ಎನ್‌.ಲಕ್ಷ್ಮಣ್‌

ಬೆಂಗಳೂರು [ಆ.28]:  ರಾಜಧಾನಿಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಸಾರ್ವಜನಿಕರು ರಸ್ತೆಯಲ್ಲಿ ಬಡಿದಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು, ರಸ್ತೆಯಲ್ಲಿ ಕೆಸರು ಸಿಡಿದ ಘಟನೆಯನ್ನೇ ದೊಡ್ಡದಾಗಿಸಿ ಸಾಫ್ಟ್‌ವೇರ್‌ ಉದ್ಯೋಗಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾಫ್ಟ್‌ವೇರ್‌ ಉದ್ಯೋಗಿ ಪ್ರವೀಣ್‌ ಕುಮಾತ್‌ (35) ಮತ್ತು ಇವರ ಪತ್ನಿ ಅಂಕಿತಾ (30) ಅವರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಶ್ರೀರಾಂಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಲ್ವರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಶ್ರೀರಾಂಪುರ ಪೊಲೀಸರು ತಿಳಿಸಿದರು.

ರಾಜಸ್ಥಾನ ಮೂಲದ ಪ್ರವೀಣ್‌ ಅವರು ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಶ್ರೀರಾಂಪುರದ ಸಮೀಪದ ಸಾಯಿ ಗಣೇಶ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ಮತ್ತು ಪುತ್ರನ ಜತೆ ಜತೆ ನೆಲೆಸಿದ್ದಾರೆ. ಪ್ರವೀಣ್‌ ಅಂಗವಿಕಲರಾಗಿದ್ದು, ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದಾರೆ. ಇತ್ತೀಚೆಗೆ ಪ್ರವೀಣ್‌ ಪತ್ನಿ ಹಾಗೂ ಪುತ್ರನ ಜತೆ ಸ್ನೇಹಿತರ ಮನೆಗೆ ಹೋಗಿದ್ದರು. ರಾತ್ರಿ 9ರ ಸುಮಾರಿಗೆ ದಂಪತಿ ಕಾರಿನಲ್ಲಿ ಶ್ರೀರಾಂಪುರದಲ್ಲಿನ ಅಪಾರ್ಟ್‌ಮೆಂಟ್‌ಗೆ ವಾಪಸ್‌ ಆಗುತ್ತಿದ್ದರು. ಈ ವೇಳೆ ಪ್ರವೀಣ್‌ ಅವರ ಪತ್ನಿ ಕಾರು ಚಾಲನೆ ಮಾಡುತ್ತಿದ್ದರು. ಸಾಯಿ ಗಣೇಶ ಅಪಾರ್ಟ್‌ಮೆಂಟ್‌ಗೆ ಬರುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಕೆಸರಿನ ನೀರು ಒಬ್ಬ ಅಪರಿಚಿತ ವ್ಯಕ್ತಿಯ ಮೇಲೆ ಬಿದ್ದಿದೆ.

ಕೆಸರು ಬಿದ್ದ ವ್ಯಕ್ತಿ ತನ್ನ ಇತರ ಮೂವರು ಸ್ನೇಹಿತರನ್ನು ಕರೆಸಿಕೊಂಡು ಅಂಕಿತಾ ಅವರನ್ನು ನಿಂದಿಸಿದ್ದರು. ಕಾರಿನಿಂದ ಕೆಳಗೆ ಇಳಿದ ಪ್ರವೀಣ್‌ ಆರೋಪಿಗಳನ್ನು ಪ್ರಶ್ನಿಸಿದ್ದು, ಈ ವೇಳೆ ದುಷ್ಕರ್ಮಿಗಳು ಪ್ರವೀಣ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಪತಿಯನ್ನು ಬಿಡಿಸಲು ಮುಂದಾದ ಅಂಕಿತಾ ಅವರ ಮೇಲೂ ದುಷ್ಕರ್ಮಿಗಳು ಮನಬಂದಂತೆ ಥಳಿಸಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಎಳು ನೀರು ವ್ಯಾಪಾರಿ ಬಳಿ ಮಚ್ಚು ಕಸಿದು ಪ್ರವೀಣ್‌ ಕಾಲಿಗೆ ಹೊಡೆದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸ್ಥಳದಲ್ಲಿ ಸಾರ್ವಜನಿಕರು ಸೇರಿದ್ದು, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರವೀಣ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಮಚ್ಚಿನೇಟಿಗೆ ಒಳಗಾದ ಸಾಫ್ಟ್‌ವೇರ್‌ ಉದ್ಯೋಗಿ ಪ್ರವೀಣ್‌ ಅವರು ಅಂಗವಿಕಲರಾಗಿದ್ದರಿಂದ ಪ್ರವೀಣ್‌ ಅವರಿಗೆ ಕಾರು ಓಡಿಸಲು ಆಗುತ್ತಿರಲಿಲ್ಲ. ಹೊರಗೆ ಹೋದ ವೇಳೆ ಅಂಕಿತಾ ಅವರೇ ಕಾರು ಚಾಲನೆ ಮಾಡುತ್ತಿದ್ದರು. ಘಟನೆ ನಡೆದ ದಿನ ಮಳೆ ಬರುತ್ತಿದ್ದ ಕಾರಣ ಗುಂಡಿಯಲ್ಲಿ ನೀರು ನಿಂತಿತ್ತು. ಗುಂಡಿಗೆ ಕಾರು ಇಳಿದು ಕೆಸರಿನ ನೀರು ರಸ್ತೆಯಲ್ಲಿದ್ದ ವ್ಯಕ್ತಿ ಮೇಲೆ ಎರಚಿದೆ. ಘಟನೆ ಬಗ್ಗೆ ದಂಪತಿ ದುಷ್ಕರ್ಮಿಗಳ ಬಳಿ ಕ್ಷಮೆ ಕೇಳಿದ್ದು, ಆದರೂ ಬಿಡದೆ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ಸ್ಥಳೀಯ ಯುವಕರೇ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ನಾವು ಉದ್ದೇಶ ಪೂರ್ವಕವಾಗಿ ಕೆಸರು ಎರಚುವಂತೆ ಕಾರು ಚಲಾಯಿಸಿಲ್ಲ. ಮಳೆ ಬಂದು ರಸ್ತೆಯಲ್ಲಿ ನಿಂತು ನಿಂತಿತ್ತು. ಹೋಗುವ ಭರದಲ್ಲಿ ಕೆಸರು ಎರಚಿತು. ಅಷ್ಟಕ್ಕೇ ನಮ್ಮ ಮೇಲೆ ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ನಡೆಸಿದರು. ನಮ್ಮ ಮೇಲೆ ಹಲ್ಲೆ ನಡೆಯುವಾಗ ಸಾರ್ವಜನಿಕರು ನೋಡುತ್ತಾ ನಿಂತಿದ್ದರು. ಯಾರೊಬ್ಬರು ನಮ್ಮ ಸಹಾಯಕ್ಕೆ ಧಾವಿಸಲಿಲ್ಲ. ಅಲ್ಲದೆ, ಸ್ಥಳದಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸುವ ಪ್ರಯತ್ನ ಮಾಡಲಿಲ್ಲ. ನಮ್ಮ ಚೀರಾಟ ನೋಡಿ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತರು.

-ಪ್ರವೀಣ್‌ ಕುಮಾತ್‌, ಹಲ್ಲೆಗೊಳಗಾದ ಟೆಕಿ.