ಸುರಪುರ: ಅಧಿಕಾರಿಗಳೇ ಹೀಗ್ ಮಾಡಿದ್ರೆ ಹೇಗೆ ಸ್ವಾಮಿ? ದೂರು ಕೊಟ್ಟವರ ವಿರುದ್ಧವೇ ತಹಸೀಲ್ದಾರ ಗರಂ..!
ಸಮಸ್ಯೆ ಬಗ್ಗೆ ದೂರು ನೀಡಿದ ಗ್ರಾಮಸ್ಥರೊಬ್ಬರಿಗೆ ತಹಸೀಲ್ದಾರ್ ದಬಾಯಿಸಿದ ಆರೋಪ| ಕಚಕನೂರು ಭೀಮಣ್ಣ ಪ್ರಕರಣ ಬಗ್ಗೆ ತಮ್ಮನ್ನು ಸಂಪರ್ಕಿಸಿದ ‘ಕನ್ನಡ ಮಾತನಾಡಿದ್ದಾನೆ. ತಾಲೂಕಿನ ದಂಡಾಧಿಕಾರಿಯೊಂದಿಗೆ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ: ತಹಸೀಲ್ದಾರ ನಿಂಗಣ್ಣ ಬಿರಾದರ್|
ಯಾದಗಿರಿ/ಸುರಪುರ(ಜು.25): ಮಳೆಯಿಂದಾಗಿ ಚರಂಡಿ ನೀರು ಬಡಾವಣೆಯ ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ, ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಸೂಚಿಸಿ ಎಂಬ ಬಗ್ಗೆ ದೂರು ನೀಡಿದ ಗ್ರಾಮಸ್ಥರೊಬ್ಬರಿಗೆ ತಹಸೀಲ್ದಾರರೊಬ್ಬರು ಹಿಗ್ಗಾಮುಗ್ಗಾ ದಬಾಯಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಗೆ ಗ್ರಾಮದ ಚರಂಡಿಗಳೆಲ್ಲ ತುಂಬಿ ಹೋಗಿದ್ದು, ಕಲುಷಿತ ನೀರು ಮನೆಗೆ ನುಗ್ಗುತ್ತಿದೆ. ಪಂಚಾಯ್ತಿಯಲ್ಲಿ ಹೇಳಿದರೂ ಕೇಳುತ್ತಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿ ಎಂದು ಸುರಪುರ ತಾಲೂಕಿನ ಕಚಕನೂರು ಗ್ರಾಮದ ಭೀಮಣ್ಣ ಮೊಕಾಶಿ ಎನ್ನುವವರಿಗೆ ಸುರಪುರದ ತಹಸೀಲ್ದಾರ ನಿಂಗಣ್ಣ ಬಿರಾದರ್ ಅವರಿಗೆ ಫೋನ್ ಮಾಡಿದ್ದರು ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ದೂರು ನೀಡಿದ ಭೀಮಣ್ಣನನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ನೀರು ನಿಂತರೆ ತಹಸೀಲ್ದಾರರು ಬಂದು ನಿಮ್ಮ ಮನೆ ನೀರು ಬಳಿಯಬೇಕಾ? ನೀರು ನಿಂತರೆ ನಾನೇನು ಮಾಡಬೇಕು? ಪಿಡಿಓಗೆ ದೂರು ಕೊಡು. ಮನೆಯಲ್ಲಿ ನೀರು ನಿಂತರೆ ಮನೆ ಎತ್ತರಿಸಿಕೋ ಎಂದು ಕೆಂಡಾಮಂಡಾಲವಾದರು. ರಸ್ತೆಯಲ್ಲಿ ನೀರು ನಿಂತಿದ್ದರಿಂದಲೇ ಮನೆಗೆ ನುಗ್ಗಿದೆ, ರಸ್ತೆ ರಿಪೇರಿಯಾದರೆ ಆಗೋಲ್ಲ ಎಂದು ಹೇಳಿದರಲ್ಲದೆ, ಮನೆಯನ್ನೇ ಕಿತ್ತಿ ತೆಗೆಯಬೇಕಾ ಅಂದಾಗ, ಅಧಿಕಾರಿಗಳ ಈ ಉತ್ತರದಿಂದ ಕಂಗಾಲಾದ ಭೀಮಣ್ಣ, ಕಚೇರಿಗೆ ಬಂದು ಹೇಳುತ್ತೇನೆ ಎಂದಾಗ, ಬಾ ನೀನೇನು ದೊಡ್ಡ ಮಿನಿಸ್ಟರೇನ್ ಬಾ.. ಎಂದು ದಬಾಯಿಸಿದರು ಎಂದು ದೂರಲಾಗಿದೆ.
ಯಾದಗಿರಿ: ವರುಣನ ಅರ್ಭಟಕ್ಕೆ ತುಂಬಿದ ಹಳ್ಳಕೊಳ್ಳ..!
ತಹಸೀಲ್ದಾರರು ಭೀಮಣ್ಣ ಎನ್ನುವವರೊಡನೆ ಮಾತನಾಡಿದ್ದಾರೆ ಎನ್ನಲಾದ ಇಂತಹುದ್ದೊಂದು ಸಂಭಾಷಣೆಯ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಜನರಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಸಾರ್ವಜನಿಕರೊಡನೆ ಹೀಗೆ ವರ್ತಿಸಿದರೆ ಹೇಗೆ ಎಂಬ ಪ್ರಶ್ನೆ ಮೂಡಿಬರುತ್ತಿದೆ.
