Asianet Suvarna News Asianet Suvarna News

ಲಾಕ್‌ಡೌನ್‌: 'ಚೆಕ್‌ಪೋಸ್ಟ್‌ನಲ್ಲಿ ಮತ್ತಷ್ಟು ಬಿಗಿ, ಯಾರೂ ಒಳ ನುಸಳದಂತೆ ಕಟ್ಟೆಚ್ಚರ'

ಆಂಧ್ರಪ್ರದೇಶ ಗಡಿ ಪ್ರದೇಶದಲ್ಲಿನ ನಿವಾಸಿಗಳು ಬಳ್ಳಾರಿಯತ್ತ ನುಸುಳುವ ಯತ್ನ| ಚೆಕ್‌ಪೋಸ್ಟ್‌ ಇರುವುದರಿಂದ ಕಷ್ಟ ಸಾಧ್ಯ| ಹೊಲಗಳ ಮೂಲಕ ಒಳ ದಾರಿ ಹುಡುಕಿಕೊಂಡು ಊರು ಸೇರುವ ಪ್ರಯತ್ನ| ಕಳ್ಳದಾರಿಗಳಿಗೂ ಕಡಿವಾಣ ಹಾಕಿದ ಪೊಲೀಸ್‌ ಇಲಾಖೆ| 17 ಒಳ ದಾರಿಗಳನ್ನು ಹಚ್ಚಿದ ಪೊಲೀಸರು| 
SP C K Baba Talks over India LockDown in Ballari district
Author
Bengaluru, First Published Apr 15, 2020, 8:14 AM IST
ಬಳ್ಳಾರಿ(ಏ.15): ಕೊರೋನಾ ವೈರಸ್‌ ಭೀತಿಯಿಂದಾದ ಲಾಕ್‌ಡೌನ್‌ ಬಳಿಕ ಆಂಧ್ರಪ್ರದೇಶ ಗಡಿ ಪ್ರದೇಶದಲ್ಲಿನ ನಿವಾಸಿಗಳು ಬಳ್ಳಾರಿಯತ್ತ ನುಸುಳುವ ಯತ್ನಕ್ಕೆ ಜಿಲ್ಲಾ ಪೊಲೀಸ್‌ ಕಡಿವಾಣ ಹಾಕಿದೆ.

ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಇಂದಿಗೂ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವ ಅನೇಕ ಗ್ರಾಮಗಳು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವೈವಾಹಿಕ ಸಂಬಂಧಗಳನ್ನು ಹೊಂದಿವೆ. ಹಿರೇಹಾಳ್‌, ಹೊಳಲಗುಂದಿ, ಸುಳುವಾಯಿ, ವಿರುಪಾಪುರ, ಎಳ್ಳಾರ್ತಿ, ನೆರಣಿಕೆ ಹೀಗೆ ಹತ್ತಾರು ಗ್ರಾಮಗಳ ನಿವಾಸಿಗಳು ಬಳ್ಳಾರಿ ಜಿಲ್ಲೆ ಸುರಕ್ಷಿತ ಎಂಬ ದೃಷ್ಟಿಯಿಂದ ಗಡಿ ದಾಟಿ ಬರಲು ಹವಣಿಸುತ್ತಿದ್ದಾರೆ. 

ಲಾಕ್‌ಡೌನ್‌ ಲೆಕ್ಕಿಸದೆ ಕದ್ದುಮುಚ್ಚಿ ವ್ಯಾಪಾರ: ಸಾರ್ವಜನಿಕರಲ್ಲಿ ಮೂಡದ ಅರಿವು

ಚೆಕ್‌ಪೋಸ್ಟ್‌ ಇರುವುದರಿಂದ ಕಷ್ಟ ಸಾಧ್ಯವಾಗಿದೆ. ಹೀಗಾಗಿ, ಹೊಲಗಳ ಮೂಲಕ ಒಳ ದಾರಿಗಳನ್ನು ಹುಡುಕಿಕೊಂಡು ಊರು ಸೇರುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಅನೇಕರು ಕಳ್ಳದಾರಿಯಲ್ಲಿ ಊರು ತಲುಪಿದ್ದಾರೆ ಎಂದು ತಿಳಿದು ಬಂದಿದ್ದು, ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಪೊಲೀಸ್‌ ಇಲಾಖೆ ಕಳ್ಳದಾರಿಗಳಿಗೂ ಕಡಿವಾಣ ಹಾಕಲು ಮುಂದಾಗಿದೆ. ಈ ಸಂಬಂಧ 17 ಒಳ ದಾರಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು ಅಲ್ಲೂ ಪೊಲೀಸರ ನಿಯೋಜನೆಗೊಳಿಸಿ ಜಿಲ್ಲೆಯ ಒಳಗೆ ಯಾರೂ ಬರದಂತೆ ನಿರ್ಬಂಧಿಸಿದ್ದಾರೆ.

ಮುಂದುವರಿದ ರೈತರ ಸಂಕಷ್ಟ

ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ರೈತರ ಸಂಕಷ್ಟಮುಂದುವರಿದಿದೆ. ಜಿಲ್ಲೆಯಲ್ಲಿ ಬೆಳೆದ ಪಪ್ಪಾಯಿ, ಕರ್ಬೂಜ, ಹೂಕೋಸು ಮತ್ತಿತರ ಉತ್ಪನ್ನಗಳಿಗೆ ಬೆಲೆಯಿಲ್ಲದೆ ರೈತರಿಗೆ ಆಘಾತ ನೀಡಿದೆ. ರಾಜ್ಯ ಸರ್ಕಾರ ರೈತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ, ಹೊರ ಜಿಲ್ಲೆಗಳಲ್ಲಿ ಎಲ್ಲೂ ಖರೀದಿ ನಡೆಯುತ್ತಿಲ್ಲ. ಮಾರುಕಟ್ಟೆ ವ್ಯವಹಾರ ಸ್ಥಗಿತಗೊಂಡಿರುವುದರಿಂದ ರೈತರ ಬೆಳೆಗಳನ್ನು ಖರೀದಿಸುವವರಿಲ್ಲ ಎನ್ನುವಂತಾಗಿದೆ. ಹೀಗಾಗಿ, ರೈತರು ದಿಕ್ಕು ತೋಚದಂತಾಗಿದ್ದಾರೆ. ಹೂವಿನಹಡಗಲಿ, ಸಂಡೂರು, ಕೂಡ್ಲಿಗಿ, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಪಪ್ಪಾಯಿ, ಅಂಜೂರ, ಕರ್ಬೂಜ ಬೆಳೆದಿದ್ದಾರೆ. ರಾಜ್ಯ ಸರ್ಕಾರವೇ ರೈತರ ಉತ್ಪನ್ನಗಳನ್ನು ಖರೀದಿ ಮಾಡಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸುತ್ತಿವೆ. ಆದರೂ ಖರೀದಿ ಸಂಬಂಧ ಸರ್ಕಾರ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಮುಂದುವರಿದ ದಾನ ಕಾರ್ಯ

ನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಅಕ್ಕಿ ಮತ್ತಿತರ ಧಾನ್ಯಗಳನ್ನು ನೀಡುತ್ತಿರುವ ದಾನಿಗಳು ಕಳೆದ ಹದಿನೈದು ದಿನಗಳಿಂದಲೂ ಬಿಡದೆ ಮುಂದುವರಿಸಿದ್ದಾರೆ. ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಖಾಸಗಿ ಸಂಘ, ಸಂಸ್ಥೆಗಳು ಹಾಗೂ ಕೆಲವರು ವೈಯಕ್ತಿಕವಾಗಿ ಅಕ್ಕಿ ಮತ್ತಿತರ ಆಹಾರ ಧಾನ್ಯಗಳನ್ನು ಪ್ಯಾಕ್‌ ಮಾಡಿ ನೇರವಾಗಿ ಬಡವರಿಗೆ ವಿತರಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ನಗರ ಹೊರ ವಲಯದಲ್ಲಿ ವಾಸಿಸುತ್ತಿರುವ ಅಲೆಮಾರಿಗಳು ಹಾಗೂ ಕುರಿಗಾಹಿಗಳ ಕಡೆ ದಾನಿಗಳ ದೃಷ್ಟಿಹರಿದಿದ್ದು. ಇಲ್ಲಿನ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ನಿತ್ಯ ಹುಡುಕಾಡಿ ಆಹಾರ ಧಾನ್ಯಗಳು, ಮಾಸ್ಕ್‌, ಸ್ಯಾನಿಟೈಜರ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಬಳ್ಳಾರಿ ಎಸ್ಪಿ ಸಿ.ಕೆ. ಬಾಬಾ ಅವರು, ಚೆಕ್‌ಪೋಸ್ಟ್‌ಗಳಲ್ಲಿ ಮತ್ತಷ್ಟು ಬಿಗಿ ಮಾಡಲಾಗಿದೆ. ಗಡಿ ಭಾಗಗಳಿಂದ ಯಾರೂ ಒಳ ನುಸಳದಂತೆ ಕಟ್ಟೆಚ್ಚರ ವಹಿಸಿದ್ದೇವೆ ಎಂದು ಹೇಳಿದ್ದಾರೆ. 

 
Follow Us:
Download App:
  • android
  • ios