Asianet Suvarna News Asianet Suvarna News

ಪಾರದರ್ಶಕ ಚುನಾವಣೆ ನಡೆಯೋದು ಅನುಮಾನ : ಜೆಡಿಎಸ್ ಶಾಸಕ

ಈ ಬಾರಿ ಪಾರದರ್ಶಕ ಚುನಾವಣೆ ನಡೆಯೋದು ಅನುಮಾನ. ಅಕ್ರಮವಾಗಿ ಗುರುತಿನ ಚೀಟಿ ಹಂಚಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಆರೋಪಿಸಿದ್ದಾರೆ.

TAPCMS Election ID Card Distributes i illegally Says JDS Leader Suresh Gowda snr
Author
Bengaluru, First Published Sep 30, 2020, 11:12 AM IST

ನಾಗಮಂಗಲ (ಸೆ.30):  ಮತದಾನದ ಹಕ್ಕು ಇಲ್ಲದವರಿಗೂ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಈ ಬಾರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಪಾರದರ್ಶಕವಾಗಿ ನಡೆಯುವುದು ಅನುಮಾನವಾಗಿದೆ ಎಂದು ಶಾಸಕ ಸುರೇಶ್‌ ಗೌಡ ಆರೋಪಿಸಿದರು.

ಪಟ್ಟಣದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.30ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನದ ಹಕ್ಕು ಇಲ್ಲದವರಿಗೂ ಗುರುತಿನ ಚೀಟಿ ಕೊಡುತ್ತಿದ್ದಾರೆ. ಮತದಾನದ ಹಕ್ಕು ಕಳೆದುಕೊಂಡಿರುವ ಸದಸ್ಯರಿಗೆ ಸಂಸ್ಥೆ ಕಾರ್ಯದರ್ಶಿ ಆತುರವಾಗಿ ಗುರುತಿನ ಚೀಟಿ ವಿತರಿಸುವ ಅಗತ್ಯತೆ ಏನಿತ್ತು ಎಂದು ಪ್ರಶ್ನಿಸಿದರು.

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ ...

ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಉಮೇದುವಾರಿಕೆ ಸ್ವೀಕರಿಸಲಾಗಿತ್ತು. ಆದರೆ, ನಮ್ಮ ಪಕ್ಷದ ಬೆಂಬಲಿಗರು ಇದನ್ನು ಪ್ರಶ್ನಿಸಿದಾಗ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಈ ಕುರಿತು ಸಂಸ್ಥೆಯ ಕಾರ್ಯದರ್ಶಿಯ ಮೇಲೆ ಕ್ರಮ ಕೈಗೊಳ್ಳುವಂತೆ ರಿಟರ್ನಿಂಗ ಅಧಿಕಾರಿಗೆ ದೂರು ನೀಡಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಚುನಾವಣೆಯನ್ನು ಅಕ್ರಮವಾಗಿ ನಡೆಸುವುದೇ ಇದರ ಉದ್ದೇಶವಾಗಿದೆ. ಇವೆಲ್ಲವನ್ನು ನೋಡಿಕೊಂಡು ನಾವು ಕೈಕಟ್ಟಿಕುಳಿತುಕೊಳ್ಳಲು ಸಾಧ್ಯವಿಲ್ಲ. ಸೆ.30ರಂದು ನಡೆಯುವ ಚುನಾವಣೆಯ ವೇಳೆ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ತಾಲೂಕು ಮತ್ತು ಜಿಲ್ಲಾಡಳಿತವೇ ನೇರ ಜವಾಬ್ದಾರಿಯಾಗುತ್ತದೆ ಎಂದು ಎಚ್ಚರಿಸಿದರು.

ಜೆಡಿಎಸ್‌ ಕಾರ್ಯಕರ್ತರಿಂದ ಪ್ರತಿಭಟನೆ:  ಚುನಾವಣೆಗೆ ಮುನ್ನಾದಿನ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಕಾರ್ಯದರ್ಶಿ ಮೋಹನ್‌ ರಾಜ್‌ ಗುರುತಿನ ಚೀಟಿ ವಿತರಿಸುತ್ತಿರುವುದನ್ನು ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ಮತ್ತು ಕೆಲ ಷೇರುದಾರರು ಟಿಎಪಿಸಿಎಂಎಸ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಗುರುತಿನ ಚೀಟಿ ಏತಕ್ಕಾಗಿ ವಿತರಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇನ್ನೂ ಕೆಲವರು ನಮ್ಮ ಮತದಾನದ ಹಕ್ಕನ್ನು ಕಸಿದುಕೊಂಡಿದ್ದೀರಿ. ನಮಗೆ ಮತದಾನದ ಹಕ್ಕನ್ನು ನೀಡಿ ಅಥವಾ ನಮ್ಮ ಷೇರನ್ನು ವಾಪಸ್‌ ಕೊಡಿ ಎಂದು ಕೂಗಾಡಿದರು. ಈ ವೇಳೆ ಜಿಪಂ ಮಾಜಿ ಸದಸ್ಯ ಡಿ.ಟಿ.ಶ್ರೀನಿವಾಸಯ್ಯ, ನಿತೀಶ್‌ ಕುಮಾರ್‌ , ಬಸವೇಗೌಡ ಸೇರಿದಂತೆ ಹಲವರು ಇದ್ದರು.

ಮತದಾನದ ಹಕ್ಕು ಕಳೆದುಕೊಂಡ 3692 ಮಂದಿ ಷೇರುದಾರರು ಮತದಾನದ ಹಕ್ಕು ನೀಡಬೇಕೆಂದು ಕೋರಿ ರಾಜ್ಯ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದರು. ಇದರಲ್ಲಿ 1752 ಮಂದಿಗೆ ಮತಚಲಾಯಿಸಲು ಹೈಕೋರ್ಟ್‌ ಅವಕಾಶ ನೀಡಿದೆ ಎಂದು ತಿಳಿದುಬಂದಿದೆ. ಟಿಎಪಿಸಿಎಂಎಸ್‌ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಮತದಾನದ ಹಕ್ಕು ಹೊಂದಿರುವ ಷೇರುದಾರಿಗೆ ಮಾತ್ರ ಮತ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುವುದು. ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲ.

-ಕುಂಞ ಅಹಮ್ಮದ್‌, ತಹಸೀಲ್ದಾರ್‌ ಹಾಗೂ ಟಿಎಪಿಸಿಎಂಎಸ್‌ ಚುನಾವಣಾಧಿಕಾರಿ

Follow Us:
Download App:
  • android
  • ios