ಮಂಗಳೂರು(ಆ.16): ಅಧಿಕಾರಿಗಳೆಂದರೆ ಅಧಿಕಾರ ಚಲಾಯಿಸುವುದು ಮಾತ್ರ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇಲ್ಲೊಬ್ಬರು ತಾಲೂಕು ತಹಸೀಲ್ದಾರರು ಇದಕ್ಕೆ ಅಪವಾದ ಎಂಬಂತಿದ್ದಾರೆ.

ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಜಾರುಮಲೆ ಎಂಬಲ್ಲಿ ಕಳೆದ ಶುಕ್ರವಾರ ಸುರಿದ ಮಹಾಮಳೆ ಹಾಗೂ ಪ್ರವಾಹಕ್ಕೆ ಪುರಾತನ ಸೇತುವೆ ಕೊಚ್ಚಿಹೋಗಿತ್ತು. ಅಲ್ಲಿ ಸ್ಥಳೀಯರು ಹಾಗೂ ಸ್ಥಳಕ್ಕೆ ಬಂದ ಮಾಧ್ಯಮದವರ ನೆರವಿನಲ್ಲಿ ಬುಧವಾರ ಮರದಿಂದ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದರು.

ಮಂಗಳೂರು: ಕಟೀಲು ಪರಿಸರದಲ್ಲಿ ಮತ್ತೆ ನೆರೆ

ಈ ಸೇತುವೆ ಮೂಲಕ ಇನ್ನೊಂದು ಬದಿಯ 46 ಕುಟುಂಬಗಳಿಗೆ ದಿನಬಳಕೆಯ ಸಾಮಗ್ರಿಗಳನ್ನು ಕಂದಾಯ ಇಲಾಖೆ ಮೂಲಕ ಗುರುವಾರ ಪೂರೈಸಲಾಯಿತು. ಅಚ್ಚರಿಯ ಸಂಗತಿ ಎಂದರೆ, ಆಹಾರ ಸಾಮಗ್ರಿ ಪೂರೈಸುವಲ್ಲಿ ಮುಂಚೂಣಿ ವಹಿಸಿದ ಬೆಳ್ತಂಗಡಿ ತಹಸೀಲ್ದಾರ್‌ ಗಣಪತಿ ಶಾಸ್ತ್ರಿ ಅವರೇ ಅಕ್ಕಿಯ ಮೂಟೆಯನ್ನು ತಲೆಮೇಲೆ ಹೊತ್ತುಕೊಂಡು ಸೇತುವೆ ದಾಟಿ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ 16 ಬಗೆಯ ಸಾಮಗ್ರಿಗಳನ್ನು ಸಂತ್ರಸ್ತ ಕುಟುಂಬಗಳಿಗೆ ಕಳುಹಿಸಲಾಗಿದೆ. ಇತರರಲ್ಲಿ ಕೆಲಸ ಮಾಡಿಸುವ ಜೊತೆಗೆ ಸ್ವತಃ ತಾನೇ ಕೆಲಸ ಮಾಡುತ್ತಾ ಪ್ರೇರಣೆಯಾಗಿದ್ದಾರೆ ಈ ತಹಸೀಲ್ದಾರ್‌.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ವಾರ ತಾಲೂಕಿನ ವಿವಿಧ ಕಡೆಗಳಲ್ಲಿ ಪ್ರವಾಹ ಬಂದಾಗ ಇದೇ ತಹಸೀಲ್ದಾರ್‌ ನೇರವಾಗಿ ಅಖಾಡಕ್ಕೆ ಇಳಿದು ತೊಂದರೆಗೆ ಸಿಲುಕಿದವರನ್ನು ಬಚಾವ್‌ ಮಾಡುವಲ್ಲಿ ಕೈಜೋಡಿಸಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಮತಪೆಟ್ಟಿಗೆಯನ್ನು ತಲೆಮೇಲೆ ಹೊತ್ತುಕೊಂಡು ಸ್ಟ್ರಾಂಗ್‌ ರೂಂಗೆ ಸಾಗಿಸುವ ಮೂಲಕ ಎಲ್ಲರ ಶ್ಲಾಘನೆಗೆ ಒಳಗಾಗಿದ್ದರು.

ಇದೀಗ ನೆರೆ ಪೀಡಿತ ಸಂತ್ರಸ್ತರ ಬದುಕಿಗೆ ಸಾಮಾನ್ಯರಂತೆ ನೆರವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಹಸೀಲ್ದಾರ್‌ರ ಈ ಮಾದರಿ ನಡವಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ.