ಮೈಸೂರು (ನ.30):  ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಬ್ಬ ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ತನ್ವೀರ್‌ ಸೇಠ್‌ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಹೋದ ಕಡೆಯೆಲ್ಲಾ ಸರ್ಕಾರದ ವಿರುದ್ಧವೇ ನಡೆಯುವ ಪ್ರವೃತ್ತಿಯಿದೆ. ಅವರು ಸರ್ಕಾರವನ್ನೇ ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ರೋಹಿಣಿ ಸಿಂಧೂರಿ ಈ ಹಿಂದೆ ಸರ್ಕಾರದ ವಿರುದ್ಧವೇ ಕೆಎಟಿಗೆ ಹೋಗಿದ್ದರು ಎಂದರು.

ಸರ್ಕಾರಿ ಸಭೆಯಲ್ಲಿ ಜನಪ್ರತಿನಿಧಿಗಳು ಮಾತನಾಡುವುದು ವೈಯಕ್ತಿಕವಲ್ಲ. ಶಾಸಕರು ಜನರ ಸಮಸ್ಯೆಗಳನ್ನಷ್ಟೇ ಪ್ರಸ್ತಾಪ ಮಾಡುತ್ತಾರೆ, ವೈಯಕ್ತಿಕ ಸಮಸ್ಯೆಗಳನ್ನಲ್ಲ. ಆದರೆ, ಅಧಿಕಾರ ಇದೇ ಅಂತ ಪತ್ರ ಬರೆಯೋಕೆ ಆಗುತ್ತಾ? ತಪ್ಪನ್ನು ತಿದ್ದುಕೊಳ್ಳಬೇಕಾ? ಈ ರೀತಿಯ ಜಿಜ್ಞಾಸೆ, ಕಿತ್ತಾಟ ಮೈಸೂರು ಜಿಲ್ಲೆಯ ಪ್ರಗತಿಗೆ ಮಾರಕವಾಗಲಿದೆ ಎಂದು ಅವರು ಹೇಳಿದರು.

'ರಾಜವಂಶಸ್ಥರ ವಿರುದ್ಧ ಅವಮಾನ ಸಲ್ಲ : ಡಿಸಿ ರೋಹಿಣಿ ಬಗ್ಗೆ ಅಸಭ್ಯ ಪದ ಬಳಕೆ ತಪ್ಪು' ...

ವ್ಯಕ್ತಿಯ ವಿಚಾರದಲ್ಲಿ ಏನೇ ಅಭಿಪ್ರಾಯ ಇದ್ದರೂ ವ್ಯವಸ್ಥೆಯ ಮೇಲೆ ಬರಬಾರದು. ಅವರು ಐಎಎಸ್‌, ನಾವು ಎಂಎಲ…ಎಗಳು ಅಂತ ಅಲ್ಲ. ಶಾಸಕಾಂಗ ರೂಪಿಸಿದ ಶಾಸನಗಳನ್ನು ಕಾರ್ಯರೂಪಕ್ಕೆ ತರುವುದು ಕಾರ್ಯಾಂಗದ ಕೆಲಸ. ಆದರೆ, ನಮ್ಮ ನಡೆ ನುಡಿ ಮೀರಿ ನಡೆಯಬಾರದು. ಸರ್ಕಾರ ಶಿಷ್ಟಾಚಾರದಲ್ಲಿ ಸ್ಪಷ್ಟವಾದ ನಿಯಮ ರೂಪಿಸಿದೆ. ಲೋಪವಾದಾಗ ಎಚ್ಚರಿಕೆ ಕೊಟ್ಟಿರುವ ಉದಾಹರಣೆಗಳಿವೆ ಎಂದರು.

ಮೈಸೂರಿನಲ್ಲಿ ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ನಾನು ಸರ್ಕಾರಕ್ಕೆ ಸಾಕಷ್ಟು ಪತ್ರ ಬರೆದಿದ್ದೇನೆ. ನಾನು ಪತ್ರ ಬರೆದ ಮೇಲೆ ಆಹ್ವಾನ ಪತ್ರಿಕೆಗಳಲ್ಲಿ ನನ್ನ ಹೆಸರು ಉಲ್ಲೇಖವಾಗಿದೆ. ಇತ್ತೀಚೆಗೆ ನಡೆದ ನಗರ ಪೊಲೀಸ್‌ ಆಯುಕ್ತರ ನೂತನ ಕಚೇರಿ ಉದ್ಘಾಟನೆಯ ವೇಳೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ನನಗೆ ಹಾಕಲಾಗಿದ್ದ ಕುರ್ಚಿಗೆ ಡಿಜಿ ಬಂದು ಕುಳಿತರು. ಅಲ್ಲಿ ನನಗೆ ಅವಮಾನದ ಸಂಗತಿ ಎದುರಾಯ್ತು. ಇಂತಹ ಘಟನೆಗಳಿಂದ ಸರ್ಕಾರಕ್ಕೆ ಮುಜುಗರವಾಗುವ ಕೆಲಸವಾಗುತ್ತಿದೆ ಎಂದು ಅವರು ತಿಳಿಸಿದರು.

ರೋಹಿಣಿ ಸಿಂಧೂರಿ ಅವರ ಸ್ಪಂದನ ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳು ಜನರ ಮಧ್ಯೆ ನಿರಂತರವಾಗಿ ಇರುತ್ತಾರೆ. ಅಧಿಕಾರಿಗಳು ಜನರ ಬಳಿಗೆ ಹೋಗಿ ಕೆಲಸ ಮಾಡಲಿ ಅಂತ ಜನಸ್ಪಂದನ ಅಷ್ಟೇ. ಆದರೆ ಜನಸ್ಪಂದನ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಅಂತ ಹೇಳಿಲ್ಲ ಎಂದರು.

ಮಾಜಿ ಸಚಿವ ರೋಷನ್‌ ಬೇಗ್‌ ಬಂಧನ ರಾಜಕೀಯ ಪ್ರೇರಿತವಲ್ಲ. ಐಎಂಎ ಅಕ್ರಮದಲ್ಲಿ ಅವರು ಬಂಧನವಾಗಿದ್ದಾರೆ. ಹೀಗಾಗಿ ಸಿಬಿಐ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಿಬಿಐ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ಅವರು ತಿಳಿಸಿದರು.