ಉಡುಪಿ (ನ.01):  ನಗರದ ನಿಟ್ಟೂರಿನ ಅನುದಾನಿತ ಪ್ರೌಢಶಾಲೆಯಲ್ಲಿ 32 ವರ್ಷ ಶಿಕ್ಷಕರಾಗಿ, 5 ವರ್ಷ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ, ಶನಿವಾರ ನಿವೃತ್ತರಾದ ಮುರಳಿ ಕಡೆಕಾರ್‌ ಅವರು ಸ್ವಂತ ವೆಚ್ಚದಲ್ಲಿ ಬಡ ವಿದ್ಯಾರ್ಥಿನಿಯೊಬ್ಬರಿಗೆ ಮನೆ ಕಟ್ಟಿಸಿಕೊಟ್ಟು ಮಾದರಿಯಾಗಿದ್ದಾರೆ.

ನಯನಾ ಎಂಬ 9ನೇ ತರಗತಿ ವಿದ್ಯಾರ್ಥಿನಿಗೆ ಕಕ್ಕುಂಜೆ ಎಂಬಲ್ಲಿ ಮುರಳಿ ಕಡೆಕಾರ್‌ ಅವರು ಮನೆ ನಿರ್ಮಿಸಿಕೊಟ್ಟಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವ 7 ಮಂದಿ ಸದಸ್ಯರಿರುವ ನಯನಾ ಅವರ ಮಣ್ಣಿನ ಗೋಡೆಯ ಮನೆಯೊಳಗೆ ಹುತ್ತ ಬೆಳೆದು ಬೀಳುವ ಹಂತಕ್ಕೆ ಬಂದಿತ್ತು. ಅದನ್ನು ಕೆಡವಿ ಅದೇ ಜಾಗದಲ್ಲಿ, ತಮಗೆ ನಿವೃತ್ತಿಯಾಗುವಾಗ ಸಿಕ್ಕಿದ ಮೊತ್ತದಲ್ಲಿ ಸುಮಾರು 4-5 ಲಕ್ಷ ರು. ವೆಚ್ಚದಲ್ಲಿ ಕಡೆಕಾರ್‌ ಈ ಮನೆ ನಿರ್ಮಿಸಿಕೊಟ್ಟಿದ್ದಾರೆ.

ಮಲ್ಪೆ ಮೀನುಗಾರರ ಬಲೆಗೆ ಬಿದ್ದ 750 ಕೆ.ಜಿ ತೂಕದ ಮೀನು, ಇದರ ತೂಕ ಅಬ್ಬಬ್ಬಾ...!

ಪೇಜಾವರ ಶ್ರೀಗಳ ವಿಶೇಷ ಅಭಿಮಾನಿಯಾಗಿದ್ದ ಕಡೆಕಾರ್‌ ಈ ಮನೆಗೆ ಶ್ರೀಗಳ ನೆನಪಿನಲ್ಲಿ ವಿಶ್ವೇಶ ಎಂದು ಹೆಸರಿಟ್ಟಿದ್ದಾರೆ. ಶನಿವಾರ ಈ ಮನೆಯನ್ನು ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ದೀಪ ಬೆಳಗಿಸಿ ಹಸ್ತಾಂತರಿಸಿದರು.

ಕಡೆಕಾರ್‌ ಅವರು ಈಗಾಗಲೇ ತಮ್ಮ ಶಾಲೆಯಲ್ಲಿ ಓದುವ, ಮನೆಯಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದ 150ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಮನೆಗೆ ಹಳೆವಿದ್ಯಾರ್ಥಿಗಳು-ದಾನಿಗಳ ಸಹಯಾದಿಂದ ವಿದ್ಯುತ್‌ - ಸೌರ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. 68ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಗೆ ಉಚಿತ ಅಡುಗೆ ಗ್ಯಾಸ್‌ - ಕುಕ್ಕರ್‌ ಒದಗಿಸಿದ್ದಾರೆ.

30 ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳ ಸಂಚಯಿಕಾ ಬ್ಯಾಂಕ್‌ ನಡೆಸುತ್ತಿರುವ ಕಡೆಕಾರ್‌, ಈ ಬ್ಯಾಂಕಿನ ಲಾಭಾಂಶದಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಊಟ ಒದಗಿಸುತಿದ್ದಾರೆ.