆಯಲ್ಲಿ ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ ಲೋಖಂಡೆ ಅವರು ಚಡಚಣ ತಹಸೀಲ್ದಾರ, ಇಂಡಿ ಕಾರ್ಮಿಕ ನಿರೀಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಚಡಚಣ ಪೊಲೀಸ್‌ ಇನ್ಸ್‌ಪೆಕ್ಟರೊಂದಿಗೆ ಸಂಖ ಗ್ರಾಮದ ರಿ.ಸ.ನಂ. 112/1ರಲ್ಲಿ ಇರುವ ಜೀತದಾಳುಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ ಸಂದರ್ಭದಲ್ಲಿ 13 ಜನ ಗಂಡಸರು 6 ಜನ ಹೆಂಗಸರು ಹಾಗೂ ಓರ್ವ ಬಾಲಕ ಸೇರಿದಂತೆ ಒಟ್ಟು 20 ಜೀತದಾಳು ಇರುವ ಬಗ್ಗೆ ಖಚಿತಪಡಿಸಿಕೊಂಡು, ಎಲ್ಲ ಜೀತದಾಳುಗಳನ್ನು ವಶಕ್ಕೆ ಪಡೆದು ಚಡಚಣ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಎಲ್ಲ ಕಾರ್ಮಿಕರನ್ನು ವಸತಿ ಮತ್ತು ಉಟೋಪಚಾರ ವ್ಯವಸ್ಥೆ ಮಾಡಲಾಯಿತು.

2 ತಿಂಗಳಿಂದ ಜೀತಕ್ಕೆ:

ಕಾರ್ಮಿಕರನ್ನು ವಿಚಾರಿಸಲಾಗಿ, ಕಾರ್ಮಿಕರು ಕಳೆದ 2 ತಿಂಗಳುಗಳಿಂದ ಬೆಳಗಾವಿಯ ಆದಿತ್ಯ ಕನಸ್ಟ್ರಕ್ಷನ್‌ ಕಂಪನಿಯಲ್ಲಿ 10 ಸಾವಿರ ಹಾಗೂ 50 ಸಾವಿರದಂತೆ ಮುಂಗಡವಾಗಿ ಪಡೆದುಕೊಂಡು ಜೀತದಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಪ್ರತಿ ತಿಂಗಳು 2 ಸಾವಿರದಂತೆ ಮುಂಗಡ ಹಣದಲ್ಲಿ ಕಡತ ಮಾಡುತ್ತಿದ್ದರು. ಕಾರ್ಮಿಕರಿಗೆ ಗುತ್ತಿಗೆದಾರರು ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ, ತಮಗೆ ಗುಡಿಸಲುಗಳಲ್ಲಿ ವಾಸ ಮಾಡಲು ಹೇಳಿ ಹೊರಗಡೆ ತಿರುಗಾಡುವುದನ್ನು ನಿರ್ಬಂಧಿಸಿದ್ದರು. ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೆ ಕೆಲಸ ಮಾಡಿಸುತ್ತಿದ್ದರು. ಒಂದು ದಿನ ಕೆಲಸ ಬಿಟ್ಟರೆ ಆ ದಿನದ ಸಂಬಳ ಪಾವತಿ ಮಾಡುತ್ತಿರಲಿಲ್ಲ. ಮತ್ತು ತಮಗೆ ಆರೋಗ್ಯ ಸಮಸ್ಯೆ ಬಂದಾಗಿ ಯಾವುದೇ ಉಪಚಾರ ಕೊಡಿಸದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಂಸ್ಥೆಯ ವಿರುದ್ದ ಕಾನೂನು ಕ್ರಮ:

ಕಾರ್ಮಿಕ ಇಲಾಖೆಯ ಎಲ್ಲ ನಿಯಮಗಳನ್ನು ಪಾಲಿಸದೇ ಇರುವ ಕುರಿತು ಕಾರ್ಮಿಕ ನಿರೀಕ್ಷಕರು ವರದಿ ನೀಡಿದ ಹಿನ್ನಲೆಯಲ್ಲಿ ಬೆಳಗಾವಿಯ ಆದಿತ್ಯ ಕನಸ್ಟ್ರಕ್ಷನ್ ಕಂಪನಿ ಸದರಿ ಉಲ್ಲಂಘನೆಗಳನ್ನು ಸರಿಪಡಿಸಿ ಪಾಲನಾ ವರದಿಯನ್ನು ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡಲಾಗಿದ್ದು, ಒಂದು ವಾರದೊಳಗೆ ಪಾಲನಾ ವರದಿ ಸಲ್ಲಿಸದೇ ಇದ್ದಲ್ಲಿ ಸದರಿ ಸಂಸ್ಥೆಯ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೂ ಈ ಕಾರ್ಮಿಕರನ್ನು ಜೀತ ವಿಮುಕ್ತಿಗೊಳಿಸಿ ಆದೇಶಿಸಲಾಗಿದ್ದು, ಹಾಗೂ ಅವರಿಗೆ ಮುಂದಿನ ಸೌಲಭ್ಯ ಹಾಗೂ ಪುನರವಸತಿ ಕಲ್ಪಿಸುವಂತೆ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios