ತಿರಸ್ಕೃತಗೊಂಡಿದ್ದ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಇದೀಗ ಮತ್ತೆ ಊರ್ಜಿತಗೊಂಡಿದೆ. ಊರ್ಜಿತಕ್ಕೆ ಹೈ ಕೋರ್ಟ್ ಆದೇಶ ನೀಡಿದೆ.

 ಶ್ರೀರಂಗಪಟ್ಟಣ (ಸೆ.27): ತಿರಸ್ಕೃತಗೊಂಡಿದ್ದ ಜೆಡಿಎಸ್‌ನ 8 ಉಮೇದುವಾರಿಕೆಗಳನ್ನು ಹೈಕೋರ್ಟ್‌ ಆದೇಶದಂತೆ ಮಾನ್ಯ ಮಾಡುವ ಮೂಲಕ ಪಟ್ಟಣದ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿನ ಗದ್ದಲಕ್ಕೆ ತೆರೆ ಬಿದ್ದಿದೆ.

ಟಿಎಪಿಸಿಎಂಎಸ್‌ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಬಿ ತರಗತಿಂದ 35 ಮಂದಿ ಉಮೇದುವಾರಿಕೆ ಸಲ್ಲಿಸಿದ್ದರು. ಸೆ.24ರಂದು ಅರ್ಜಿಗಳ ಪರಿಶೀಲನಾ ವೇಳೆ 12 ಉಮೇದುವಾರಿಕೆಗಳಿಗೆ ಮಾತ್ರ ಮಾನ್ಯತೆ ನೀಡಿ ಉಳಿದವುಗಳನ್ನು ಚುನಾವಣಾಧಿಕಾರಿ ಎನ್.ಎಲ್.ರವಿ ತಿರಸ್ಕೃತಗೊಳಿಸಿದ್ದರು.

ಈ ಸಂಬಂಧ ಅದಾಗಲೇ ನ್ಯಾಯಲಯದ ಮೆಟ್ಟಿಲೇರಿದ್ದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನದ ಹಕ್ಕನ್ನು ಪಡೆಯಲು ನ್ಯಾಯಲಯದ ಆದೇಶದ ಪ್ರತಿಯನ್ನು ಪಡೆದು ಬಂದಿದ್ದರು. ಆದರೆ, ನಿಗದಿತ ಅರ್ಜಿ ಪರಿಶೀಲನಾ ವೇಳೆಗೆ ನ್ಯಾಯಾಲಯದ ಪ್ರತಿ ದೊರೆಯದ ಕಾರಣ ತಿರಸ್ಕೃತಗೊಂಡಿದ್ದ ಉಮೇದುವಾರಿಕೆಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಚುನಾವಣಾಧಿಕಾರಿ ಖಡಕ್‌ ಆಗಿ ತಿಳಿಸಿದ್ದರು. ಅಧಿಕಾರಿಯ ಈ ವರ್ತನೆಯನ್ನು ಖಂಡಿಸಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ ಅಭ್ಯರ್ಥಿಗಳು ನ್ಯಾಯಾಲಯದಿಂದ ಚುನಾವಣಾ ಸ್ಪರ್ಧೆ ಹಾಗೂ ಮತದಾನಕ್ಕೆ ಗ್ರೀನ್‌ ಸಿಗ್ನಲ್ ಪಡೆದು ಅಧಿಕಾರಿಗೆ ತಲುಪಿಸಿ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇನ್ನೂ 10 ವರ್ಷ ಕಾಂಗ್ರೆಸ್ಸನ್ನು ವಿರೋಧ ಪಕ್ಷದಲ್ಲಿ ಕೂರಿಸ್ತೇವೆ: ಯಡಿಯೂರಪ್ಪ

ಬಳಿಕ ಸಹಕಾರಿ ಸಂಘಗಳ ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಚುನಾವಣಾಧಿಕಾರಿ ರವಿ ನ್ಯಾಯಾಲಯದ ಆದೇಶವನ್ನು ಅಂಗೀಕರಿಸಿ ಸ್ಪರ್ಧೆ ಹಾಗೂ ಮತದಾನಕ್ಕೆ ಅವಕಾಶ ನೀಡಿದ್ದಾರೆ. ಮಾತಿನ ಚಕಮುಖಿ ವೇಳೆ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್‌, ನಗರಘಟಕ ಅಧ್ಯಕ್ಷ ಎಂ.ಸುರೇಶ್‌, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ವೆಂಕಟೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬೆಳಗೊಳ ಸ್ವಾಮಿಗೌಡ, ರಾಮಕೃಷ್ಣ, ಪುರಸಭಾ ಸದಸ್ಯರಾದ ಎಂ.ನಂದೀಶ್‌, ಕೃಷ್ಣಪ್ಪ, ಎಸ್‌.ಪ್ರಕಾಶ್‌, ರವಿ, ಮಾಜಿ ಸದಸ್ಯರಾದ ಸಾಯಿಕುಮಾರ್‌, ವೆಂಕಟೇಶ್‌, ಮುಂಖಡರಾದ ನೆಲಮನೆ ದಯಾನಂದ್‌, ಅರಕೆರೆ ನಾಗೇಂದ್ರ, ಕಿರಣ್, ಜಯ ಕುಮಾರ್‌ ಇದ್ದರು.