ಬೆಂ-ಮೈ ಹೈವೇನಲ್ಲಿ ಅಪಘಾತ ತಡೆಗೆ ಕ್ರಮವಹಿಸಿ: ಸಂಸದ ಸುರೇಶ್ ಸೂಚನೆ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಕ್ರಮವಹಿಸುವಂತೆ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಮನಗರ (ಜು.14): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಕ್ರಮವಹಿಸುವಂತೆ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಗುರುತಿಸಲಾಗಿರುವ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯಾಗಿ ರೋಡ್ ಸೈನ್‌ಗಳು, ಕ್ಯಾಮೆರಾಗಳನ್ನು ಅಳವಡಿಸಬೇಕು. ವೇಗವಾಗಿ ಚಲಿಸುವ ವಾಹನಗಳಿಗೆ ದಂಡ ವಿಧಿಸುವಂತೆ ತಿಳಿಸಿದರು.
ಅಪಘಾತ ತಡೆಗೆ ಜಂಟಿ ಸಮೀಕ್ಷೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜನಿಯರ್‌ಗಳು ಸೇರಿ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸದಂತೆ ಕ್ರಮವಹಿಸಲು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸಲಹೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಸೇರಿದಂತೆ ಭಾರಿ ವಾಹನಗಳು ಬಲಭಾಗದಲ್ಲಿ ಸಂಚರಿಸುತ್ತಿದ್ದು ಅವುಗಳು ಎಡಭಾಗದ ಮೊದಲ ಮತ್ತು ಎರಡನೇ ಲೈನ್‌ನಲ್ಲಿ ಸಂಚರಿಸಲು ಕ್ರಮವಹಿಸಬೇಕು.
ವರ್ಗಾವಣೆ ರೇಟ್‌ಕಾರ್ಡ್: ಕುಮಾರಸ್ವಾಮಿ-ಚೆಲುವರಾಯಸ್ವಾಮಿ ವಾಗ್ವಾದ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಮಯದಲ್ಲಿ ಕೆರೆಗಳು ಹಾಳಾಗಿದ್ದು, ಇವುಗಳನ್ನು ದುರಸ್ತಿ ಮಾಡಬೇಕು. ಹೆದ್ದಾರಿಯ ಪ್ರವೇಶ ಮತ್ತು ಹೊರ ಹೋಗುವ ಮಾರ್ಗಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅವಶ್ಯವಿರುವ ಕಡೆ ಪ್ರವೇಶ ಮತ್ತು ಹೊರ ಹೋಗುವ ಮಾರ್ಗಗಳನ್ನು ನಿರ್ಮಿಸಲು ಕ್ರಮ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ದೇವಿಕಾ ರಾಣಿ ಎಸ್ಟೇಚ್ ಹತ್ತಿರ ಆನೆಗಳು ಸಂಚಾರ ಮಾಡುತ್ತಿದ್ದು ಇಲ್ಲಿ ಆನೆ ಕಾರಿಡಾರ್ ನಿರ್ಮಿಸುವುದು. ಅವಶ್ಯವಿರುವ ಕಡೆ ರಾರಯಂಪ್ ನಿರ್ಮಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು.
ರಾಮನಗರದಲ್ಲಿ ಪ್ರವಾಹ ಉಂಟಾದಾಗ ರಸ್ತೆಗಳು ಮತ್ತು ಚರಂಡಿಗಳು ಹಾಳಾಗಿದ್ದು, ಇವುಗಳನ್ನು ಸಹ ದುರಸ್ತಿಗೊಳಿಸಬೇಕು. ರಾಮನಗರ ಸುತ್ತಮುತ್ತಲು ಅಪಘಾತವಾಗುವಂತಹ ವಡೇರಹಳ್ಳಿ, ಬೂದಯ್ಯನದೊಡ್ಡಿ, ಅಚಲು, ಪಾದರಹಳ್ಳಿ, ಬಿದರಹಳ್ಳಿ ಕಟ್ಟೆ, ಗೊಲ್ಲರದೊಡ್ಡಿ ಸೇರಿದಂತೆ ಪ್ರಮುಖ 25 ಅಪಘಾತ ಸ್ಥಳಗಳನ್ನು ಗುರುತಿಸಿದ್ದು ಈ ಸ್ಥಳಗಳಲ್ಲಿ ಅಪಘಾತ ಸಂಭವಿಸದಂತೆ ಕ್ರಮ ವಹಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಸಲಹೆ ನೀಡಿದರು.
ರಾಮನಗರ ಜಿಲ್ಲೆಯ ಬಿಡದಿ, ಹಾರೋಹಳ್ಳಿ, ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣಗಳ ಮುಖ್ಯರಸ್ತೆಯಲ್ಲಿ ಜಂಕ್ಷನ್‌ಗಳು ಇದ್ದರು ಸಹ ಇವು ಸಮರ್ಪಕವಾಗಿಲ್ಲ. ಆದ್ದರಿಂದ ಸದರಿ ಜಂಕ್ಷನ್ ಗಳನ್ನು ದುರಸ್ತಿಗೊಳಿಸಲು ಕ್ರಮವಹಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು. ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಅವಿನಾಶ್, ಜಿಲ್ಲಾ ಪಂಚಾಯತ್ ಸಿಇಒ ದಿಗ್ವಿಜಯ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ 46 ಸಾವಿರ ರೌಡಿಶೀಟರ್‌ಗಳು: ಸಚಿವ ಪರಮೇಶ್ವರ್ ಮಾಹಿತಿ
ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕು. ಅಪಘಾತವಾದ ಒಂದು ಗಂಟೆಯೊಳಗಿನ ಗೋಲ್ಡನ್ ಅವರ್‌ನಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಪ್ರಾಣ ಉಳಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್(ಅಪಘಾತ ವೈದ್ಯಕೀಯ ಸೇವಾಕೇಂದ್ರ) ಸ್ಥಾಪಿಸಲಾಗುವುದು. ಇದು ಆರಂಭಗೊಂಡಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕುವ ಮೂಲಕ ಅಪಘಾತಕ್ಕೊಳಗಾದವರ ಪ್ರಾಣ ರಕ್ಷಣೆ ಸಾಧ್ಯವಾಗಲಿದೆ.
-ಡಿ.ಕೆ.ಸುರೇಶ್, ಸಂಸದರು