Asianet Suvarna News Asianet Suvarna News

ನಮ್ಮಂಥ ಬಡವರು ಬದುಕಲು ಇದು ಕಾಲವಲ್ಲ: ಬೀದಿ ಬದಿ ವ್ಯಾಪಾರಿಗಳ ಅಳಲು..!

ಹಾವೇರಿ ನಗರದ ಬೀದಿ ಬದಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ತಮಿಳುನಾಡು ಮೂಲದ ವ್ಯಾಪಾರಿಗಳು| ಜನತಾ ಕರ್ಫ್ಯೂನಿಂದ ಸ್ವಂತ ಊರುಗಳತ್ತ ಮುಖಮಾಡಿದ ಜನತೆ| ಬಸ್‌ ಸಂಚಾರ ಬಂದ್‌ ಆಗಿದ್ದರಿಂದ ರೈಲಿನ ಮೂಲಕ ಆಗಮಿಸುತ್ತಿರುವ ಹೆಚ್ಚಿನ ಜನರು| 

Tamil Nadu Based Street Side Merchants Faces Problems Due to Janata Curfew in Haveri grg
Author
Bengaluru, First Published Apr 29, 2021, 11:27 AM IST

ನಾರಾಯಣ ಹೆಗಡೆ 

ಹಾವೇರಿ(ಏ.29): ಇನ್ನು ಎರಡು ವಾರ ಮನೆಯಿಂದ ಹೊರಬೀಳುವಂತಿಲ್ಲ. ಅಷ್ಟು ದಿನ ದುಡಿಯದೇ ತಿನ್ನುವಂತಹ ಸ್ಥಿತಿ ನಮ್ಮಲ್ಲಿಲ್ಲ. ಅದಕ್ಕಾಗಿ ನಮ್ಮೂರಿಗೆ ಹೋಗುತ್ತಿದ್ದೇವೆ. ಮುಂದೆ ಪರಿಸ್ಥಿತಿ ಸರಿಹೋದ ಮೇಲೆ ವಾಪಸ್‌ ಬರುವ ಬಗ್ಗೆ ಯೋಚಿಸುತ್ತೇವೆ... ಜೀವನ ನಿರ್ವಹಣೆಗಾಗಿ ತಮಿಳುನಾಡಿನಿಂದ ಇಲ್ಲಿಗೆ ಬಂದು ವರ್ಷದಿಂದ ನಗರದ ಬೀದಿಬದಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ಧನಂಜಯನ್‌ ಎಂಬಾತ ತೀವ್ರ ಬೇಸರದಿಂದ ಹೇಳಿದ ಮಾತಿದು.

ಇಬ್ಬರು ಮಕ್ಕಳು, ಪತ್ನಿ ಸಮೇತರಾಗಿ ತಮಿಳುನಾಡಿಗೆ ಹೋಗಲು ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದ ಧನಂಜಯನ್‌ ಅವರನ್ನು ಮಾತನಾಡಿಸಿದಾಗ, ಈ ಕೊರೋನಾ ಪ್ರತಿವರ್ಷ ನಮ್ಮ ಬದುಕನ್ನು ಕಸಿದುಕೊಳ್ಳುತ್ತಿದೆ. ಕಳೆದ ವರ್ಷ ನಾಲ್ಕು ತಿಂಗಳು ನಾವು ಊರು ಬಿಡುವಂತಾಗಿತ್ತು. ನಂತರವೂ ವ್ಯಾಪಾರ ಸರಿದಾರಿಗೆ ಬಂದಿರಲಿಲ್ಲ. ಕಳೆದ ಎರಡು ತಿಂಗಳಿಂದ ಅಲ್ಪಸ್ವಲ್ಪ ವ್ಯಾಪಾರ ಆರಂಭವಾಗಿತ್ತು. ಈಗ ಮತ್ತೆ ಕೊರೋನಾ ಹೆಚ್ಚಿದ್ದರಿಂದ ಕರ್ಫ್ಯೂ ಹೇರಿದ್ದಾರೆ. ನಮ್ಮಂಥ ಬಡವರು ಬದುಕಲು ಇದು ಕಾಲವಲ್ಲ ಅನಿಸುತ್ತಿದೆ. ಇನ್ನು ಎರಡು ವಾರ ಮನೆಯಿಂದ ಹೊರಬೀಳುವಂತಿಲ್ಲ. ಅಷ್ಟುದಿನ ಕುಟುಂಬ ಸಲಹುವಷ್ಟು ಹಣವಿಲ್ಲ. ಅದಕ್ಕಾಗಿ ತಮಿಳುನಾಡಿನ ಚಿತ್ತೂರ ಬಳಿಯ ನಮ್ಮೂರಿಗೆ ಹೋಗುತ್ತಿದ್ದೇವೆ ಎಂದು ಬೇಸರದಿಂದಲೇ ನುಡಿದರು.

ಕೋವಿಡ್‌ ಮೆಡಿಕಲ್‌ ಎಮರ್ಜೆನ್ಸಿಗೆ ಸಿದ್ಧರಾಗಿ: ಬೊಮ್ಮಾಯಿ

ಇವರೊಂದಿಗೆ ಇನ್ನೂ ಎರಡು ಕುಟುಂಬಗಳು ಇಲ್ಲಿಂದ ತಮಿಳುನಾಡಿಗೆ ತೆರಳುತ್ತಿದೆ. ಅವರು ಕೂಡ ನಗರದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದವರು. ನಾಲ್ಕಾರು ಬ್ಯಾಗ್‌ಗಳನ್ನು ಇಟ್ಟುಕೊಂಡು ಭಾರವಾದ ಮನಸ್ಸಿನಲ್ಲೇ ನಗರವನ್ನು ತೊರೆಯುವ ನಿರ್ಧಾರಕ್ಕೆ ಅವರು ಬಂದಿದ್ದರು. ನಾವು ಅಂದಿನ ಅನ್ನಕ್ಕಾಗಿ ಅಂದೇ ಸಂಪಾದಿಸುವ ಮಂದಿ. ಮೊದಲೇ ವ್ಯಾಪಾರ ಮೊದಲಿನಂತೆ ಇರಲಿಲ್ಲ. ಈಗ ಜನತಾ ಕರ್ಫ್ಯೂ ಆರಂಭವಾದ್ದರಿಂದ ಬೀದಿಬದಿಯ ನಮ್ಮಂಥ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ನಾಲ್ಕಾರು ಲಗೇಜ್‌ ಬ್ಯಾಗ್‌ ಮುಂದಿಟ್ಟುಕೊಂಡಿದ್ದ ಮಹಿಳೆ ಮನದಾಳದ ಮಾತು ಹೇಳಿದರು.

ಜಿಲ್ಲೆಗೂ ಆಗಮನ:

ಇಲ್ಲಿಯ ಜನರು ತಮ್ಮೂರಿಗೆ ವಲಸೆ ಹೋಗುತ್ತಿದ್ದರೆ ಜಿಲ್ಲೆಯಿಂದ ಹೋಗಿದ್ದವರ ಮರುಗುಳೆಯೂ ದೊಡ್ಡ ಪ್ರಮಾಣದಲ್ಲೇ ನಡೆಯುತ್ತಿದೆ. ಬೆಂಗಳೂರು, ಮುಂಬೈ, ಗೋವಾ ಮುಂತಾದ ಕಡೆ ದುಡಿಯು ಹೋಗಿದ್ದವರು ರೈಲು, ಖಾಸಗಿ ಬಸ್‌ಗಳ ಮೂಲಕ ಎರಡು ದಿನಗಳಿಂದ ಸಾವಿರಾರು ಜನರು ಆಗಮಿಸಿದ್ದಾರೆ. ಗಂಟುಮೂಟೆ ಕಟ್ಟಿಕೊಂಡು ಜಿಲ್ಲೆಯ ತಮ್ಮೂರಿಗೆ ಆಗಮಿಸುತ್ತಿದ್ದಾರೆ. ಬಸ್‌ ಸಂಚಾರ ಬಂದ್‌ ಆಗಿದ್ದರಿಂದ ಹೆಚ್ಚಿನ ಜನರು ರೈಲಿನ ಮೂಲಕ ಆಗಮಿಸುತ್ತಿದ್ದಾರೆ.

Follow Us:
Download App:
  • android
  • ios