Asianet Suvarna News Asianet Suvarna News

ಅಶ್ವತ್ಥ್ ನಾರಾಯಣ ಮಹತ್ವದ ಘೋಷಣೆ: ಮೈಸೂರಿಗೆ ಡಬಲ್‌ ದಮಾಕ

* `ದಿ ಬಿಗ್ ಟೆಕ್ ಶೋ@ಮೈಸೂರು’ನಲ್ಲಿ ಸಚಿವ ಅಶ್ವತ್ಥನಾರಾಯಣ
* ಮೈಸೂರಿನ ಮುಕ್ತ ವಿ.ವಿ. ಕಟ್ಟಡದಲ್ಲಿ ಟೆಕ್ ಪಾರ್ಕ್
* ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ
* ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ  ಘೋಷಣೆ

tech park Build In KSOU Mysuru Says Minister Ashwath narayan rbj
Author
Bengaluru, First Published Oct 25, 2021, 5:18 PM IST

ಮೈಸೂರು, (ಅ.25): ನಗರದ ವಿಮಾನ ನಿಲ್ದಾಣದ ಸಮೀಪ ಇರುವ ಕರ್ನಾಕಟ ಮುಕ್ತ ವಿಶ್ವವಿದ್ಯಾಲಯಕ್ಕೆ ಸೇರಿದ ಕಟ್ಟಡದಲ್ಲಿ ಟೆಕ್ ಪಾರ್ಕ್ (Tech Park) ಸ್ಥಾಪನೆ ಮಾಡಲಾಗುವುದು. ಹಾಗೆಯೇ ಮೈಸೂರು ವಿಮಾನ ನಿಲ್ದಾಣ (Mysuru Airport) ರನ್ ವೇ ವಿಸ್ತರಣೆಗೆ ತಕ್ಷಣವೇ ಅಗತ್ಯವಿರುವ ಭೂಮಿಯನ್ನು ಒದಗಿಸಲಾಗುತ್ತದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಹೇಳಿದರು. 

ಸೋಮವಾರ ಮೈಸೂರಿನಲ್ಲಿ (Mysuru) ಐಟಿಬಿಟಿ ಇಲಾಖೆ ಆಯೋಜಿಸಿದ್ದ `ದಿ ಬಿಗ್ ಟೆಕ್ ಷೋ@ಮೈಸೂರು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೆಕ್ ಪಾರ್ಕ್ ಗೆ ಅಗತ್ಯವಿರುವ 1 ಲಕ್ಷ ಚದರಡಿ ಜಾಗವನ್ನು ಪೂರೈಸಲು ಮುಕ್ತ ವಿವಿಯೊಂದಿಗೆ ಮಾತನಾಡಲಾಗಿದೆ. ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕ ಸ್ಪಂದನ ಸಿಕ್ಕಿದೆ. ಜತೆಗೆ ಇಲ್ಲಿರುವ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸುಸಜ್ಜಿತ ‘ಮೈಸೂರು ಅನುಭವ ಕೇಂದ್ರ’ವನ್ನು (ಮೈಸೂರು ಎಕ್ಸ್ಫಿರಿಯನ್ಸ್ ಸೆಂಟರ್) ತೆರೆಯಲಾಗುವುದು’ ಎಂದರು. 

ಮೈಸೂರಿನಲ್ಲಿ ಬಿಗ್ ಟೆಕ್ ಶೋ.. ಹೊಸ ಆಲೋಚನೆಗಳ ಭಂಡಾರ!

ಈ ‘ಅನುಭವ ಕೇಂದ್ರ’ವು ಜನರಿಗೆ ಮೈಸೂರಿನ ಸಾಮಾನ್ಯ ಪರಿಚಯ ಮಾಡಿಕೊಡುವುದಷ್ಟೇ ಅಲ್ಲದೆ, ತಂತ್ರಜ್ಞಾನ, ಆವಿಷ್ಕಾರ ಹಾಗೂ ಇಲ್ಲಿನ ಉದ್ಯಮ ವಾತಾವರಣದ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದೆ ಎಂದು ತಿಳಿಸಿದರು. 

ಈ ನಗರದಲ್ಲಿ ಸದ್ಯಕ್ಕೆ 100 ನವೋದ್ಯಮಗಳಿವೆ. ಇದರ ಜೊತೆಗೆ ಜಾಗತಿಕ ಮಟ್ಟದ 15 ಕಂಪನಿಗಳಾದರೂ ಇಲ್ಲಿ ತಮ್ಮ ಜಿಸಿಸಿ (ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್) ಕೇಂದ್ರಗಳನ್ನು ತೆಗೆಯುವಂತಾಗಬೇಕು ಎಂಬ ಗುರಿ ಇದೆ ಎಂದರು. ಇತ್ತೀಚೆಗೆ ದುಬೈ ಎಕ್ಸ್ ಪೋಗೆ ಹೋಗಿದ್ದಾಗ ಅಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡ ಅವರು, “ರಾಜ್ಯದಲ್ಲಿ  ಲಕ್ಷಾಂತರ ಕೋಟಿ ರೂಪಾಯಿಗಳ ಮೊತ್ತದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಸಿದ್ಧವಿದ್ದಾರೆ. ಅದಕ್ಕೆ ತಕ್ಕಂತೆ ನಾವು ಇಲ್ಲಿನ ವ್ಯವಸ್ಥೆಯನ್ನು ಸದೃಢಗೊಳಿಸಲು ಬೆಂಗಳೂರು ಹೊರತುಪಡಿಸಿ ಬೇರೆಡೆಗಳಲ್ಲೂ ವ್ಯವಸ್ಥಿತವಾಗಿ ಅಭಿವೃದ್ಧಿಗೊಳ್ಳಬೇಕಿದೆ’ ಎಂದು ತಿಳಿಸಿದರು.

ಬೆಂಗಳೂರಿನ ಆಚೆಗೂ ಉದ್ದಿಮೆಗಳು ಬೇರೂರಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ. ಇದಕ್ಕೆ ಅನುಗುಣವಾಗಿ `ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮ, 600 ಕೋಟಿ ವೆಚ್ಚದೊಂದಿಗೆ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ, ಹೊಸ ಕೈಗಾರಿಕಾ ನೀತಿ ಮತ್ತು ಫ್ಯಾಬ್ ನೀತಿಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು. 

ಈಗ ನಮ್ಮ ನವೋದ್ಯಮಗಳಿಗೆ ವಿದೇಶೀ ಬಂಡವಾಳ ಯಥೇಚ್ಛವಾಗಿ ಬರುತ್ತಿದ್ದು, ಇದು ಶೇ 90ರಷ್ಟಿದೆ. ಸ್ಥಳೀಯರ ಹೂಡಿಕೆ ಶೇ.10ರಷ್ಟು ಮಾತ್ರವಿದೆ. ಒಳಗಿನವರು ಕೂಡ ಬಂಡವಾಳ ಹೂಡಿ, ಉದ್ಯಮಶೀಲತೆ ಬೆಳೆಸಿ ಅವಕಾಶಗಳ ಲಾಭ ಪಡೆಯಬೇಕು. ಉದ್ದಿಮೆಗಳ ಅಗತ್ಯಕ್ಕೆ ತಕ್ಕಂತೆ ನಮ್ಮ ಎಂಜಿನಿಯರಿಂಗ್, ಪದವಿ, ಐಟಿಐ ಮತ್ತು ಪಾಲಿಟೆಕ್ನಿಕ್ ಶಿಕ್ಷಣಗಳನ್ನು ಸಮಗ್ರವಾಗಿ ಸುಧಾರಿಸಲಾಗಿದೆ ಎಂದು ಸಚಿವರು ಹೇಳಿದರು. 

ಕಾರ್ಯಕ್ರಮದಲ್ಲಿ ವರ್ಚುಯಲ್ ಆಗಿ ಮಾತನಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, `2025ರ ಹೊತ್ತಿಗೆ ದೇಶದ ಡಿಜಿಟಲ್ ಆರ್ಥಿಕತೆಯನ್ನು 1 ಟ್ರಿಲಿಯನ್ ಮಟ್ಟಕ್ಕೆ ಏರಿಸುವುದು ಪ್ರಧಾನಿ ಮೋದಿಯವರ ಗುರಿಯಾಗಿದೆ. ಇದು ಸಾಧ್ಯವಾಗಬೇಕೆಂದರೆ, ಕರ್ನಾಟಕವು ಒಂದೆರಡು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಮೊತ್ತದ ಡಿಜಿಟಲ್ ವಹಿವಾಟನ್ನು ನಡೆಸುವಂತಾಗಬೇಕು’ ಎಂದು ಆಶಿಸಿದರು. 

ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಸುನಂದಾ ಫಾಲಾಕ್ಷ, ಕೆಡಿಇಎಂ ಮುಖ್ಯಸ್ಥ ಬಿ.ವಿ.ನಾಯ್ಡ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಇಲಾಖೆ ನಿರ್ದೇಶಕಿ ಡಾ.ಮೀನಾ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು. ನ್ಯಾಸ್ ಕಾಂ ಅಧ್ಯಕ್ಷೆ ದೇಬ್ ಜಾನಿ ಘೋಷ್ ವರ್ಚುವಲ್ ನಲ್ಲಿ ಭಾಗವಹಿಸಿದ್ದರು. 

ಒಡಂಬಡಿಕೆಗಳ ವಿನಿಮಯ 
ಬಿಗ್ ಟೆಕ್ ಶೋ@ಮೈಸೂರು ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಕಾರವು ಮೈಸೂರು ರಾಜವಂಶಸ್ಥರ ಮಾಲೀಕತ್ವದ ಭೇರುಂಡ ಪ್ರತಿಷ್ಠಾನ, ಐಸ್ಯಾಕ್ ಮತ್ತು ವಿಎಂ ವೇರ್ ಜತೆ ಮಾಡಿಕೊಂಡಿರುವ ಒಡಂಬಡಿಕೆಗಳನ್ನು ಹಸ್ತಾಂತರಿಸಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮೈಸೂರಿನ ಗಣ್ಯ ಉದ್ಯಮಿಗಳನ್ನು ಗೌರವಿಸಲಾಯಿತು. 

ಈ ಪೈಕಿ ಭೇರುಂಡ ಪ್ರತಿಷ್ಠಾನವು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಜತೆ ಮೈಸೂರನ್ನು ಮುಂಚೂಣಿಗೆ ತರಲು ಶ್ರಮಿಸಲಿದ್ದು, ಐಸ್ಯಾಕ್ ಕಂಪನಿಯು ರಾಜ್ಯದ ಪ್ರಮುಖ ಕಡೆಗಳಲ್ಲಿ ಸೈಬರ್ ರೇಂಜುಗಳನ್ನು ಸ್ಥಾಪಿಸಲಿದೆ. ಉಳಿದಂತೆ ವಿಎಂ ವೇರ್ ಕಂಪನಿಯು 1,500 ಮಹಿಳೆಯರಿಗೆ ತಮ್ಮ ತಂತ್ರಜ್ಞಾನಾಧಾರಿತ ವೃತ್ತಿಗಳಿಗೆ ಮರಳಲು ಅಗತ್ಯವಾದ ಕೌಶಲ್ಯಗಳನ್ನು ಒದಗಿಸಲಿದೆ. 

ತಂತ್ರಜ್ಞಾನ ರೈತರ ಬಗ್ಗೆ ಕಳಕಳಿಯ ಮಾತು 
`ರೈತರೇ ದೇಶದ ಬೆನ್ನೆಲುಬು. ಈಗಲೂ ಶೇ.60ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಅವರು ನೆಮ್ಮದಿಯಿಂದ ಇರಬೇಕೆಂದೇ ಪ್ರಧಾನಿ ಮೋದಿ ಹೊಸ ಕೃಷಿ ಕಾಯ್ದೆಗಳನ್ನು ತಂದಿದ್ದಾರೆ. ರೈತರ ಸಬಲೀಕರಣ ಸಾಧ್ಯವಾಗುವುದು ಕೂಡ ತಂತ್ರಜ್ಞಾನದಿಂದಲೇ. ದೇಶದ ಕೃಷಿ ತಂತ್ರಜ್ಞಾನ ಕಂಪನಿಗಳಲ್ಲಿ ಶೇ.50ರಷ್ಟು ಬೆಂಗಳೂರಿನಲ್ಲೇ ಇವೆ,’ ಎಂದು ಅವರು ನುಡಿದರು.

Follow Us:
Download App:
  • android
  • ios