ಬ್ಯಾಡಗಿ: ಕಳಪೆ ಗುಣಮಟ್ಟದ ಖಾರದಪುಡಿ ತಯಾರಿಕಾ ಘಟಕದ ಮೇಲೆ ದಾಳಿ

ಕಳಪೆ ಗುಣಮಟ್ಟದ ಖಾರದಪುಡಿ ತಯಾರಿಕಾ ಘಟಕದ ಮೇಲೆ ದಾಳಿ| ತಹಸೀಲ್ದಾರ ಶರಣಮ್ಮ ನೇತೃತ್ವದ ತಂಡದಿಂದ ದಾಳಿ | ಘಟಕಕ್ಕೆ ಬೀಗ|ಗುಣಮಟ್ಟದ ಪರೀಕ್ಷೆಯಲ್ಲಿ ಕಳಪೆ ಎಂದು ಕಂಡು ಬಂದಲ್ಲಿ ಲೈಸೆನ್ಸ್ ರದ್ದು|ತಪ್ಪಿತಸ್ಥರ ವಿರುದ್ಧ ಎಫ್‌ಐಆರ್|

Tahashildar Raid on Poor Quality Chilly Manufacturing Plant in Byadgi in Haveri District

ಬ್ಯಾಡಗಿ[ಡಿ.25]: ಕಳಪೆ ಗುಣಮಟ್ಟದ ಖಾರದಪುಡಿ ತಯಾರಿಕೆಯಲ್ಲಿ ತೊಡಗಿದ್ದ ಘಟಕವೊಂದರ ಮೇಲೆ ದಿಢೀರ್ ದಾಳಿ ನಡೆಸಿದ ತಹಸೀಲ್ದಾರ ಶರಣಮ್ಮ ನೇತೃತ್ವದ ಆಹಾರ ಇಲಾಖೆ ಅಧಿಕಾರಿಗಳ ತಂಡವು ಪಟ್ಟಣದ ಇಸ್ಲಾಂಪುರ ಓಣಿಯಲ್ಲಿನ ಘಟಕವೊಂದನ್ನು ವಶಕ್ಕೆ ಪಡೆದು ಬೀಗ ಜಡಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. 

ಖಚಿತ ಮಾಹಿತಿ ಮೇರೆಗೆ ಮದ್ಯಾಹ್ನ 12 ಗಂಟೆ ಸುಮಾರಿಗೆ ದಾಳಿ ನಡೆಸಿದ ತಂಡವು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಖಾರದಪುಡಿ ಘಟಕವನ್ನು ಪರಿಶೀಲನೆ ನಡೆಸಿತು, ಘಟಕದ ಪರಿಶೀಲನೆ ವೇಳೆ ಖಾರದಪುಡಿಯಲ್ಲಿ ಮಿಶ್ರಣ ಮಾಡಲು ಕಾಳುಮೆಣಸು (ಪೆಪ್ಪರ್ )ಪತ್ತೆಯಾಯಿತು, ದಾಸ್ತಾನು ಮಾಡಿದ್ದ ಮೆಣಸಿನಕಾಯಿ ಚೀಲಗಳನ್ನು ಸುರುವಿದಾಗ ಬಿಳಿಗಾಯಿ ಮಿಶ್ರಿತ ಚೀಲಗಳು ಪತ್ತೆಯಾಗಿದ್ದು, ಅದರಲ್ಲಿ ಸಣ್ಣ ಹುಳಗಳು ಕಂಡು ಬಂದವು. 

ಮಸಿ ಬಳಿಯುವುದನ್ನು ಸಹಿಸಲು ಸಾಧ್ಯವಿಲ್ಲ: 

