ಮುಂದುವರಿದ ದಾಳಿ: 16 ಟನ್‌ ನಕಲಿ ಬಿತ್ತನೆ ಬೀಜ ವಶಕ್ಕೆ

ಹಾವೇರಿ ಜಿಲ್ಲೆಯ ಬ್ಯಾಡಗಿಯ ಕೋಲ್ಡ್‌ ಸ್ಟೋರೆಜ್‌ಗಳ ಮೇಲೆ ಅಧಿಕಾರಿಗಳ ದಾಳಿ| ಪಟ್ಟಣದ  ನವಲೆ ಕೋಲ್ಡ್‌ ಸ್ಟೋರೆಜ್‌ ಮತ್ತು ಸಿದ್ಧಗಂಗಾ ಕೋಲ್ಡ್‌ ಸ್ಟೋರೆಜ್‌ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 16 ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಬಿತ್ತನೆ ಬೀಜ ವಶ| ಆರೋಪಿಗಳ ಪತ್ತೆಗೆ ತೀವ್ರ ಶೋಧ|

Team of Joint Directors of the Department of Agriculture Raid on Godown in Byadagi in Haveri District

ಬ್ಯಾಡಗಿ(ಏ.26):  ಅನಧಿಕೃತ ಬಿತ್ತನೆ ಬೀಜ ಪತ್ತೆಗಾಗಿ ಬೆನ್ನು ಬಿದ್ದಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕರ ತಂಡವು ಕೋಲ್ಡ್‌ ಸ್ಟೋರೆಜ್‌ಗಳ ಮೇಲೆ ದಾಳಿಯನ್ನು ಶನಿವಾರವೂ ಮುಂದುವರೆಸಿದ್ದು ಪಟ್ಟಣದ ಮಲ್ಲೂರ ರಸ್ತೆಯಲ್ಲಿರುವ ನವಲೆ ಕೋಲ್ಡ್‌ ಸ್ಟೋರೆಜ್‌ ಮತ್ತು ಸಿದ್ಧಗಂಗಾ ಕೋಲ್ಡ್‌ ಸ್ಟೋರೆಜ್‌ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 16 ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದೆ.

ನಿನ್ನೆಯಷ್ಟೇ ಎರಡು ಕೋಲ್ಡ್‌ ಸ್ಟೋರೇಜ್‌ಗಳ ಮೇಲೆ ದಾಳಿ ನಡೆಸಿದ್ದ ಡಾ. ಬಿ. ಮಂಜುನಾಥ ನೇತೃತ್ವದ ಅಧಿಕಾರಿಗಳ ತಂಡವು ಸುಮಾರು 3.5 ಕೋಟಿ ಮೌಲ್ಯದ ಅನಧೀಕೃತ ಬೀಜಗಳನ್ನು ವಶಪಡಿಸಿಕೊಂಡಿತ್ತು ಶನಿವಾರ ದಾಳಿಯನ್ನು ಮುಂದುವರಿಸಿದ ತಂಡವು 16 ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದೆ.

ಕೃತಕ ಅಭಾವ ಸೃಷ್ಟಿಸುವ ಮಾಫಿಯಾ: 3.5 ಕೋಟಿ ಮೌಲ್ಯದ ಬಿತ್ತನೆ ಬೀಜ ವಶ

ಶುಕ್ರವಾರದ ದಾಳಿಯಿಂದ ಬೆಚ್ಚಿ ಬಿದ್ದಿದ್ದ ಅಕ್ರಮ ಬೀಜ ದಾಸ್ತಾನುಗಾರರು ತಾವು ಸಂಗ್ರಹಿಸಿಟ್ಟಿದ್ದ ಬಿತ್ತನೆ ಬೀಜಗಳನ್ನು ಸದ್ದಿಲ್ಲದೇ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಆದರೆ ಎಲ್ಲಾ ಕೋಲ್ಡ್‌ ಸ್ಟೋರೇಜ್‌ಗಳ ಚಲನವಲನದ ಮೇಲೆ ನಿಗಾಯಿಟ್ಟಿದ್ದ ಅಧಿಕಾರಿಗಳ ತಂಡವು ಬೀಜ ಹೊತ್ತೊಯ್ಯುತ್ತಿದ್ದ ಲಾರಿಯೊಂದರ ಚಾಲಕನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡವು ಇಂದು ಎರಡೂ ಕೋಲ್ಡ್‌ ಸ್ಟೋರೆಜ್‌ಗಳಲ್ಲಿದ್ದ ಬಿತ್ತನೆ ಬೀಜವನ್ನು ವಶಕ್ಕೆ ಪಡೆದುಕೊಂಡಿದೆ.

ಬಿಗಿಯಾದ ಬೀಜ ನೀತಿ ಇಲ್ಲದೇ ಇರುವುದರಿಂದ, ಅನಧೀಕೃತ ಬೀಜ ಮಾರಾಟಗಾರರು ಜಿಲ್ಲೆಯಲ್ಲಿ ನಾಯಿ ಕೊಡೆಯಂತೆ ಹುಟ್ಟಿಕೊಂಡಿದ್ದಾರೆ, ಇವರಿಗೆ ಯವುದೇ ಲಂಗುಲಗಾಮುಗಳಿಲ್ಲದೇ ದುಪ್ಪಟ್ಟು ಹಣಕ್ಕೆ ಬೀಜ ಮಾರಾಟ ನಡೆಸುತ್ತಿದ್ದು ಜಿಲ್ಲೆಯಲ್ಲಿ ದೊಡ್ಡ ಬೀಜ ಮಾಫಿಯಾ ಸೃಷ್ಟಿಯಾಗಿತ್ತು ಸರ್ಕಾರಕ್ಕೆ ಸವಾಲಾಗಿದ್ದ ಇಂತಹ ಮಾಫಿಯಾವನ್ನು ಇದೀಗ ಕೃಷಿ ಇಲಾಖೆ ಧ್ವಂಸಗೊಳಿಸಿರುವ ಮಾತು ರೈತರಲ್ಲಿ ನಿಟ್ಟುಸಿರುವ ಬಿಡುವಂತೆ ಮಾಡಿದೆ.

ಬ್ಯಾಡಗಿ ಸುತ್ತಮುತ್ತಲ ಪ್ರದೇಶದಲ್ಲಿ ಒಟ್ಟು ನಾಲ್ಕೂ ಕೋಲ್ಡ್‌ ಸ್ಟೋರೇಜ್‌ಗಳನ್ನ ವಶಕ್ಕೆ ಪಡೆದು ಕೊಳ್ಳಲಾಗಿದ್ದು, ಅಕ್ರಮವಾಗಿ ಸಂಗ್ರಹಸಿಟ್ಟಿದ್ದ ಸುಮಾರು 10 ಸಾವಿರ ಚೀಲಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ, ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆದಿದೆ.

ತಹಸೀಲ್ದಾರ ಶರಣಮ್ಮ, ಸಿಪಿಐ ಭಾಗ್ಯವತಿ, ಕೃಷಿ ಇಲಾಖೆ ಉಪನಿರ್ದೇಶಕಿ ಜಿ.ಎಸ್‌. ಸ್ಫೂರ್ತಿ ಜಾಗೃತ ಕೋಶದ ಪ್ರಾಣೇಶ, ಸ್ಥಳೀಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೌಡಪ್ಪಳವರ, ಸಹಾಯಕ ಕೃಷಿ ಅಧಿಕಾರಿಗಳಾದ ಬಸವರಾಜ ಮರಗಣ್ಣರ ಆರ್‌. ಮಂಜುನಾಥ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios