ಹಿಂದ್ ಟ್ರೇಡರ್ಸ್ನಲ್ಲಿ ಸಚಿವ ಈಶ್ವರಪ್ಪ ಸಂಬಂಧಿಕರಾದ ಪುಟ್ಟಸ್ವಾಮಿಗೌಡ ಮತ್ತು ಇತರರು ಪಾಲುದಾರರಾಗಲು ಹೊರಟಿರುವ ದಾಖಲೆ ನೀಡಿದ ಟಪಾಲ್ ಗಣೇಶ್| ಗಡಿ ಗುರುತು ಸರ್ವೇ ವೈಜ್ಞಾನಿಕವಾಗಿ ನಡೆಯದಂತೆ ಸಚಿವ ಈಶ್ವರಪ್ಪ ಒತ್ತಡ ಆರೋಪ|
ಬಳ್ಳಾರಿ(ಡಿ.27): ಅಕ್ರಮ ಗಣಿಗಾರಿಕೆಯಿಂದಾಗಿ ಲೋಕಾಯುಕ್ತ ವರದಿಯಲ್ಲಿ ಗಣಿ ರದ್ದತಿಗೆ ಶಿಫಾರಸ್ಸುಗೊಂಡಿರುವ, ಸಂಡೂರು ತಾಲೂಕಿನ ವಿಠಲಾಪುರ ಬಳಿಯ ‘ಹಿಂದ್ ಟ್ರೇಡರ್ಸ್’ ಗಣಿ ಗುತ್ತಿಗೆಯ ಪಾಲುದಾರರಾಗಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಸಂಬಂಧಿಕರು ಮತ್ತು ಆಪ್ತರ ಮೂಲಕ ಮುಂದಾಗಿದ್ದಾರೆ ಎಂದು ಗಣಿ ಉದ್ಯಮಿ ಹಾಗೂ ಗಣಿ ಅಕ್ರಮ ವಿರೋಧಿ ಹೋರಾಟಗಾರ ಟಪಾಲ್ ಗಣೇಶ್ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಹಿಂದ್ ಟ್ರೇಡರ್ಸ್ನಲ್ಲಿ ಸಚಿವ ಈಶ್ವರಪ್ಪ ಸಂಬಂಧಿಕರಾದ ಪುಟ್ಟಸ್ವಾಮಿಗೌಡ ಮತ್ತು ಇತರರು ಪಾಲುದಾರರಾಗಲು ಹೊರಟಿರುವ ದಾಖಲೆಗಳನ್ನು ನೀಡಿದ ಟಪಾಲ್ ಗಣೇಶ್, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ತಮ್ಮ ಪ್ರಭಾವ ಬಳಸಿ ಅಕ್ರಮ ಆರೋಪ ಹೊತ್ತಿರುವ ಗಣಿಗಾರಿಕೆ ಪ್ರದೇಶವನ್ನು ಸಕ್ರಮಗೊಳಿಸುವ ಹುನ್ನಾರವನ್ನು ಸಚಿವ ಈಶ್ವರಪ್ಪ ಅವರು ನಡೆಸಿದ್ದಾರೆ ಎಂದು ಆರೋಪಿಸಿದರು.
ಬಳ್ಳಾರಿ ಜಿಲ್ಲೆ ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯರ ಸಾವಿಗೆ ಇದೇ ಕಾರಣವಂತೆ! ಏನ್ರಿ ಇದು ಪದ್ಧತಿ?
ಗಡಿಗುರುತುಗಳನ್ನು ವೈಜ್ಞಾನಿಕವಾಗಿ ನಡೆಯದಂತೆ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ಮೇಲೆ ಸಚಿವ ಈಶ್ವರಪ್ಪ ಅವರು ಒತ್ತಡ ತಂದಿದ್ದು, ಇದರಿಂದ ರಾಜ್ಯದ ಗಡಿಗಳು ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಹಿಂದ್ ಟ್ರೇಡರ್ಸ್ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಇದ್ದಾಗ್ಯೂ ಹಾಗೂ ಲೋಕಾಯುಕ್ತ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಇರುವಾಗ ಸಚಿವ ಈಶ್ವರಪ್ಪ ಅವರು ತಮ್ಮ ಕುಟುಂಬ ಸದಸ್ಯರ ಮೂಲಕ ಗಣಿ ಗುತ್ತಿಗೆಯ ಪಾಲುದಾರಿಕೆ ಪಡೆಯಲು ಮುಂದಾಗಿದ್ದು ಎಷ್ಟು ಸರಿ? ಎಂದು ಟಪಾಲ್ ಪ್ರಶ್ನಿಸಿದರು.
ಹಿಂದ್ ಟ್ರೇಡರ್ಸ್ ಹಾವಿನಾಳ್ ಮನೆತನಕ್ಕೆ ಸೇರಿದ್ದಾಗಿದೆ. ಜನಾರ್ದನ ರೆಡ್ಡಿ ಅಧಿಕಾರ ಅವಧಿಯಲ್ಲಿ ಈ ಗಡಿಗುರುತುಗಳನ್ನು ಧ್ವಂಸ ಮಾಡಿ, ಹಾವಿನಾಳ್ ಕುಟುಂಬವನ್ನು ಬೆದರಿಸಿ ಅಕ್ರಮ ಗಣಿಗಾರಿಕೆ ಮಾಡಿದ್ದರು. ಇದರಿಂದಾಗಿ ಹಿಂದ್ ಟ್ರೇಡರ್ಸ್ಗೆ ಸೇರಿದ ಗಣಿಗುತ್ತಿಗೆ ಪ್ರದೇಶದಲ್ಲಿ ಅಕ್ರಮ ನಡೆದಿರುವುದು ಬಹಿರಂಗವಾಯಿತು. ಈ ಸಂಬಂಧ ಲೋಕಾಯುಕ್ತ ವರದಿಯಲ್ಲಿ ಸಹ ತಿಳಿಸಲಾಗಿದೆ. ಅಷ್ಟೇ ಅಲ್ಲ, ಹಿಂದ್ ಟ್ರೇಡರ್ಸ್ ಗಣಿಗುತ್ತಿಗೆ ರದ್ದತಿಗೆ ಶಿಫಾರಸ್ಸು ಕೂಡ ಮಾಡಲಾಗಿದೆ ಎಂದು ವಿವರಿಸಿದರು. ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಗಡಿಗುರುತು ಮಾಡುವಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸುತ್ತಿಲ್ಲ. ಗ್ರಾಮ ನಕ್ಷೆಗಳನ್ನು ಪರಿಗಣಿಸುತ್ತಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಯಲಿದೆ ಎಂದರಲ್ಲದೆ, ಯಾವುದೇ ಕಾರಣಕ್ಕೂ ಸಚಿವ ಈಶ್ವರಪ್ಪ ಅವರು ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಹಿಂದ್ ಟ್ರೇಡರ್ಸ್ನಿಂದ ಗಣಿಗುತ್ತಿಗೆ ಪಾಲುದಾರಿಕೆ ಪಡೆಯಬಾರದು ಎಂದು ಒತ್ತಾಯಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 27, 2020, 10:12 AM IST