ಬ್ಯಾಡಗಿ ಮೆಣಸಿಕಾಯಿ ಹಾಗೂ ಖಾರದಪುಡಿ ಇಡೀ ವಿಶ್ವದಲ್ಲೇ ಪ್ರಸಿದ್ಧಿ, ಆದರೆ ಕೇವಲ ಲಾಭದಾಸೆಗಾಗಿ ಹತ್ತಾರು ಜನರು ಮಾಡುವ ಇಂತಹ ಹರಾಮಿ ಕೆಲಸದಿಂದ ನೂರಾರು ವರ್ಷದಿಂದ ಕಾಲ ರೈತರು ಮತ್ತು ವ್ಯಾಪಾರಸ್ಥರ ಪರಿಶ್ರಮದಿಂದ ಉಳಿಸಿಕೊಂಡು ಬಂದಂತಹ ಬ್ಯಾಡಗಿ ಹೆಸರಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ ಎಂದು ಮಾಲೀಕನನ್ನು ತಹಶೀಲ್ದಾರರು ತೀವ್ರ ತರಾಟೆಗೆ ತೆಗೆದುಕೊಂಡರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಹಸೀಲ್ದಾರ ಹಾಗೂ ತಂಡದವರ ದಾಳಿಯಿಂದ ವಿಚಲಿತನಾದಂತೆ ಕಂಡು ಬಂದ ಘಟಕದ ಮಾಲೀಕ, ನನ್ನದು ಕೇವಲ ಬಾಡಿಗೆ ರೂಪದಲ್ಲಿ ಖಾರದ ಪುಡಿ ಮಾಡಿಕೊಡುತ್ತೇನೆ, ಇದ್ಯಾವುದೂ ನನ್ನ ಸ್ವಂತದ್ದಲ್ಲ ಅಂತಹ ಹತ್ತಾರು ವ್ಯಾಪಾರಸ್ಥರು ನನ್ನ ಘಟಕದಲ್ಲಿದ್ದಾರೆ, ಅವರುಗಳ ವ್ಯಾಪಾರದ ಕಾರ್ಯ ವೈಖರಿ ಬಗ್ಗೆ ಪ್ರಶ್ನಿಸುವುದಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾದರು, ಇದರಿಂದ ಮತ್ತಷ್ಟು ಗರಂ ಆದಂತೆ ಕಂಡು ಬಂದ ತಹಸೀಲ್ದಾರ ಶರಣಮ್ಮ, ’ಏನ್ರೀ ಮೆಣಸಿನಕಾಯಿ ಜೊತೆ ಮಣ್ಣು ತಂದ್ರು ಖಾರದಪುಡಿ ಮಾಡಿ ಕೊಡ್ತೀರಾ..? ಮನುಷ್ಯರು ಇದನ್ನು ತಿನ್ನಬಹುದೇ ಇಂತಹ ಖಾರದಪುಡಿ ನಿಮ್ಮ ಮನೆಯಲ್ಲಿ ತಿನ್ನುತ್ತೀರಾ..? ಎಂದು ತರಾಟೆಗೆ ತೆಗೆದುಕೊಂಡರು. 

ಘಟಕದ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಿಕೊಂಡ ಅಧಿಕಾರಿಗಳು ತಂಡವು ಸ್ಥಳದಲ್ಲಿದ್ದ 8 ರಿಂದ 10 ಖಾರದಪುಡಿ ರಾಶಿಗಳ ಸ್ಯಾಂಪಲ್ ಪಡೆದು ಲ್ಯಾಬ್‌ಟೆಸ್ಟ್‌ಗೆ ಕಳುಹಿಸಿಕೊಟ್ಟರು, ಗುಣಮಟ್ಟದ ಪರೀಕ್ಷೆಯಲ್ಲಿ ಕಳಪೆ ಎಂದು ಕಂಡು ಬಂದಲ್ಲಿ ಲೈಸೆನ್ಸ್ ರದ್ದುಗೊಳಿಸುವುದಷ್ಟೇ ಅಲ್ಲ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಪತ್ರಿಕೆಗೆ ತಿಳಿಸಿದರು. 

ಘಟಕಕ್ಕೆ ಬೀಗ:

ತಹಸೀಲ್ದಾರ ಆದೇಶದ ಮೇರೆಗೆ ಆಹಾರ ಇಲಾಖೆ ನಿರೀಕ್ಷಕರ ಸಿಬ್ಬಂದಿ ಘಟಕಕ್ಕೆ ಬೀಗ ಜಡಿದು ವಶಕ್ಕೆ ತೆಗೆದುಕೊಂಡರು, ಗುಣಮಟ್ಟದ ಪರೀಕ್ಷಾ ವರದಿ ಬರುವವರೆಗೂ ಘಟಕ ತೆರೆಯುವಂತಿಲ್ಲ ಎಂದು ನೋಟಿಸ್ ಅಂಟಿಸಿ ಅಲ್ಲಿಂದ ತೆರಳಿದರು. ಈ ಸಂದರ್ಭದಲ್ಲಿ ಆಹಾರ ನೀರೀಕ್ಷಕ ಬಿ.ಎಂ. ದೊಡ್ಡಮನಿ, ಕಂದಾಯ ನಿರೀಕ್ಷಕ ಕುಲಕರ್ಣಿ, ಗ್ರಾಮ ಲೆಕ್ಕಾಧಿಕಾರಿ ಗುಂಡಪ್ಪ, ಸೇರಿದಂತೆ ಇನ್ನಿತತರು ದಾಳಿ ನಡೆಸಿದ ತಂಡದಲ್ಲಿದ್ದರು.

ಈ ಬಗ್ಗೆ ಮಾತನಾಡಿದ ತಹಸೀಲ್ದಾರ ಶರಣಮ್ಮ ಕಾರಿ ಅವರು,  ಇಂದು ನಡೆದಿರುವ ದಾಳಿ ಕೇವಲ ಸ್ಯಾಂಪಲ್ ಅಷ್ಟೇ ಬ್ಯಾಡಗಿ ಹೆಸರನ್ನು ಉತ್ತುಂಗಕ್ಕೊಯ್ಯುವ ನಿಟ್ಟಿನಲ್ಲಿ ಯಾರೊಂದಿಗೂ ರಾಜಿಯಾಗುವ ಪ್ರಶ್ನೆ ಇಲ್ಲ, ಪಟ್ಟದಲ್ಲಿನ ಎಲ್ಲಾ ಘಟಕಗಳ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿ ದ್ದೇನೆ, ಖಾರದ ಪುಡಿ ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡದ ಘಟಕಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios