ಮಾರ್ಕೊಪೋಲೋ ಟಾಟಾ ಮೋಟಾರ್ ಬಿಕ್ಕಟ್ಟು, ಬಹುತೇಕ ಇತ್ಯರ್ಥ
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಇಳಿದಿದ್ದ ಟಾಟಾ ಮಾರ್ಕೊಪೊಲೋ ಕಾರ್ಮಿಕ ಸಮಸ್ಯೆ ಸಚಿವ ಆರ್ ನಿರಾಣಿ ಸಮ್ಮುಖದಲ್ಲಿ ಮಾತುಕತೆ ಮೂಲಕ ಬಹುತೇಕ ಇತ್ಯರ್ಥವಾಗಿರುವುದು ಸಕಾರಾತ್ಮಕ ಬೆಳವಣಿಗೆ
ಬೆಂಗಳೂರು, (ಜು.18) ತೀವ್ರ ಕಗ್ಗಂಟ್ಟಾಗಿ ಪರಿಣಮಿಸಿದ್ದ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಮೋಟಾರ್ ಕಂಪನಿಯ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳು ಸಮ್ಮತಿಸಿವೆ. ಹಿಂದಿನಿಂದಲೂ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತೀವ್ರವಾಗಿ ಹೋರಾಟ ನಡೆಸಿದ್ದರು. ಈ ಹೋರಾಟವು ಹಲವರ ಪರೋಕ್ಷ ಬೆಂಬಲದಿಂದ ರಾಜಕೀಯ ರೂಪವೂ ಪಡೆದುಕೊಂಡಿತ್ತು.
ಸೋಮವಾರ ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್.ನಿರಾಣಿ(Murugesh R.Nirಕೈani) ಅವರ ಕಚೇರಿ ಕೊಠಡಿಯಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್(Shivaram Hebbar), ಜನಪ್ರತಿನಿಗಳು, ಟಾಟಾ ಮೋಟಾರ್(TATA Marcopolo Motors) ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಯ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕೆಂಬ ಸಚಿವ ಮುರುಗೇಶ್ ನಿರಾಣಿ ಅವರ ಪ್ರಸ್ತಾವನೆಯನ್ನು ಸಭೆಯಲ್ಲಿದ್ದ ಎಲ್ಲರೂ ಸರ್ವಸಮ್ಮತದಿಂದ ಒಪ್ಪಿದರು.
ಕೈಗಾರಿಕೆಗಳು ಉಳಿಯಬೇಕು, ಜೊತೆಗೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಹಿತ ಕಾಯುವುದು ಸರ್ಕಾರದ ಉದ್ದೇಶ ಇದರಲ್ಲಿ ಯಾರಿಗೂ ಕೂಡ ಪ್ರತಿಷ್ಠೆ ಬೇಡ, ಎದುರಾಗಿರುವ ಸಮಸ್ಯೆಯನ್ನು ಒಟ್ಟಾಗಿ ಕುಳಿತು ಪರಿಹರಿಸಿಕೊಳ್ಳಬೇಕು ಎಂದು ನಿರಾಣಿ ಅವರು ಸಲಹೆ ಮಾಡಿದರು.
ಟಾಟಾ ಕಂಪೆನಿ ದೇಶದ ಆಸ್ತಿ. ಇಲ್ಲಿ ಲಾಭ, ನಷ್ಟಕ್ಕಿಂತ ಕಾರ್ಮಿಕರ ಹಿತ ಹಾಗೂ ಆಡಳಿತ ಮಂಡಳಿ ಎರಡೂ ಮುಖ್ಯ. ಪದೇ ಪದೇ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ, ಯಾರೂ ಕೂಡ ಪ್ರತಿಷ್ಠೆಗೆ ಹೋಗದೆ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಅಕ್ರಮ ಮರಳು ದಂಧೆ; ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ!
ಇದಕ್ಕೆ ಸಹಮತ ವ್ಯಕ್ತಪಡಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು, ನಮಗೆ ಆಡಳಿತ ಮಂಡಳಿ ಬೇರೆ ಅಲ್ಲ , ಕಾರ್ಮಿಕರು ಬೇರೆ ಅಲ್ಲ ಇವರಿಬ್ಬರು ಒಂದೇ ನಾಣ್ಯದ ಎರಡು ಮುಖಗಳು. ಅದರಲ್ಲೂ ಟಾಟಾ ಕಂಪೆನಿಯೆಂದರೆ ಅದು ದೇಶದ ಆಸ್ತಿ. ಯಾರೂ ಕೂಡ ಇದನ್ನು ವೈಯಕ್ತಿಕ ಮಟ್ಟಕ್ಕೆ ತೆಗೆದುಕೊಳ್ಳಬಾರದು ಎಂದು ಆಡಳಿತ ಮಂಡಳಿ ಮತ್ತು ಕಾರ್ಮಿಕರಿಗೆ ಮನವಿ ಮಾಡಿದರು. ಸಭೆಯಲ್ಲಿ ಶಾಸಕರಾದ ಅಮೃತ್ ದೇಸಾಯಿ, ಅರವಿಂದ್ ಬೆಲ್ಲದ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷಾ, ಕಾರ್ಯದರ್ಶಿ ಮನೋಜ್ ಜೈನ್ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ಏರೋಸ್ಪೆಸ್ ಇಂಡಸ್ಟ್ರಿಗೆ ಪ್ರೋತ್ಸಾಹ: ಮುರುಗೇಶ್ ನಿರಾಣಿ
ಪ್ರತಿವರ್ಷ ೨೦ ಸಾವಿರ ಬಸ್‌ಗಳ ಉತ್ಪಾದನೆಯ ಗುರಿಯೊಂದಿಗೆ 2008 ರಲ್ಲಿ ಧಾರವಾಡ-ಬೇಲೂರು ಸಮೀಪದಲ್ಲಿ ಆರಂಭವಾಗಿದ್ದ ಟಾಟಾ ಮಾರ್ಕ್ ಪೊಲೊ ಕಂಪನಿಯು ಸಾವಿರಾರು ಜನರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿತ್ತು. ಅಂದು ಈಗಿನ ಹಾಲಿ ಸಚಿವ ಮುರುಗೇಶ್ ನಿರಾಣಿ ಅವರೇ ಅಂದು ಕಂಪನಿಯ ಉತ್ಪಾದನಾ ಘಟಕಗಳ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಟಾಟಾ ಮಾರ್ಕ್ ಪೋಲೊ ಕಂಪನಿಯಿಂದ ಅಲ್ಲಿನ ಜನರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗಿದೆ. ವಿಪರ್ಯಾಸವೆಂದರೆ ಅಲ್ಲಿನ ಕಾರ್ಮಿಕರು ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಿಂದಿನಿಂದಲೂ ಹೋರಾಟ ಮಾಡುತ್ತಲೇ ಇದ್ದಾರೆ. ಇದೀಗ ಸಚಿವ ಮುರುಗೇಶ್ ನಿರಾಣಿ ಅವರ ನೇತೃತ್ವದಲ್ಲೇ ಸಂಧಾನ ಸಭೆ ಯಶಸ್ವಿಗೊಂಡಿರುವುದು ಸಕಾರಾತ್ಮಕ ಬೆಳವಣಿಗೆ.