ಮೊಳಕಾಲ್ಮುರು(ಏ.16): ಯಾದಗಿರಿ ಹಾಗೂ ರಾಯಚೂರು ಮೂಲದ 126 ಕೂಲಿ ಕಾರ್ಮಿಕರನ್ನು ಮಂಗಳವಾರ ಸಂಜೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ತಮ್ಮೇನಹಳ್ಳಿ ಚೆಕ್‌ ಪೋಸ್ಟ್‌ ಬಳಿ ತಡೆದಿರುವ ತಾಲೂಕು ಆಡಳಿತ ಎಲ್ಲರಿಗೂ ರಾಂಪುರ ಗ್ರಾಮದ ಆಶ್ರಮ ಶಾಲೆಯಲ್ಲಿ ಆಶ್ರಯ ಕಲ್ಪಿಸಿದೆ.

ಬೆಂಗಳೂರು ಕಡೆಯಿಂದ ಬಂದಿದ್ದ ಕಾರ್ಮಿಕರು ಬೀದರ್‌- ಶ್ರೀರಂಗಪಟ್ಟಣ ಹೆದ್ದಾರಿ ಮೂಲಕ ವಿವಿಧ ವಾಹನಗಳಲ್ಲಿ ರಾಯಚೂರಿಗೆ ತೆರಳುತ್ತಿದ್ದರು. ಅವರೆಲ್ಲರನ್ನು ತಡೆದು ರಾಂಪುರ ಗ್ರಾಮಕ್ಕೆ ಕರೆತಂದು ಥರ್ಮಲ್‌ ಸ್ಕ್ಯಾನಿಂಗ್‌ ನಡೆಸಿದ್ದಾರೆ. ಯಾರಿಗೂ ಜ್ವರ ಕಂಡು ಬಂದಿಲ್ಲ. ನಂತರ ಆಶ್ರಮ ಶಾಲೆಯಲ್ಲಿ ಎಲ್ಲರಿಗೂ ಆಶ್ರಯ ಕಲ್ಪಿಸಿದ್ದಾರೆ.

ಚಿತ್ರದುರ್ಗದ ವಿದ್ಯಾರ್ಥಿಗಳು ಮಧ್ಯಪ್ರದೇಶದಲ್ಲಿ ಲಾಕ್..!

ಬೆಂಗಳೂರು, ತುಮಕೂರು, ಗುಬ್ಬಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ಇವರಿಗೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದಂತಾಗಿ ಸ್ವಂತ ಊರುಗಳಿಗೆ ಟೆಂಪೋ ವಾಹನಗಳಲ್ಲಿ ತೆರಳುತ್ತಿದ್ದರು. ಕೂಲಿ ಕಾರ್ಮಿಕರ ಪೈಕಿ ನಾಲ್ವರು ತುಂಬು ಗರ್ಭಿಣಿಯರು 30 ಮಕ್ಕಳು ಸೇರಿ 126 ಕ್ಕೂ ಹೆಚ್ಚಿನ ಜನರಿದ್ದಾರೆ. ಇವರಿಗೆ ತಾಲೂಕು ಆಡಳಿತ ಊಟ, ತಿಂಡಿ ವ್ಯವಸ್ಥೆ ಮಾಡಿದೆ.

ಇದಕ್ಕೂ ಮುನ್ನ ತಮ್ಮೇನಹಳ್ಳಿ ಚೆಕ್‌ಪೋಸ್ಟ್‌ ಬಳಿ ತಡೆದಾಗ ನಮ್ಮನ್ನು ಊರಿಗೆ ಕಳಿಸಿಕೊಡುವಂತೆ ಪಟ್ಟು ಹಿಡಿದ ಕಾರ್ಮಿಕರು ರಾತ್ರಿಯಾದರೂ ಊಟ ಮಾಡದೆ ಹಠ ಸಾಧಿಸಿದ್ದರು. ತಹಸೀಲ್ದಾರ್‌ ಎಂ.ಬಸವರಾಜ ಸೇರಿದಂತೆ ವಿವಿಧ ಅಧಿಕಾರಿಗಳು ತೆರಳಿ ಲಾಕ್‌ಡೌನ್‌ ಮುಗಿಯುವವರೆಗೂ ಕಳಿಸಲು ಸಾಧ್ಯವಿಲ್ಲ. ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಸಹಕಾರ ಮಾಡುವಂತೆ ಮನವಿ ಮಾಡಿದಾಗ ಬಿಗಿ ಪಟ್ಟು ಸಡಿಲಿಸಿ ಆಶ್ರಮ ಶಾಲೆಯಲ್ಲಿ ಇರಲು ಒಪ್ಪಿಗೆ ಸೂಚಿಸಿದ್ದಾರೆ.

ಕೂಲಿ ಕಾರ್ಮಿಕರಿಗೆ ನೆರವಿಗೆ ತಾಲೂಕು ಆಡಳಿತ ಎಲ್ಲಾ ವ್ಯವಸ್ಥೆ ಕೈಗೊಂಡಿದ್ದು ದಾನಿಗಳು ಕೂಡ ಅಲ್ಪ ಪ್ರಮಾಣದ ಸಹಕಾರ ನೀಡಿದ್ದಾರೆ. ಕುಡಿಯುವ ನೀರು ಮತ್ತು ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದು ಕಾಲಕಾಲಕ್ಕೆ ತಪಾಸಣೆ ನಡೆಸಲು ವೈದ್ಯರಿಗೆ ಸೂಚಿಸಲಾಗಿದೆ. ಲಾಕ್‌ ಡೌನ್‌ ಮುಗಿಯುವವರೆಗೆ ತಾಲೂಕು ಆಡಳಿತ ಇವರಿಗೆ ಎಲ್ಲಾ ರೀತಿಯ ನೆರವನ್ನು ಕಲ್ಪಿಸಲಿದೆ ಎಂದು ತಹಸೀಲ್ದಾರ್‌ ಎಂ.ಬಸವರಾಜ ತಿಳಿಸಿದರು.

ಡಿವೈಎಸ್‌ಪಿ ರೋಷನ್‌ ಜಮೀರ್‌, ತಾಲೂಕು ಪಂಚಾಯಿತಿ ಇ.ಒ.ಪ್ರಕಾಶ, ಆರ್‌ಐ.ಗೋಪಾಲ್‌,ಸಿಪಿಐ ಗೋಪಾಲ ನಾಯ್ಕ,ಪಿಎಸ್‌ಐ ಗುಡ್ಡಪ್ಪ ಇದ್ದರು.