ಕೊರೋನಾ ಸೋಂಕಿನ ಚಿಕಿತ್ಸೆಗೆ ಗಡಿ ಬಂದ್‌ನಿಂದಾಗಿ ಕರ್ನಾಟಕಕ್ಕೆ ಬರಲಾಗದೆ, ಅತ್ತ ಕಾಸರಗೋಡಿನಲ್ಲೂ ಸೌಲಭ್ಯ ಇಲ್ಲದೆ ತ್ರಿಶಂಕು ಸ್ಥಿತಿಗೆ ಒಳಗಾಗಿದ್ದ ಗಡಿನಾಡ ಕನ್ನಡಿಗರು ಸೇರಿದಂತೆ ಕಾಸರಗೋಡು ನಿವಾಸಿಗಳು ಈಗ ನಿರಾಳ.
ಮಂಗಳೂರು(ಜು.24): ಕೊರೋನಾ ಸೋಂಕಿನ ಚಿಕಿತ್ಸೆಗೆ ಗಡಿ ಬಂದ್‌ನಿಂದಾಗಿ ಕರ್ನಾಟಕಕ್ಕೆ ಬರಲಾಗದೆ, ಅತ್ತ ಕಾಸರಗೋಡಿನಲ್ಲೂ ಸೌಲಭ್ಯ ಇಲ್ಲದೆ ತ್ರಿಶಂಕು ಸ್ಥಿತಿಗೆ ಒಳಗಾಗಿದ್ದ ಗಡಿನಾಡ ಕನ್ನಡಿಗರು ಸೇರಿದಂತೆ ಕಾಸರಗೋಡು ನಿವಾಸಿಗಳು ಈಗ ನಿರಾಳ.
ಕಾಸರಗೋಡಿನ ಚಟ್ಟಂಚಾಲ್‌ನ ತೆಕ್ಕಿಲ್ ಎಂಬಲ್ಲಿ ಟಾಟಾ ಸಮೂಹ ಸಂಸ್ಥೆಯ ಕೋವಿಡ್ ಆಸ್ಪತ್ರೆ ನಿರ್ಮಾಣ ಅಂತಿಮ ಹಂತದಲ್ಲಿದೆ. ಆಸ್ಪತ್ರೆ ಕಾಮಗಾರಿಯನ್ನು ಏ.28ರಂದು ಆರಂಭಿಸಲಾಗಿದ್ದು, ಇದೇ ತಿಂಗಳಾಂತ್ಯಕ್ಕೆ ಕೇರಳ ಸರ್ಕಾರಕ್ಕೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ 60 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿರಲಿದೆ.
ಒಟ್ಟು 128 ಯುನಿಟ್‌ಗಳ ಈ ಆಸ್ಪತ್ರೆಯಲ್ಲಿ 540 ಬೆಡ್‌ಗಳಿವೆ. ಒಂದೊಂದು ಯುನಿಟ್‌ನಲ್ಲಿ ತಲಾ ಐದು ಬೆಡ್‌ಗಳನ್ನು ಹಾಕಲಾಗಿದೆ. ಸುಸಜ್ಜಿತ ಶೌಚಾಲಯವನ್ನೂ ಅಳವಡಿಸಲಾಗಿದೆ. ಐಸೋಲೇಷನ್ ವಾರ್ಡ್, ಕೋವಿಡ್ ಕೇರ್ ವಾರ್ಡ್ ಸೇರಿದಂತೆ ವೈದ್ಯರು, ದಾದಿಯರು, ಸ್ವಾಗತ ಕೊಠಡಿ, ಕ್ಯಾಂಟಿನ್ ನಿರ್ಮಿಸಲಾಗಿದೆ. ಈ ಆಸ್ಪತ್ರೆಯನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಒಂದರಿಂದ ಮೂರನೇ ವಲಯದಲ್ಲಿ ಕ್ವಾರಂಟೈನ್ ಬೆಡ್, ಎರಡನೇ ವಲಯದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾರತದ 50ಕ್ಕೂ ಅಧಿಕ ಕಾರ್ಮಿಕರು, ಯಂತ್ರೋಪಕರಣ ಬಳಸಿ ಇದನ್ನು ನಿರ್ಮಿಸಿದ್ದಾರೆ. ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿರುವ ಟಾಟಾ ಉದ್ದಿಮೆಯ ಪ್ಲಾಂಟ್‌ಗಳಿಂದ ಯುನಿಟ್‌ಗಳನ್ನು ಸಿದ್ಧಪಡಿಸಿ ಇಲ್ಲಿ ಜೋಡಿಸಲಾಗಿದೆ.
