Asianet Suvarna News Asianet Suvarna News

Kodagu; ಅಕ್ಟೋಬರ್ 17ರಂದು ರಾತ್ರಿ ತಲಕಾವೇರಿ ಪವಿತ್ರ ತೀರ್ಥೋದ್ಭವ

ಕೊಡಗಿನ ಕುಲ ದೇವತೆ, ನಾಡಿನ ಜೀವನದಿ ಕಾವೇರಿ ತೀರ್ಥೋದ್ಭವ ಅಕ್ಟೋಬರ್ 17ರಂದು ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ರಾತ್ರಿ 7.21 ಗಂಟೆಗೆ ಜರುಗಲಿದೆ.  . ಈ ಬಾರಿ ಭಕ್ತರಿಗೆ ತಲಕಾವೇರಿಯಲ್ಲಿ ಮುಕ್ತ ಅವಕಾಶವಿದೆ.

Talakaveri holy  Cauvery theerthodbhava  on october 17th night gow
Author
First Published Sep 17, 2022, 10:01 PM IST

ಮಡಿಕೇರಿ (ಸೆ.17): ಕೊಡಗಿನ ಕುಲ ದೇವತೆ, ನಾಡಿನ ಜೀವನದಿ ಕಾವೇರಿ ತೀರ್ಥೋದ್ಭವ ಅ.17ರಂದು ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ರಾತ್ರಿ 7.21 ಗಂಟೆಗೆ ಜರುಗಲಿದೆ. ಸೆ.27 ರಂದು ಮಂಗಳವಾರ ಬೆಳಗ್ಗೆ 11.05ಕ್ಕೆ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು. ಅ. 5 ರಂದು ಬುಧವಾರ ಬೆಳಗ್ಗೆ 9.35ಕ್ಕೆ ಅಜ್ಞಾಮುಹೂರ್ತ, ಅ.15 ರಂದು ಶನಿವಾರ ಬೆಳಗ್ಗೆ 11.45ಕ್ಕೆ ಅಕ್ಷಯ ಪಾತ್ರೆ ಇರಿಸುವ ಕಾರ್ಯಕ್ರಮ ನಡೆಯಲಿದೆ. ತಲಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್‌ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಈ ಬಾರಿ ಭಕ್ತರಿಗೆ ತಲಕಾವೇರಿಯಲ್ಲಿ ಮುಕ್ತ ಅವಕಾಶ ನೀಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಶಾಸಕ ಅಪ್ಪಚ್ಚು ರಂಜನ್‌ ಮಾತನಾಡಿ ಕೊರೋನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಭಕ್ತರನ್ನು ಕ್ಷೇತ್ರದಲ್ಲಿ ತಡೆಯಲಾಗಿತ್ತು. ಈ ಬಾರಿ ಎಲ್ಲ ಭಕ್ತರಿಗೆ ಅವಕಾಶ ನೀಡುವಂತೆ ಸೂಚಿಸಿದರು. ಸಚಿವ ಬಿ.ಸಿ. ನಾಗೇಶ್‌ ಮಾತನಾಡಿ, ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಭಕ್ತರಿಗೆ ಯಾವುದೇ ಸಮಸ್ಯೆ ಆಗಬಾರದು. ವಿವಿಧ ಇಲಾಖೆಗಳು ತಮ್ಮ ಜವಾಬ್ದಾರಿ ಅರಿತು ಜಾತ್ರೆ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷ ತೀರ್ಥೋದ್ಭವ ಸಂದರ್ಭ ಭಕ್ತರಿಗೆ ಪ್ರವೇಶಕ್ಕೆ ತೊಂದರೆಯುಂಟಾಯಿತು. ಈ ಬಾರಿ ಆ ರೀತಿ ಆಗಬಾರದು. ಭಕ್ತರಿಗೆ ತೀರ್ಥೋದ್ಭವ ವೀಕ್ಷಣೆಗೆ ಮುಕ್ತ ಅವಕಾಶ ನೀಡಬೇಕೆಂದರು.

ಅನುದಾನದ ಅವಶ್ಯಕತೆ ಇದೆ: ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಅಧಿಕಾರಿ ಕೃಷಪ್ಪ ಮಾತನಾಡಿ ತೀರ್ಥೋದ್ಭವ ಸಂದರ್ಭದಲ್ಲಿ ಅನುದಾನದ ಅವಶ್ಯಕತೆ ಇದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ. ನಾಗೇಶ್‌, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಮಡಿಕೇರಿಯಿಂದ ಭಾಗಮಂಡಲ, ತಲಕಾವೇರಿ ಕರಿಕೆ ಹಾಗು ಭಾಗಮಂಡಲ ಹುಣಸೂರು ರಸ್ತೆಗಳನ್ನು ಸಂಚಾರಕ್ಕೆ ಸೂಕ್ತವೆನಿಸುವ ರೀತಿಯಲ್ಲಿ ಅಡ್ಡಲಾಗಿ ಬಿದ್ದಿರುವ ಮರಗಳನ್ನು ಹಾಗು ಗಿಡಗಂಟಿಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಮ್ಮ ಸಂಪ್ರದಾಯಕ್ಕೆ ಮನ್ನಣೆ ನೀಡಿ ನಾವು ದುಡಿಕೊಟ್ಟು ಹಾಡಿನೊಂದಿಗೆ ಪವಿತ್ರ ಕೊಳದವರೆಗೂ ತೆರಳಲು ಅವಕಾಶ ಮಾಡುವಂತೆ ಎಂ.ಬಿ. ದೇವಯ್ಯ ಮನವಿ ಮಾಡಿದರು.

ಶಾಶ್ವತ ಪಾರ್ಕಿಂಗ್‌ ಬೇಕು: ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ತಲಕಾವೇರಿಯಲ್ಲಿ ವಾಹನಗಳಿಗೆ ಪಾರ್ಕಿಂಗ್‌ಗೆ ಸರ್ವೇ ನಡೆಸಿ ನೀಲ ನಕಾಶೆ ತಯಾರು ಮಾಡಿದ್ದೆ. ತಲಕಾವೇರಿಯಲ್ಲಿ ಶಾಶ್ವತವಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕೆಂದರು.

Kodagu Tourism : ತಲಕಾವೇರಿ ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡದಂತೆ ಒತ್ತಾಯ

ಇದಕ್ಕೆ ಉತ್ತರಿಸಿದ ಶಾಸಕ ಬೋಪಯ್ಯ, ತಲಕಾವೇರಿ ವನ್ಯಧಾಮವಾಗಿದ್ದು ಇಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ಇಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ನೀಡಬೇಕೆಂದರು.

Covid-19 effect: ಎರಡು ವರ್ಷಗಳ ಬಳಿಕ ತಲಕಾವೇರಿಯಲ್ಲಿ ತೀರ್ಥಸ್ನಾನಕ್ಕೆ ಅವಕಾಶ

ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ಬಿ.ಸಿ. ಸತೀಶ್‌, ಜಿ.ಪಂ. ಸಿಇಒ ಭಂವರ್‌ ಸಿಂಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಯ್ಯಪ್ಪ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತಿತರರು ಹಾಜರಿದ್ದರು.

Follow Us:
Download App:
  • android
  • ios