ಕಳೆದ ನಾಲ್ಕು ವರ್ಷಗಳಿಂದ ಸಿರಿಗೆರೆಯ ತರಳಬಾಳು ಬೃಹನ್ಮಠ ಹಾಗೂ ಸಾಣೇಹಳ್ಳಿ ಶಾಖಾ ಮಠದ ಸ್ವಾಮೀಜಿಗಳ ನಡುವೆ ಇದ್ದ ವೈಮನಸ್ಸು ಶಮನಗೊಳ್ಳುವ ಲಕ್ಷಣಗಳು ಕಾಣಿಸಿವೆ. ಸಾಣೇಹಳ್ಳಿ ಶ್ರೀಗಳ ಭೇಟಿಯ ಯತ್ನಕ್ಕೆ ಪ್ರತಿಯಾಗಿ, ಮಾತುಕತೆಗೆ ಸಿದ್ಧವೆಂದು ತರಳಬಾಳು ಮಠವು ಪತ್ರದ ಮೂಲಕ ತಿಳಿಸಿದೆ.

ಸಿರಿಗೆರೆ: ನಾಡಿನ ಪ್ರಮುಖ ಮಠಗಳ ಸಾಲಿನ ಮಂಚೂಣಿ ಯಲ್ಲಿರುವ ತರಳಬಾಳು ಜಗದ್ಗುರು ಬೃಹನ್ಮಠ ಹಾಗೂ ಸಾಣೇಹಳ್ಳಿ ಶಾಖಾ ಮಠದ ಸ್ವಾಮೀಜಿಗಳ ಮಧ್ಯೆ ಉಂಟಾಗಿರುವ ವೈಮನಸ್ಸುಗಳು ಅಂತ್ಯ ಕಾಣುವ ದಿನಗಳು ಸನಿಹಕ್ಕೆ ಬಂದಂತಿವೆ. ಇದು ಎರಡೂ ಮಠಗಳ ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈರ್ವರು ಸ್ವಾಮೀಜಿಗಳ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪಂಡಿತಾರಾಧ್ಯ ಶ್ರೀಗಳು ಕಳೆದ ನಾಲ್ಕು ವರ್ಷಗಳ ಕಾಲ ಸಿರಿಗೆರೆಯ ಮಠಕ್ಕೆ ಭೇಟಿ ನೀಡಿರಲಿಲ್ಲ. ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ತರಳ ಬಾಳು ಶ್ರೀಗಳನ್ನು ಭೇಟಿ ಮಾಡಿ ಮಠದ ಇತ್ತೀಚಿನ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿ ಮಾತನಾಡುವುದೂ ಸೇರಿದಂತೆ ಅವರನ್ನು ಸಾಣೇಹಳ್ಳಿ ಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಶಿವಕುಮಾರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಲು ಸಿರಿಗೆರೆಗೆ ಮೊನ್ನೆ ಬುಧವಾರ ಆಗಮಿಸಿದ್ದರು. ಆದರೆ ತರಳಬಾಳು ಶ್ರೀಗಳು ಕಾರ್ಯಗೌರವಗಳ ನಿಮಿತ್ತ ಅಂದು ಬೆಂಗಳೂರು ಮಹಾನಗರದಲ್ಲಿ ಇದ್ದುದರಿಂದ ಈರ್ವರು ಶ್ರೀಗಳ ಭೇಟಿ ಸಾಧ್ಯವಾಗಿ ರಲಿಲ್ಲ.

ಮಠದ ವೆಬ್‌ಸೈಟಿನಲ್ಲಿ ಪತ್ರ ಪ್ರಕಟ

ಪಂಡಿತಾರಾಧ್ಯ ಶ್ರೀಗಳು ಮಠಕ್ಕೆ ಭೇಟಿ ನೀಡಿರುವ ವಿಷಯ ತಿಳಿಯುತ್ತಲೇ ಅವರನ್ನು ಗೌರವಾದರಗಳಿಂದ ಬರಮಾಡಿಕೊಂಡು ಅವರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಬೇಕೆಂದು ಮಠದ ಆಡಳಿತಕ್ಕೆ ತರಳಬಾಳು ಶ್ರೀಗಳು ಸೂಚನೆ ನೀಡಿದ್ದರು. ಈ ಬೇಡಿಕೆಯ ಮಾರನೇ ದಿನವೇ ಮಠದ ಕಾರ್ಯದರ್ಶಿ ಸಾಧು ಸದ್ದರ್ಮ ಸಂಘದ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದು, ಎರಡೂ ಮಠಗಳ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ವಿವರಿಸಿದ್ದರು. ಆ ಪತ್ರವನ್ನು ಸಹ ಮಠದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.

ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿ ಇಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರಿಗೆ ಬರೆದಿರುವ ಪತ್ರವೊಂದನ್ನು ಮಠದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. ವಿವಾದಗಳಿಗೆ ಕಾರಣವಾದ ಸಂಗತಿಗಳನ್ನು ಪತ್ರದಲ್ಲಿ ವಿವರಿಸಲಾಗಿದೆ. ಹಿರಿಯ ಗುರುಗಳ ಕಾಲದಿಂದಲೂ ಹಾಲು-ಜೇನಿನಂತೆ ಇದ್ದ ಸಂಬಂಧದಲ್ಲಿ ಹುಳಿ ಹಿಂಡುತ್ತಿರುವ ಕೆಲವು ದುಷ್ಟರ ಸಂಪರ್ಕದಲ್ಲಿ ಪಂಡಿತಾರಾಧ್ಯ ಶ್ರೀಗಳು ಇದ್ದಾರೆ. ಅವರನ್ನು ಬದಿಗಿರಿಸಿ ಬಂದಲ್ಲಿ ಮಾತುಕತೆಗೆ ಸಿದ್ಧವಿರುವ ಸಂದೇಶವನ್ನು ಅವರಿಗೆ ನೀಡಲಾಗಿದೆ. ಜೊತೆಗೆ ಅವರು ಮಾತುಕತೆಯ ಸಂದರ್ಭದಲ್ಲಿ ಚರ್ಚಿಸಬೇಕಾಗಿರುವ ಸಮಸ್ಯೆಗಳ ಕ್ರೋಡೀಕೃತ ಪಟ್ಟಿಯೊಂದನ್ನು ಲಿಖಿತವಾಗಿ ಮುಂಚಿತವಾಗಿಯೇ ಸಲ್ಲಿಸಬೇಕು. ವಿವಾದಗಳು ಹುಟ್ಟಲು ಕಾರಣಕರ್ತರಾದ ದುಷ್ಟರನ್ನು ದೂರವಿರಿಸಿ ಒಬ್ಬರೇ ಆಗಮಿಸಬೇಕು. ಇದಕ್ಕೆ ಸಮ್ಮತಿ ಇದ್ದರೆ ಚರ್ಚೆಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಪತ್ರದಲ್ಲಿ ಏನಿದೆ?

ಇದೀಗ ಮಠದ ಕಾರ್ಯದರ್ಶಿ ಸಾಣೆಹಳ್ಳಿಯು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರಿಗೆ ಪತ್ರ ಬರೆದು, ಈವರೆಗೆ ನಡೆದಿರುವ ಹಲವು ಗೊಂದಲಗಳು, ಸಾಣೆಹಳ್ಳಿ ಶ್ರೀಗಳ ಚಟುವಟಿಕೆಗಳು, ಅವರ ಹೇಳಿಕೆಗಳಿಂದ ಉಂಟಾಗಿರುವ ವಿವಾದಗಳು, ಅವು ಮಠದ ನಿಲುವುಗಳ ಮೇಲೆ ಬೀರಿರುವ ದೀರ್ಘವಾಗಿ ಪರಿಣಾಮಗಳ ವಿವರಿಸಿದ್ದಾರೆ. ಶತಮಾನಗಳಿಂದ ಪರಂಪರಾಗತವಾಗಿ ಮಠ ಮತ್ತು ಗುರುಗಳ ಮೇಲೆ ಶ್ರದ್ಧಾಭಕ್ತಿ ಇರುವ ಭಕ್ತರು, ಮಠದೊಂದಿಗೆ ವ್ಯಾವಹಾರಿಕ ಸಂಬಂಧವುಳ್ಳವರು ಹಾಗೂ ತಮ್ಮ ಕೆಲಸ ಗಿಟ್ಟಿಸಿಕೊಳ್ಳಲು ರಾಮನಿಗೂ ಜೈ, ರಾವಣನಿಗೂ ಜೈ ಎನ್ನುವ, ನಿಸ್ವಾರ್ಥಿಗಳು, ಸ್ವಾರ್ಥಿಗಳು ಹಾಗೂ ವಂದಿಮಾಗದರಾದ ಮೂರು ವರ್ಗದ ಜನರು ಸಮಾಜದಲ್ಲಿದ್ದಾರೆ ಇಂದು ಪತ್ರದಲ್ಲಿ ಬಣ್ಣಿಸಿದ್ದಾರೆ.

ತಪ್ಪುಗಳನ್ನು ತಿದ್ದಿಕೊಳ್ಳುವ ಮನಸ್ಥಿತಿ ನಮಗಿದೆ

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರ ಮೂಲಕ ನಾಟಕಕೋತ್ಸವಕ್ಕೆ ಆಹ್ವಾನಿಸುವ ಯತ್ನ, ಶ್ರೀಗಳ ಇತ್ತೀಚಿನ ವಿದೇಶ ಪ್ರವಾಸ, ಕೃಷಿಕರ ಕುರಿತು ಶ್ರೀಗಳ ನಿಲುವಿಗೆ ಪ್ರತಿರೋಧ ತೋರಿದ ಘಟನೆ, ಬೆಂಗಳೂರಿನ ಕಾರ್ಯಕ್ರಮಗಳ ವಿಸ್ತ್ರತ ಮಾಹಿತಿಯನ್ನು ಪತ್ರದಲ್ಲಿ ಹಂಚಿಕೊಳ್ಳಲಾಗಿದೆ. ನಮ್ಮ ತಪ್ಪುಗಳು ಏನೇ ಇದ್ದರೂ ತಿಳಿ ಹೇಳುವ ನೈತಿಕತೆ ನಮ್ಮ ಗುರುಗಳಿಗೆ ಇದೆ. ಆ ತಪ್ಪುಗಳನ್ನು ತಿದ್ದಿಕೊಳ್ಳುವಂತಹ ಮನಸ್ಥಿತಿಯೂ ನಮಗೆ ಇದೆ ಎಂದು ಹೇಳುವ ಪಂಡಿತಾರಾಧ್ಯ ಶ್ರೀಗಳು ಅವುಗಳನ್ನು ಕಾರ್ಯರೂಪಕ್ಕೆ ತರಲು ವಿಫಲರಾಗಿದ್ದಾರೆ. ಕೃಷಿಕರ ವಿಚಾರವಾಗಿ ತರಳಬಾಳು ಶ್ರೀಗಳು ನೀಡಿದ್ದ ಹೇಳಿಕೆಯೊಂದಕ್ಕೆ ವ್ಯತಿರಿಕ್ತವಾಗಿ ಪಂಡಿತಾರಾಧ್ಯ ಶ್ರೀಗಳು ಪ್ರತಿಕ್ರಿಯಿಸಿದ್ದರು ಎಂಬುದನ್ನು ಪತ್ರದಲ್ಲಿ ನೆನಪಿಸಲಾಗಿದೆ.

ನಿಗದಿತ ದಿನಾಂಕದಂದು ಮಾತುಕತೆಗೆ ಬನ್ನಿ

ತರಳಬಾಳು ಸಂಸ್ಥೆಯ ಶಾಲಾ ಕಾಲೇಜುಗಳು, ಪ್ರಸಾದ ನಿಲಯಗಳನನ್ನು ನಿರ್ವಹಿಸಲು ವಾರ್ಷಿಕ ಹಲವಾರು ಕೋಟಿ ರೂ.ಗಳ ವೆಚ್ಚವಾಗುತ್ತಿದೆ. ಸಂಪನ್ಮೂಲಕಗಳ ಸಂಗ್ರಹ ಮತ್ತು ನಿರ್ವಹಣೆಯ ಕಡೆ ಚಿಂತಿಸುವ ಕೆಲಸವೂ ಆಗಲಿಲ್ಲ, ಇತ್ತೀಚೆಗೆ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಹೀಗಿರುವಾಗ ಮಠದ ವಿರೋಧಿಗಳನ್ನು ದೂರವಿಟ್ಟು, ಚರ್ಚಿಸಬೇಕಾದ ವಿಚಾರಗಳನ್ನು ಲಿಖಿತವಾಗಿ ನೀಡಿ, ನಿಗದಿತ ದಿನಾಂಕದಂದು ಮಾತುಕತೆಗೆ ಬನ್ನಿ ಎಂಬ ಸಂದೇಶವೊಂದನ್ನು ಸಾಣೆಹಳ್ಳಿ ಮಠದ ಅಂಗಳಕ್ಕೆ ತಲುಪಿಸಲಾಗಿದೆ.

ಪಂಡಿತಾರಾಧ್ಯ ಶ್ರೀಗಳು ತೆಗೆದುಕೊಳ್ಳುವ ನಿರ್ಧಾರಗಳು ಈ ವಿವಾದವನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ. ರಾಷ್ಟ್ರೀಯ ನಾಟಕೋತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಪಂಡಿತಾರಾಧ್ಯ ಶ್ರೀಗಳು ಪ್ರತಿಕ್ರಿಯಿಸಲು ಲಭ್ಯವಾಗಲಿಲ್ಲ.