ಉಡುಪಿ/ಕಾರವಾರ (ಮೇ.19):  ರಾಜ್ಯದ ಕರಾವಳಿ ಭಾಗಗಳಲ್ಲಿ ತೌಕ್ಟೆ ಚಂಡಮಾರುತದ ಅಬ್ಬರ ಕಡಿಮೆಯಾಗಿದ್ದರೂ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಗುಡುಗು ಸಹಿತ ಸಾಧಾರಣ ಮಳೆಯಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರಗಳಲ್ಲಿ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದ್ದು ಆಗಾಗ ಜಿಟಿಜಿಟಿ ಮಳೆಯೂ ಸುರಿದಿದೆ. ಇದರೊಂದಿಗೆ ಆಗಾಗ ಗಾಳಿಯೂ ಬೀಸುತ್ತಿದೆ. ದಕ್ಷಿ ಕನ್ನಡ ಜಿಲ್ಲೆಯಲ್ಲಿ ಹಗಲು ಬಿಟ್ಟುಬಿಟ್ಟು ಮಳೆ ಸುರಿದಿದೆ. ಉಡುಪಿಯಲ್ಲಿ ಮಾತ್ರ ಬಹುತೇಕ ಬಿಸಿಲಿನ ವಾತಾವರಣ ಕಂಡು ಬಂತು. ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮತ್ತು ಧಾರವಾಡ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ. ರಾಜಧಾನಿ ಬೆಂಗಳೂರಲ್ಲೂ ಕೆಲಕಾಲ ಗುಡುಗು, ಮಿಂಚಿನೊಂದಿಗೆ ಸಾಧಾರಣ ಮಳೆ ಸುರಿದಿದೆ.

ಚಂಡಮಾರುತದಿಂದ ಕರ್ನಾಟಕ ಪಾರು: ಭಾರೀ ಹಾನಿ ಮಾಡದೇ ಸಾಗಿದ ತೌಕ್ಟೆ!

ಹಾನಿ ವೀಕ್ಷಿಸಿದ ಅಶೋಕ: ದಕ್ಷಿಣ ಕನ್ನಡ ಮೂಲ್ಕಿಯಲ್ಲಿ ಸೋಮವಾರ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದ್ದ ಕಂದಾಯ ಸಚಿವ ಆರ್‌.ಅಶೋಕ ಮಂಗಳವಾರದಂದು ಉಡುಪಿ ಜಿಲ್ಲೆಯ ಮರವಂತೆ, ಉತ್ತರ ಕನ್ನಡದ ಹೆಬಳೆಯ ಹಿರೇಕೇರಿ, ಹೆರ್ತಾರ ಕಡಲಕೊರೆತ ಪ್ರದೇಶಗಳು ಮತ್ತು ಮಾವಿಕುರ್ವೆ ಬಂದರುಗಳಿಗೆ ಭೇಟಿ ನೀಡಿ ಹಾನಿ ಪ್ರಮಾಣವನ್ನು ಪರಿಶೀಲಿಸಿದರು. 

ಮರವಂತೆಯಲ್ಲಿ ಅವರು ಕೇವಲ 5 ನಿಮಿಷವಷ್ಟೇ ಪರಿಶೀಲಿಸಿ ತೆರಳಿದ್ದಕ್ಕೆ ಸ್ಥಳೀಯ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮೀನುಗಾರರ ಜ್ವಲಂತ ಸಮಸ್ಯೆಗಳ ಕುರಿತು ಸಚಿವರು ಪರಿಶೀಲನೆ ನಡೆಸದೆ ತರಾತುರಿಯಲ್ಲಿ ವಾಪಾಸಾಗಿದ್ದಾರೆ. ನಮ್ಮ ಬೇಡಿಕೆಗಳನ್ನು ಆಲಿಸಿದೆ ನಮ್ಮ ಜೊತೆ ಚರ್ಚಿಸದೆ ಹಾಗೆಯೇ ವಾಪಾಸಾಗಿದ್ದಾರೆ ಎಂದು ಆರೋಪಿಸಿದ್ದಾರೆ.