ಈ ಕೋವಿಡ್ ಆಸ್ಪತ್ರೆಗೆ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಕೇರಳ ಸರ್ಕಾರವೇ ನೇಮಿಸಲಿದೆ. ಟಾಟಾ ಕಂಪನಿಯೇ ಸ್ವತಃ ಹಣ ವ್ಯಯಿಸಿ ಇದನ್ನು ನಿರ್ಮಿಸಿದೆ. ಯುದ್ಧ ಕಾಲದಲ್ಲಿ ಟಾಟಾ ಗ್ರೂಪ್ ಸೈನಿಕರ ಬಳಕೆಗೆ ಇದೇ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸಿತ್ತು.
ಕೇರಳದ ಏಕೈಕ ಕೋವಿಡ್ ಆಸ್ಪತ್ರೆ
ಕೇರಳದ ಮೊಟ್ಟಮೊದಲ ಕೊರೋನಾ ಕೇಸ್ ಪತ್ತೆಯಾಗಿದ್ದು ಕಾಸರಗೋಡಿನಲ್ಲಿ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಗಳಿಲ್ಲ. ಕಾಸರಗೋಡು ಜಿಲ್ಲಾಸ್ಪತ್ರೆ, ಕಾಞಂಗಾಡ್, ಉದಯಗಿರಿ ಹಾಗೂ ಪೆರ್ಲದ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ, ಸಣ್ಣಪುಟ್ಟಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕಾಸರಗೋಡಿನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಏರುಗತಿಯಲ್ಲಿದೆ. ಆದರೆ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಇಲ್ಲ. ಈ ಕೊರತೆಯನ್ನು ಕೋವಿಡ್ ಆಸ್ಪತ್ರೆ ನೀಗಿಸಲಿದೆ. ಪ್ರಸಕ್ತ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 971 ತಲುಪಿದೆ. ಬುಧವಾರ ವರೆಗೆ ಮೂರು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಗಡಿನಾಡಿಗರಿಗೆ ಕೋವಿಡ್ ಚಿಕಿತ್ಸೆ ಸುಲಭ
ಗಡಿನಾಡ ನಿವಾಸಿಗಳಿಗೆ ಕರ್ನಾಟಕದ ಮಂಗಳೂರಿನ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬಂದುಹೋಗಲು ಗಡಿ ಬಂದ್ ಅಡ್ಡಿಯಾಗಿತ್ತು. ಕೋವಿಡ್‌ಗೂ ಮೊದಲೇ ಕಾಸರಗೋಡು ಜಿಲ್ಲೆಯಿಂದ ದಿನಂಪ್ರತಿ ಕನಿಷ್ಠ 500 ಮಂದಿ ರೋಗಿಗಳು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದರು. ಈಗ ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಸೇರಿದಂತೆ 17ಕ್ಕೂ ಅಧಿಕ ಗಡಿ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಗಡಿ ಪ್ರದೇಶದ ಕೋವಿಡ್ ರೋಗಿಗಳು ಸೂಕ್ತ ಆಸ್ಪತ್ರೆ ಸಿಗದೆ ಬವಣೆ ಪಡುತ್ತಿದ್ದರು. ಪ್ರಸಕ್ತ ಗಡಿನಾಡಿನಿಂದ ಕೋವಿಡ್ ರಹಿತ ಚಿಕಿತ್ಸೆಗೆ ಮಾತ್ರ ಮಂಗಳೂರಿಗೆ ಬರುತ್ತಿದ್ದಾರೆ.
ಕೋವಿಡ್ ಆಸ್ಪತ್ರೆಯ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಜುಲೈ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಂಡು ಸರ್ಕಾರಕ್ಕೆ ಹಸ್ತಾಂತರವಾಗುವ ನಿರೀಕ್ಷೆ ಇದೆ. ಬಳಿಕ ಸರ್ಕಾರದ ನಿರ್ದೇಶನದಂತೆ ಕೋವಿಡ್ ಸೋಂಕಿತರಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ತಿಳಿಸಿದ್ದಾರೆ.