ಕಚಕನೂರು ಭೀಮಣ್ಣ ಪ್ರಕರಣ ಬಗ್ಗೆ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ'ದ ಜೊತೆ ಮಾತನಾಡಿದ್ದಾನೆ. ತಾಲೂಕಿನ ದಂಡಾಧಿಕಾರಿಯೊಂದಿಗೆ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ ಎಂದು 'ಕನ್ನಡಪ್ರಭ’ದೊಡನೆ ಮಾತನಾಡಿದ ತಹಸೀಲ್ದಾರ ನಿಂಗಣ್ಣ ಬಿರಾದರ್, ಭೀಮಣ್ಣ ಮೊಕಾಶಿ ಎಂಬುವವರು ಪದೇ ಪದೇ ಮೂರು ಬಾರಿ ಫೋನ್ ಮಾಡಿದಾಗ ಪಿಡಿಓ ಅವರನ್ನು ಕಳುಹಿಸುವುದಾಗಿ ಹೇಳಿದ್ದೇ. ಆದರೂ ಉಡಾಫೆಯಿಂದ ಕಚೇರಿಗೆ ಬರುತ್ತೇನೆ ಎಂದಾಗ ನೀವೇನು ಮಿನಿಸ್ಟರ್ ಅಲ್ಲ ಬನ್ನಿ ಎಂದು ಕರೆದಿದ್ದೇನೆ ಎಂದು ಪ್ರತಿಕ್ರಿಯಿಸಿದ ಅವರು, ವೃಥಾ ಆರೋಪ ಮಾಡಿದ್ದಾರೆ ಎಂದರು.
ಈ ಹಿಂದೆಯೂ ಕೂಡ, ಪುಣೆಯಿಂದ ಬಂದಿದ್ದ ವಲಸಿಗರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವಲ್ಲಿ ನಿರಾಸಕ್ತಿ ತೋರಿದ್ದರಿಂದ ಮಕ್ಕಳ ಸಮೇತ ದಂಪತಿ ಕುಟುಂಬವೊಂದು ಹೊಲದಲ್ಲಿನ ಮರದ ಕೆಳಗೆ ಮಳೆ ಲೆಕ್ಕಿಸದೆ ರಾತ್ರಿಯಿಡೀ ಕಳೆದದ್ದು ಹಾಗೂ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಆಹಾರಧಾನ್ಯ ಕಡಿತಗೊಳಿಸಿ ನೀಡಲಾಗುತ್ತಿದ್ದ ಅನ್ಯಾಯದ ಬಗ್ಗೆ ದೂರು ನೀಡಿದ ವ್ಯಕ್ತಿಯ ಮೇಲೆಯೇ ತಹಸೀಲ್ದಾರರು ಹರಿಹಾಯ್ದಿದ್ದ ಬಗ್ಗೆ ದೂರುಗಳು ಕೇಳಿಬಂದಿದ್ದವು.
ರಸ್ತೆಯಲ್ಲಿ ನೀರು ನಿಂತಿದ್ದರಿಂದಲೇ ಮನೆಗೆ ನುಗ್ಗಿದೆ, ರಸ್ತೆ ರಿಪೇರಿಯಾದರೆ ಆಗೋಲ್ಲ ಎಂದು ಹೇಳಿದರಲ್ಲದೆ, ಮನೆಯನ್ನೇ ಕಿತ್ತಿ ತೆಗೆಯಬೇಕಾ ಅಂತಾರೆ. ಕಚೇರಿಗೆ ಬಂದು ಹೇಳುತ್ತೇನೆ ಸರ್ ಎಂದಾಗ, ಬಾ ನೀನೇನು ದೊಡ್ಡ ಮಿನಿಸ್ಟರೇನ್ ಬಾ..! ಹೋಪ್ಲೆಸ್ ಫೆಲ್ಲೋ.. ನಾನ್ಸೆನ್ಸ್.. ಎಂದು ದಬಾಯಿಸಿದ್ದಾರೆ. ಜನರ ನೋವಿಗೆ ಸ್ಪಂದಿಸಬೇಕಾದ ಅಽಕಾರಿಯೇ ಹೀಗೆ ಉತ್ತರಿಸಿದರೆ ಹೇಗೆ? ಎಂದು ಕಚಕನೂರು ಗ್ರಾಮಸ್ಥ ಭೀಮಣ್ಣ ಮೊಕಾಶಿ ಅವರು ತಿಳಿಸಿದ್ದಾರೆ.
ಭೀಮಣ್ಣ ಮೊಕಾಶಿ ಎಂಬುವವರು ಪದೇ ಪದೆ ಮೂರು ಬಾರಿ ಫೋನ್ ಮಾಡಿದಾಗ ಪಿಡಿಓ ಅವರನ್ನು ಕಳುಹಿಸುವುದಾಗಿ ಹೇಳಿದ್ದೇ. ಆದರೂ ಉಡಾಫೆಯಿಂದ ಮಾತನಾಡಿದ್ದಾನೆ. ತಾಲೂಕಿನ ದಂಡಾಧಿಕಾರಿಯೊಂದಿಗೆ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದರ್ ಅವರು ತಿಳಿಸಿದ್ದಾರೆ.