ಟಿಕ್‌ಟಾಕ್‌ ಮೂಲಕ ಮುಖ್ಯಮಂತ್ರಿಗಳಲ್ಲಿ ಅಂಗಲಾಚಿದ ಯುವತಿ| ಸರ್ಕಾರಿ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಕೊಡಿಸಿ ವಿಮ್ಸ್‌ಗೆ ರವಾ​ನೆ|ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸುತ್ತಿದ್ದು ಚಿಕಿತ್ಸೆ ನೀಡಬೇಕೆಂದು ಕೋರಿದ್ದ ಯುವತಿ| ತಹಸೀಲ್ದಾರ್‌ ಆಶಪ್ಪ ಪೂಜಾರ್‌ ಅವರು ವೈದ್ಯರೊಂದಿಗೆ ಮನೆಗೆ ತೆರಳಿ ಜ್ಯೋತಿ ಅವರ ತಾಯಿಯ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಔಷಧಿ ನೀಡಿದ್ದಾರೆ|

ಹಗರಿಬೊಮ್ಮನಹಳ್ಳಿ(ಏ.15): ತಾಯಿ ಆರೋಗ್ಯ ರಕ್ಷಣೆಗಾಗಿ ಟಿಕ್‌ಟಾಕ್‌ ಮೂಲಕ ಮುಖ್ಯಮಂತ್ರಿಗಳಲ್ಲಿ ಅಂಗಲಾಚಿದ ಯುವತಿಗೆ ಸಿಎಂ ಸ್ಪಂದನೆಯ ಸಂದೇಶ ಬರುವ ಮುನ್ನವೇ ತಾಲೂಕು ಆಡಳಿತ ಸ್ಪಂದಿಸಿದ್ದು ರೋಗಿಯನ್ನು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ಸೇರಿಸಿದ್ದಾರೆ.

ಪಟ್ಟಣದ ರಾಮನಗರ ನಿವಾಸಿ ಎಂ. ಜ್ಯೋತಿ ಅವರು ಮಂಗಳವಾರ ಮುಂಜಾನೆ ಟಿಕ್‌ಟಾಕ್‌ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದು, ತನ್ನ ತಾಯಿ ತೀವ್ರ ಅನಾರೋಗದಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಬೇಕಾಗಿದೆ. ಈಗಾಗಲೇ 15 ದಿನದ ಹಿಂದೆ ತಂದೆಯನ್ನು ಕಳೆದುಕೊಂಡಿದ್ದೇನೆ. ತಾಯಿಯನ್ನು ಕಳೆದುಕೊಳ್ಳಲು ನಾನು ಸಿದ್ಧಳಿಲ್ಲ. ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸುತ್ತಿದ್ದು ಚಿಕಿತ್ಸೆ ನೀಡಬೇಕೆಂದು ಕೋರಿದ್ದರು.

ಲಾಕ್‌ಡೌನ್‌: 'ಚೆಕ್‌ಪೋಸ್ಟ್‌ನಲ್ಲಿ ಮತ್ತಷ್ಟು ಬಿಗಿ, ಯಾರೂ ಒಳ ನುಸಳದಂತೆ ಕಟ್ಟೆಚ್ಚರ'

ವಿಷಯ ತಿಳಿಯುತ್ತಿದ್ದಂತೆಯೇ ತಹಸೀಲ್ದಾರ್‌ ಆಶಪ್ಪ ಪೂಜಾರ್‌ ಅವರು ವೈದ್ಯರೊಂದಿಗೆ ಅವರ ಮನೆಗೆ ತೆರಳಿ ಜ್ಯೋತಿ ಅವರ ತಾಯಿಯ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಔಷಧಿ ನೀಡಿದ್ದಾರೆ. ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಬಳ್ಳಾರಿ ವಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ.

ಜ್ಯೋತಿ ಅವರ ತಂದೆ 15 ದಿನದ ಹಿಂದಷ್ಟೇ ಮೃತರಾಗಿದ್ದಾರೆ. ತಾಯಿ ಸಹ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಜ್ವರವೂ ಇದೆ. ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗೆ ಮೊರೆ ಹೋಗಿದ್ದರು.