Asianet Suvarna News Asianet Suvarna News

ಜೂನ್‌ ಮೊದಲ ವಾರ ಮಳೆ: ಮುಂಜಾಗ್ರತೆ ವಹಿಸಿ ಎಂದ ದಾವಣಗೆರೆ ಜಿಲ್ಲಾಧಿಕಾರಿ

ಮುಂಗಾರು ಮಳೆ ಹಿನ್ನೆಲೆಯಲ್ಲಿ ತಹಸೀಲ್ದಾರರು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ವಿಪತ್ತು ನಿರ್ವಹಣೆಗೆ ಒತ್ತು ನೀಡಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಸೂಚಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Take Precautions During Monsoon Davanagere DC Tells to Officers
Author
Davanagere, First Published May 16, 2020, 10:52 AM IST

ದಾವಣಗೆರೆ(ಮೇ.16): ಜಿಲ್ಲೆಯಲ್ಲಿ ಜೂನ್‌ ಮೊದಲ ವಾರದಲ್ಲೇ ಮಳೆಯಾಗುವ ಸಾಧ್ಯತೆ ಇದ್ದು, ಆಯಾ ತಾಲೂಕು ಆಡಳಿತದಿಂದ ಜನ, ಜಾನುವಾರು ಸೇರಿ ಯಾವುದೇ ಹಾನಿಯಾಗದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಸೂಚಿಸಿದರು. ಡಿಸಿ ಕಚೇರಿಯಲ್ಲಿ ಶುಕ್ರವಾರ ವಿಪತ್ತು ನಿರ್ವಹಣೆ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಗಾರು ಮಳೆ ಹಿನ್ನೆಲೆಯಲ್ಲಿ ತಹಸೀಲ್ದಾರರು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ವಿಪತ್ತು ನಿರ್ವಹಣೆಗೆ ಒತ್ತು ನೀಡಬೇಕು. ಪ್ರತಿದಿನ 12 ಗಂಟೆ ಒಳಗಾಗಿ ದೂರವಾಣಿ ಮೂಲಕ ಎಲ್ಲಾ ತಹಸೀಲ್ದಾರರು ಆಯಾ ತಾಲೂಕಿನ ಮಳೆಯ ಪ್ರಮಾಣ, ಹಾನಿ ವಿವರ, ಪ್ರಾಣ ಹಾನಿ, ನದಿ ನೀರಿನ ಮಟ್ಟದ ವರದಿಯನ್ನು ಉಪ ವಿಭಾಗಾಧಿಕಾರಿ ಮೂಲಕ ಸಲ್ಲಿಸಬೇಕು. ಜೀವಹಾನಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ, ಜಾನುವಾರುಗಳಿಗೆ ಹಾನಿಗೆ ಸಂಬಂಧಿಸಿದಂತೆ 24 ಗಂಟೆ ಒಳಗಾಗಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯನ್ವಯ ಪರಿಹಾರ ನೀಡಬೇಕು ಎಂದು ಹೇಳಿದರು.

ಪ್ರತಿ ತಾಲೂಕಿಗೂ ವಿಪತ್ತು ನಿರ್ವಹಣೆಗೆ ತಲಾ 30 ಲಕ್ಷ ನೀಡಿದಿದ್ದು, ಇದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ಬೆಳೆ ಹಾನಿ ಬಗ್ಗೆ ಕೃಷಿ, ತೋಟಗಾರಿಕೆ ಅಧಿಕಾರಿಗಳು ಜಂಟಿಯಾಗಿ ಕಾಲಕಾಲಕ್ಕೆ ಸಮೀಕ್ಷೆ ನಡೆಸಿ, ಬೆಳೆ ಹಾನಿ ವರದಿ ಸಲ್ಲಿಸಬೇಕು. ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಬೇಕು ಎಂದು ಸೂಚಿಸಿದರು.

ಪ್ರವಾಹ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ, ಅಂತಹ ಪ್ರದೇಶಗಳ ಜನರನ್ನು ಸ್ಥಳಾಂತರಿಸಬೇಕು. ಗಂಜಿ ಕೇಂದ್ರ ತೆರೆಯುವ ಬಗ್ಗೆ ಯೋಜನೆ ಸಿದ್ಧಪಡಿಸಬೇಕು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಘಡ ಸಂಭವಿಸದಂತೆ ಮುಂಜಾಗ್ರತಾ ಯೋಜನೆ ರೂಪಿಸಿ, ಅನುಷ್ಟಾನಗೊಳಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವಂತೆ ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆಯಬೇಕು ಎಂದು ತಿಳಿಸಿದರು.

ಮಳೆ ನೀರು, ಚರಂಡಿ ನೀರು ಸರಾಗವಾಗಿ ಹರಿಯಲು ಕಾಲುವೆ, ಚರಂಡಿ, ಕಲ್ವರ್ಟ್‌ಗಳ ಅಡೆತಡೆ ತೆರವು ಮಾಡಿಸಬೇಕು. ಮೇಲಿನ ಸ್ಲಾ್ಯಬ್‌ ಪರಿಶೀಲಿಸಿ, ದುರಸ್ಥಿಪಡಿಸಬೇಕು. ವಿದ್ಯುತ್‌ ಕಂಬ, ಲೈನ್‌ಗಳ ಇನ್ಸುಲೇಟರ್‌, ಸ್ವಿಚ್‌ ಅರ್ಥಿಂಗ್‌ ವ್ಯವಸ್ಥೆಯನ್ನು ಪರಿಶೀಲಿಸುವುದು, ಯಾವುದೇ ವಿದ್ಯುತ್‌ ಅವಘಡ ಸಂಭವಿಸದಂತೆ ಜಾಗ್ರತೆ ವಹಿಸಿ. ಶಿಥಿಲ ಕಂಬಗಳಿದ್ದರೆ ಅವುಗಳನ್ನು ಬದಲಿಸಲು ಕೆಪಿಟಿಸಿಎಲ್‌, ಬೆಸ್ಕಾಂಗೆ ಸೂಚನೆ ನೀಡಿದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಗತ್ಯ ಔಷಧಗಳ ದಾಸ್ತಾನು ಇರುವಂತೆ ನೋಡಿಕೊಳ್ಳಿ. ರಕ್ಷಣಾ ಕಾರ್ಯಕ್ಕೆ ಬೇಕಾದ ಬೋಟ್‌, ಮುಳುಗು ತಜ್ಞರು, ಇತರೆ ಸಾಮಗ್ರಿಗಳು, ರಕ್ಷಣಾ ಸಿಬ್ಬಂದಿ ನಿಯೋಜನೆಗೆ ಸಿದ್ಧಪಡಿಸಿಕೊಳ್ಳಬೇಕು ಎಂದು ಹೇಳಿದರು.

ಹರಿಹರ, ಹೊನ್ನಾಳಿ ತಾಲೂಕಿನಲ್ಲಿ ತುಂಗಭದ್ರಾ ನದಿ ಹಾದು ಹೋಗಿದ್ದು, ರಕ್ಷಣಾ ಸಿಬ್ಬಂದಿ ಸಿದ್ಧವಾಗಿರಬೇಕು. ದೊಡ್ಡ ಹಳ್ಳ, ಹೊಂಡಗಳಲ್ಲಿ ಬತ್ತ ಹಾನಿ, ಬೆಳೆಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಉಭಯ ತಾಲೂಕುಗಳ ತಹಸೀಲ್ದಾರರಾದ ರಾಮಚಂದ್ರಪ್ಪ, ತುಷಾರ್‌ ಬಿ.ಹೊಸೂರ್‌ಗೆ ಸೂಚಿಸಿದರು.

ಸಚಿವ, ಸಂಸದರಿಂದ ರೈಲ್ವೆ 100 ಅಡಿ ವರ್ತುಲ ರಸ್ತೆ ಕಾಮಗಾರಿ ವೀಕ್ಷಣೆ

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ಗೊಬ್ಬರ ದಾಸ್ತಾನಿರಬೇಕು. ರಸಗೊಬ್ಬರ ದಾಸ್ತಾನು ಕಡಿಮೆ ಇದ್ದರೆ ತಿಳಿಸಿ, ಸರ್ಕಾರದೊಂದಿಗೆ ಈ ಬಗ್ಗೆ ಚರ್ಚಿಸುತ್ತೇವೆ. ಕಳಪೆ ಬಿತ್ತನೆ ಬೀಜದ ಬಗ್ಗೆ ದೂರು ಇವೆ. ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಿ. ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಮಾರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌ ಮಾತನಾಡಿ, ಅಕಾಲಿಕ ಮಳೆಯ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದೆ. ಬತ್ತದ ಬೆಳೆ ಹೆಚ್ಚು ಹಾನಿಗೀಡಾಗಿದ್ದು, ದಾವಣಗೆರೆ ತಾಲೂಕು 355 ಹೆಕ್ಟೇರ್‌, ಹರಿಹರ 86 ಹೆಕ್ಟೇರ್‌, ಹೊನ್ನಾಳಿ 24 ಹೆಕ್ಟೇರ್‌, ನ್ಯಾಮತಿ 266 ಹೆಕ್ಟೇರ್‌ ಬತ್ತದ ಬೆಳೆಹಾನಿಯಾಗಿದೆ ಎಂದರು. ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನವರ್‌ ಮಾತನಾಡಿ, ಜಿಲ್ಲೆಯಲ್ಲಿ 38 ಹೆಕ್ಟೇರ್‌ ಅಡಿಕೆ ನಾಶವಾಗಿದೆ. ರೈತರ ಬಾಳೆ ನಾಶವಾದರೆ 12,500 ರು. ಪರಿಹಾರ ನೀಡಲಾಗುವುದು. ಅಡಕೆ ಬೆಳೆಗಾರರಿಗೆ 18 ಸಾವಿರ ರು., ಹೂವಿನ ಬೆಳೆಗಾರರಿಗೆ ಹೆಕ್ಟೇರ್‌ಗೆ 25 ಸಾವಿರ ರು. ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

Follow Us:
Download App:
  • android
  • ios